ವಂದೇ ಭಾರತ್ ರೈಲಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಬೆಂಗಳೂರು: ವಂದೇ ಭಾರತ್ ರೈಲಿಗೆ ಸಿಲುಕಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆಯೊಂದು ನಗರದ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ನರ್ಸಿಂಗ್ ವಿದ್ಯಾರ್ಥಿಗಳು ದಾರುಣವಾಗಿ ಸಾವಿಗೀಡಾಗಿದ್ದಾರೆ ಎಂದುವರದಿಯಾಗಿದೆ. ಈ ವಿದ್ಯಾರ್ಥಿಗಳು ಕೇರಳ ಮೂಲದವರು ಎಂದು ತಿಳಿದುಬಂದಿದೆ.ಹಳಿ ದಾಟುವ ಸಮಯದಲ್ಲಿ ರೈಲು ಡಿಕ್ಕಿಯಾಗಿದೆ ಎನ್ನಲಾಗಿದೆ.

ಸ್ಟೆರ್ಲಿನ್ ಎಲಿಜ ಶಾಜಿ (19), ಜಸ್ಟಿನ್ ಜೋಸೆಫ್ (20) ಮೃತಪಟ್ಟಿರುವ ವಿದ್ಯಾರ್ಥಿಗಳು. ಈ ಇಬ್ಬರೂ ವಿದ್ಯಾರ್ಥಿಗಳು ಕೇರಳದ ಪಟ್ಟನಂತಿಟ್ಟ ಮೂಲದವರು. ಇವರು ಬೆಂಗಳೂರಿನ ಸಪ್ತಗಿರಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಸಮೀಪದ ಪೇಯಿಂಗ್ ಗೆಸ್ಟ್ ವಸತಿಯಲ್ಲಿ ನೆಲೆಸಿದ್ದರು. ದುರಂತ ಎಂಬಂತೆ ಬದುಕು ಕಟ್ಟಿಕೊಳ್ಳಲು ಬಂದಿದ್ದ ಇವರು ಈಗ ವಂದೇ ಭಾರತ್‌ ರೈಲಿಗೆ ಸಿಲುಕಿ ಭೀಕರವಾಗಿ ಸಾವಿಗೀಡಾಗಿದ್ದಾರೆ.

ಈ ಮಾರ್ಗದಲ್ಲಿ ಸುರಕ್ಷಿತ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ಇಲ್ಲದಿರುವುದು ಸ್ಥಳೀಯರ ಕುಂದುಕೊರತೆ. ಜನರು ಹಳಿಯನ್ನು ನೇರವಾಗಿ ದಾಟುವುದು ಸಾಮಾನ್ಯವಾಗಿದ್ದು, ಇದು ತುಂಬಾ ಅಪಾಯಕಾರಿಯಾಗಿದೆ ಎನ್ನಲಾಗಿದೆ. ವಂದೇ ಭಾರತ್‌ ರೈಲುಗಳ ವೇಗ ಹೆಚ್ಚಿರುವುದರಿಂದ ಹಳಿಗಳ ಬಳಿ ಅಜಾಗರೂಕತೆ ಜೀವಕ್ಕೆ ದೊಡ್ಡ ಅಪಾಯವಾಗುವುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದ್ರೆ ರೈಲ್ವೆ ಪೊಲೀಸರ ಮಾಹಿತಿ ಪ್ರಕಾರ, ಇಬ್ಬರು ಪಿಜಿಗೆ ಟ್ರ್ಯಾಕ್‌ ಮೂಲಕ ಹೋಗಲು ಮುಂದಾಗಿದ್ದರು. ಈ ವೇಳೆ ಹೈಸ್ಪೀಡ್‌ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಇದು ಅಚಾತುರ್ಯದ ಅಪಘಾತ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.


ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಯಿತು. ನಂತರ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ದುರದೃಷ್ಟಕರ ಘಟನೆಯು ರೈಲು ಹಳಿ ದಾಟುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಗಂಭೀರ ಚಿಂತನೆಗೆ ಹಚ್ಚಿದೆ. ಪೊಲೀಸರು ಈ ಸಂಬಂಧ ಅಸಹಜ ಸಾವಿನ ವರದಿ (UDR) ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಅಸಹಜ ಸಾವಿನ ವರದಿ ಅಡಿಯಲ್ಲಿ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಯುವಕ-ಯುವತಿ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸ ಆರಂಭಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories