Mekedatu Padayatra Analysis: ಮೇಕೆದಾಟು ಪಾದಯಾತ್ರೆ: ಡಿ ಕೆ ಶಿವಕುಮಾರ್ 5 ದಿನ ಹರಿಸಿದ ಬೆವರಿಗಾದರೂ ಲಾಭವಾಯಿತೇ?

ಮೇಕೆದಾಟು ಪಾದಯಾತ್ರೆ ನಡೆಸಿಯೇ ತೀರುತ್ತೇವೆ ಎಂಬ ಭಯಂಕರ ಹುಕಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ನೇತೃತ್ವದಲ್ಲಿ ಪಾದಯಾತ್ರೆ (Mekedatu Padayatra) ಆರಂಭಿಸಿಯೇಬಿಟ್ಟರು. ಸ್ವತಃ ಕಾಂಗ್ರೆಸ್ ಪಕ್ಷದಲ್ಲಿಯೇ (Congress) ಈ ಪಾದಯಾತ್ರೆಗೆ ನೂರಕ್ಕೆ ನೂರು ಪ್ರತಿಶತ ಒಪ್ಪಿಗೆ ಇರಲಿಲ್ಲ. ಆದರೆ ಬಲಾಢ್ಯ ನಾಯಕನ ಮುಂದೆ ಪಕ್ಷದ ಇತರರ ಮಾತು ಯಾವ ಪಕ್ಷದಲ್ಲೂ ನಡೆಯುವುದಿಲ್ಲ ಎಂಬಂತೆ, ಕಾಂಗ್ರೆಸ್‌ನಲ್ಲಿಯೂ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತೇ ನಡೆಯಿತು. ಅಷ್ಟಕ್ಕೂ ನಿರ್ಣಯ ಕೈಗೊಳ್ಳುವವರು ಅವರೇ ಆಗಿದ್ದರಲ್ಲ, ನಡೆಯದೇ ಇರುತ್ತದೆಯೇ?! ಹಾಗಾದರೆ ಇಷ್ಟೆಲ್ಲ ಕಸರತ್ತು ಪಟ್ಟು ಡಿ.ಕೆ.ಶಿವಕುಮಾರ್ ಅವರು ಕೊಂಚವಾದರೂ ಲಾಭ ಗಳಿಸಿದಿರೇ? (Mekedatu Padayatra Analysis)

ಏನೇ ಆಗಲಿ, ಯಾರೇ ಅಡ್ಡ ಬರಲಿ, ಸ್ವತಃ ಐಜಿಪಿಯೇ ಬೇಡಿ ಹಿಡಿದು ಬಂಧಿಸಲು ಬರಲಿ, ನಾನು ಮತ್ತು ಸಿದ್ದರಾಮಯ್ಯ ಪಾದಯಾತ್ರೆ ನಡೆಸಿಯೇ ಸಿದ್ಧ ಎಂಬುದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನಿಲುವಾಗಿತ್ತು. ಪಾದಯಾತ್ರೆಗೆ ಬಸವರಾಜ ಬೊಮ್ಮಾಯಿ ಸರ್ಕಾರ ಅಡ್ಡ ಬಂದಲ್ಲಿ, ಜನರಲ್ಲಿ ತಮ್ಮ ಪರ ಅನುಕಂಪದ ಅಲೆಯನ್ನು ಬಿತ್ತರಿಸುವುದು ಪಕ್ಕಾ ಪ್ಲಾನ್ ಆಗಿತ್ತು ಎಂಬುದು ವಿಶ್ಲೇಷಕರ ಮಾತು.

ಆದರೆ ಪಾದಯಾತ್ರೆ ಶುರುವಾಗಿ ಐದನೇ ದಿನಕ್ಕೆ ಕೋರ್ಟ್‌ ಪ್ರವೇಶದಿಂದ ನಿಲ್ಲುವಂತಾಗಿದೆ. ಪಾದಯಾತ್ರೆ ಆರಂಭವಾದಂತೆ ಇತ್ತ ಕರ್ನಾಟಕದ ಕೋವಿಡ್ ಸೋಂಕಿತರ ಸಂಖ್ಯೆಯೂ ಶರವೇಗದಲ್ಲಿ ಏರತೊಡಗಿತ್ತು. ಇದು ಕಾಕತಾಳಿಯವೇ ಆಗಿರಬೇಕು ಎಂದು ಅಂದಾಜಿಸುವುದೊಂದೇ ರಾಜ್ಯದ ಜನರದ್ದಾಗಿತ್ತು.

ಡಿ.ಕೆ.ಶಿವಕುಮಾರ್‌ ಬೆವರು ಹರಿಸಿದ್ದಕ್ಕೆ ಲಾಭವಾಯ್ತಾ?
ಡಿ.ಕೆ.ಶಿವಕುಮಾರ್ ಅವರು ಸತತ ಐದು ದಿನ ನಡೆದೂ ನಡೆದೂ ಬೆವರು ಹರಿಸಿದರು. ದೈಹಿಕವಾಗಿಯೂ ಮಾನಸಿಕವಾಗಿಯೂ ಶ್ರಮಿಸಿದರು. ದೊಡ್ಡ ಮಟ್ಟದ ಹಣವನ್ನೂ ಖರ್ಚು ಮಾಡಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಕೊವಿಡ್ ಮತ್ತು ಕೋರ್ಟ್ ಅವರ ಶ್ರಮಕ್ಕೆ ತಡೆಹಾಕಿದೆ. ಹಾಗಾದರೆ ಐದು ದಿನದ ಅವರ ಶ್ರಮಕ್ಕೆ ಕೊಂಚವಾದರೂ ಲಾಭವಾಯ್ತಾ ಎಂದು ನೋಡಿದರೆ ಅಷ್ಟೇನೂ ಲಾಭವವಾಗಿದೆ ಅನಿಸುವುದಿಲ್ಲ. ಪಾದಯಾತ್ರೆ ಪ್ರಕ್ರಿಯೆಯಲ್ಲಿ ಅವರು ತೂರಾಡಿದ್ದು, ಬನಿಯನ್‌ನ್ನು ನದಿಗೆ ಬಿಟ್ಟಿದ್ದು, ಅವರ ಸೋದರ ಡಿ.ಕೆ.ಸುರೇಶ್ ಅವರು ಮೊಹಮ್ಮದ್ ನಳಪಾಡ್‌ ಅವರ ಕುತ್ತಿಗೆ ಪಟ್ಟಿ ಹಿಡಿದು ಎಳೆದದ್ದು ಡಿ.ಕೆ.ಶಿವಕುಮಾರ್ ಅವರನ್ನು ಟ್ರೋಲ್ ಮಾಡಲು ಒಳ್ಳೆಯ ವಸ್ತು ಒದಗಿಸಿತು. ತಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ರೂಪಿಸಿಕೊಳ್ಳಲು ಪಾದಯಾತ್ರೆಯ ಯೋಜನೆ ಹಮ್ಮಿಕೊಂಡರೂ ಅದನ್ನು ನಕಾರಾತ್ಮಕವಾಗಿ ಬಿಂಬಿಸಲು ಬಿಜೆಪಿ ಬಹುತೇಕ ಯಶಸ್ವಿಯಾಯಿತು.

ಬಿಜೆಪಿಗೆ?
ಬಿಜೆಪಿಗೆ ಲಾಭವಾದಂತೆ ಕಂಡರೂ ನಷ್ಟವೂ ಆಗಿದೆ ಎಂಬುದು ಪಕ್ಕಾ. ಬಿಜೆಪಿಯೆ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಬಿಜೆಪಿ ಸರ್ಕಾರ ರೂಪಿಸಿರುವ ಕೊವಿಡ್ ನಿರ್ಧಾರ ಪಾಲಿಸಲು ರಾಜ್ಯದ ಜನ ತಮ್ಮ ಮನೆಯ ಕಾರ್ಯಕ್ರಮಗಳನ್ನು ಬಂದ್ ಮಾಡಿದ್ದಾರೆ. ಆದರೆ ಈ ಕಾಂಗ್ರೆಸ್‌ ನಡೆಸುವ ಪಾದಯಾತ್ರೆಯನ್ನು ಮಾತ್ರ ಬಿಜೆಪಿ ಸರ್ಕಾರದ ಬಳಿ ನಿಲ್ಲಿಸಲು ಸಾಧ್ಯವಾಗಿಲ್ಲವಲ್ಲ..ಎಂಬ ಸಿಟ್ಟು ತಳಮಟ್ಟದ ಬಿಜೆಪಿ ಕಾರ್ಯಕರ್ತರನ್ನೂ ಸೇರಿ ಜನಸಾಮಾನ್ಯರಲ್ಲಿ ಮೂಡಿತು. ಈ ಸಿಟ್ಟನ್ನು ಬಿಜೆಪಿ ಹೇಗೆ ಆಶಮನ ಮಾಡಿಕೊಳ್ಳುತ್ತದೆಯೋ ಕಾದುನೋಡಬೇಕು.

ಇದನ್ನೂ ಓದಿ: Opinion: ಡಿ ಕೆ ಶಿವಕುಮಾರ್ ಅವರು ಪಾದಯಾತ್ರೆಯ ವೇಳೆ ತೂರಾಡಲು Vertigo ಸಮಸ್ಯೆಯೂ ಕಾರಣವಾಗಿರಬಹುದು

(Mekedatu Padayatra Analysis on Karnataka Politics DK Shivakumar Congress and BJP)

Comments are closed.