ಸಾರಿಗೆ ಮುಷ್ಕರದ ಎಚ್ಚರಿಕೆ! ಮೇ 20ರಂದು ಬಸ್‌ಗಳು ರಸ್ತೆಗಿಳಿಯುವುದು ಡೌಟು!
ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನೀಡಿದ್ದ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ನೌಕರರ ಸಮಿತಿ ತಿರಸ್ಕರಿಸಿದೆ

ವೇತನ ಹೆಚ್ಚಳ ಸೇರಿದಂತೆ ವಿವಿಧ ಅನೇಕ ಬೇಡಿಕೆಗಳ ಈಡೇರಿಕೆಯ ವಿಚಾರದಲ್ಲಿ ಅದ್ಯಾಕೋ ಸರ್ಕಾರ ಹಾಗೂ ಸಾರಿಗೆ ಇಲಾಖೆ ನೌಕರರಿಗೆ ತಾಳ ಮೇಳ ಕೂಡಿ ಬರುತ್ತಿಲ್ಲ. ಈಗಾಗಲೇ 12 ಸುತ್ತಿನ ಮಾತುಕತೆ ನಡೆಸಲಾಗಿದ್ದರೂ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ. ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನೀಡಿದ್ದ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ನೌಕರರ ಸಮಿತಿ ತಿರಸ್ಕರಿಸಿದೆ. ಹೀಗಾಗಿ ಮತ್ತೊಮ್ಮೆ ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟುವ ಕಾಲ ಸನ್ನಿಹಿತವಾಗಿದೆ.
ಹೌದು..! ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸಾರಿಗೆ ನೌಕರರು ಮೇ 20ರಂದು ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಮೇ ಮೂರನೇ ವಾರದಲ್ಲಿ ಸರ್ಕಾರಿ ಬಸ್‌ಗಳು ರೋಡಿಗಿಳಿಯುವುದು ಡೌಟು ಎನ್ನಲಾಗ್ತಿದೆ. ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟದಲ್ಲಿ ಪ್ರಯಾಣಿಕರು ಬಡವಾಗಬೇಕಿದೆ.
ಇನ್ನು ಸರ್ಕಾರದ ಎದುರು ಸಾರಿಗೆ ಇಲಾಖೆ ನೌಕರರು ಇಟ್ಟಿರುವ ಬೇಡಿಕೆ ನೋಡೋದಾದ್ರೆ, ಕಳೆದ 38 ತಿಂಗಳಿನಿಂದ ಬಾಕಿ ಇರುವ ವೇತನವನ್ನು ಒಮ್ಮೆಲೆ ಪಾವತಿಸಬೇಕು. 2024ರ ಜನವರಿ 1ಕ್ಕೆ ಪೂರ್ವಾನ್ವಯವಾಗುವಂತೆ ಮೂಲವೇತನದಲ್ಲಿ 25 ಪರ್ಸೆಂಟ್ ಏರಿಕೆ ಮಾಡಬೇಕು. ಮೂಲ ವೇತನದಲ್ಲಿ ತುಟ್ಟಿಭತ್ಯೆಯನ್ನೂಸೇರಿಸಬೇಕು. ಒಪ್ಪಿಕೊಂಡಿರುವ ₹1,272 ಕೋಟಿ ಬಾಕಿ ಮೊತ್ತವನ್ನು ಕಂತುಗಳಲ್ಲಿ ನೀಡುವ ಬದಲು ಏಕಗಂತು ಪಾವತಿ ಮಾಡಬೇಕು. ಬಾಟಾ ಮತ್ತು ಕೋವಿಡ್ ಸಮಯದ ಬಾಕಿ ಹಣವನ್ನು ತಕ್ಷಣವೇ ನೀಡಬೇಕು ಎಂದು ಆಗ್ರಹಿಸಿದೆ.
ಆದರೆ ಸಾರಿಗೆ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಹಿಂದೆಟು ಹಾಕುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಕಿ ಇರುವ 38 ತಿಂಗಳ ವೇತನವನ್ನು ಒಮ್ಮೆಲೆ ಪಾವತಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಆದರೆ ಬೇಡಿಕೆ ಈಡೇರದ ಹೊರತು ಬಸ್‌ಗಳು ರಸ್ತೆಗಿಳಿಯುವ ಮಾತೇ ಇಲ್ಲ ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ರಾಜ್ಯ ಸರ್ಕಾರ 3 ವರ್ಷಗಳ ಯಶಸ್ವಿ ಆಡಳಿತವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿಯೇ ರಾಜ್ಯ ಸಾರಿಗೆ ನೌಕರರು ಈ ನಿರ್ಧಾರಕ್ಕೆ ಬಂದಿದ್ದು, ಈ ಸವಾಲನ್ನು ರಾಜ್ಯ ಸರ್ಕಾರ ಹೇಗೆ ನಿಭಾಯಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.



