ಸಿದ್ದರಾಮಯ್ಯ ಬಣದಿಂದ ವಿದೇಶಿ ಪ್ರವಾಸ : ನಮ್ಮ ದುಡ್ಡು ನಮ್ಮಿಷ್ಟ ಎಂದ ‘ಕೈ’ ನಾಯಕರು
ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬದಲಾವಣೆ ನಡೆಯುತ್ತಲೇ ಇದ್ದು, ಇದೀಗ ಸಿದ್ದು ಬಣದ 10 ನಾಯಕರು ವಿದೇಶಿ ಪ್ರವಾಸ ಆರಂಭಿಸಿದ್ದಾರೆ. 2 ತಂಡಗಳಾಗಿ ಸಿದ್ದು ಬಣದಿಂದ ವಿದೇಶಿ ಪ್ರವಾಸ ನಡೆಯಲಿದ್ದು ಒಟ್ಟೂ 12 ದಿನಗಳ ಕಾಲ ಸ್ವಕ್ಷೇತ್ರಕ್ಕೆ ಶಾಸಕರು ಗುಡ್ ಬೈ ಹೇಳಿದ್ದಾರೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕೆ.ಪುಟ್ಟರಂಗಶೆಟ್ಟಿ, ನಾಗರಾಜ್ ಹಾಗು ಹಂಪನಗೌಡ ಬಾದರ್ಲಿ, ಎಂಎಲ್ಸಿ ವಸಂತಕುಮಾರ್, ಹೆಚ್‍ಡಿ ತಮ್ಮಯ್ಯ ಹಾಗೂ ದೇವೇಂದ್ರಪ್ಪ ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಚಾರವಾಗಿ ಮಾತನಾಡಿದ ಪುಟ್ಟರಂಗ ಶೆಟ್ಟಿ, ನಮ್ಮ ದುಡ್ಡಲ್ಲಿ ನಾವು ಪ್ರವಾಸ ಕೈಗೊಳ್ಳಲು ಯಾರ ಅನುಮತಿ ಪಡೆಯಬೇಕು? ದೇಶ ಸುತ್ತು ಕೋಶ ಓದು ಎಂದು ಗಾದೆ ಮಾತೇ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತ ಮಾಜಿ ಸಚಿವ ಕೆ.ಎನ್ ರಾಜಣ್ಣ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಶಾಸಕರು ವಿದೇಶಿ ಪ್ರವಾಸ ಮಾಡೋದ್ರಲ್ಲಿ ತಪ್ಪಿಲ್ಲ. ಅಲ್ಲಿನ ವಿದ್ಯಮಾನಗಳನ್ನು ಕಲಿತು ತಮ್ಮ ಕ್ಷೇತ್ರದಲ್ಲಿ ಪ್ರಯೋಗಿಸಿದರೆ ಒಳ್ಳೆಯದೇ ಅಲ್ವಾ ? ಎಂದು ಕೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಕೂಡೀ ವಿಚಾರವಾಗಿ ಮಾತನಾಡಿದ್ದು, ಅವರೇನು ಸರ್ಕಾರದ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳುತ್ತಿಲ್ಲ. ಅವರ ಹಣದಲ್ಲಿ ಅವರು ವಿದೇಶಿ ಪ್ರವಾಸಕ್ಕೆ ಹೋದರೆ ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡ ಈ ಸಂಬಂಧ ಪ್ರತಿಕ್ರಿಯಿಸಿದ್ದು , ಅವರ ಹಣದಲ್ಲಿ ಅವರು ಹೋದರೆ ನಾವು ಪ್ರಶ್ನೆ ಮಾಡಲು ಹೇಗೆ ಸಾಧ್ಯ. ಬಜೆಟ್ ಮಂಡನೆ ವಿಚಾರದಲ್ಲಿ ಅವರದ್ದೇನು ಪಾತ್ರ ಇರುವುದಿಲ್ಲ. ಹೀಗಾಗಿ ವಿದೇಶಿ ಪ್ರವಾಸಕ್ಕೆ ಹೋದರೆ ಬಜೆಟ್ಗೆ ಏನೂ ತೊಂದರೆ ಇಲ್ಲ ಎಂದು ಹೇಳಿದ್ದಾರೆ.



