ಅಕ್ಟೋಬರ್‌ 19ರ ಒಳಗೆ ಜಾತಿ ಸಮೀಕ್ಷೆ ಪೂರ್ಣ : ಮೃತ ಶಿಕ್ಷಕರಿಗೆ ತಲಾ 20 ಲಕ್ಷ ಪರಿಹಾರ

ಬೆಂಗಳೂರು: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೆ (Karnataka Caste Suvey) ಕಾರ್ಯವನ್ನು ಅಕ್ಟೋಬರ್‌ 19ರ ಒಳಗಾಗಿ ಪೂರ್ಣಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್‌ ನಡೆಸಿದ್ದಾರೆ. ಈ ವೇಳೆಯಲ್ಲಿ ಸಮೀಕ್ಷೆಯ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಸೆಪ್ಟೆಂಬರ್ 22 ರಿಂದ ರಾಜ್ಯದಲ್ಲಿ ಶಿಕ್ಷಕರು ಮನೆ ಮನೆಗೆ ತೆರಳಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಆದರೆ ಸಮೀಕ್ಷೆ ಇಂದು ಮುಕ್ತಾಯವಾಗಬೇಕಾಗಿತ್ತು. ಆದರೆ ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ.

ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 97 ರಷ್ಟು ಪೂರ್ಣಗೊಂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಶೇಕಡಾ 67 ರಷ್ಟು ಪೂರ್ಣವಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚೆ ನಡೆಸಿದೆ. 1 ಲಕ್ಷ 20 ಸಾವಿರ ಶಿಕ್ಷಕರು ಸೇರಿ ಒಂದು ಲಕ್ಷ ಅರವತ್ತು ಸಾವಿರ ಸಿಬ್ಬಂದಿಗಳು ಸಮೀಕ್ಷೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಶಿಕ್ಷಕರ ಮನವಿಯಂತೆ ರಜೆ ವಿಸ್ತರಣೆ

ವಿಧಾನ‌ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ ಸಂಘ ಹೆಚ್ಚುವರಿಯಾಗಿ 10 ದಿನಗಳ ಕಾಲ ಶಾಲಾ ರಜೆಯನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅಕ್ಟೋಬರ್‌ 18ರ ವರೆಗೆ ಸರಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ಅಕ್ಟೋಬರ್‌ 18ರ ವರೆಗೆ ದಸರಾ ರಜೆ ವಿಸ್ತರಣೆ

ಪಿಯು ಉಪನ್ಯಾಸಕರಿಗೆ ಸಮೀಕ್ಷೆಯಿಂದ ವಿನಾಯಿತಿ

ಅಕ್ಟೋಬರ್‌ 12ರಿಂದ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆ ನಡೆಯುತ್ತಿದ್ದು, ಸಮೀಕ್ಷೆ ಕಾರ್ಯದಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ.

ದೀಪಾವಳಿಗೂ ಮೊದಲೇ ಸಮೀಕ್ಷೆ ಪೂರ್ಣ

ಬೆಂಗಳೂರು ನಗರದಲ್ಲಿ ಒಟ್ಟು 6700 ಜನ ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿವೆ. ದಿನಕ್ಕೆ 10-15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಬೆಂಗಳೂರಿನಲ್ಲಿ ನರಕ ಚತುರ್ದಶಿಗೂ ಮೊದಲೇ ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ. ಶಿಕ್ಷಕರು ಕೂಡ ಇಷ್ಟರೊಳಗೆ ಸಮೀಕ್ಷೆ ಮುಗಿಸುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಜಾತಿ ಸಮೀಕ್ಷೆ : ಮೃತ ಶಿಕ್ಷಕರಿಗೆ ತಲಾ 20 ಲಕ್ಷ ಪರಿಹಾರ

ಜಾತಿ ಸಮೀಕ್ಷೆ ನಡೆಸುವ ವೇಳೆಯಲ್ಲಿ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಇವರಿಗೆ ತಲಾ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪದ, ಹಿಂದೇಟು ಹಾಕುವವರ ವಿರುದ್ದ ಸರಕಾರ ಶಿಸ್ತಿನ ಕ್ರಮಕೈಗಳ್ಳಲಾಗುವುದು. ಜಿಬಿಎ ಏರಿಯಾದಲ್ಲಿ ತಡವಾಗಿ ಸಮೀಕ್ಷೆ ಶುರುವಾಗಿದೆ ಎಂದರು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories