ಶೀಘ್ರದಲ್ಲೇ ಡಿ.ಕೆ ಶಿವಕುಮಾರ್ ಈ ರಾಜ್ಯದ ಸಿಎಂ : ತುಳುನಾಡಿನ ದೈವದ ಭವಿಷ್ಯ
DK Shivakumar: ರಾಜ್ಯದಲ್ಲಿ ಸಿಎಂ ಬದಲಾವಣೆಯ ಮಾತು ಕೇಳಿ ಬರುತ್ತಿದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದು ರಾಜ್ಯಕ್ಕೆ ಡಿ.ಕೆ ಶಿವಕುಮಾರ್ ನೂತನ ಮುಖ್ಯಮಂತ್ರಿಗಳಾಗಲಿದ್ದಾರೆ ಎಂಬ ಊಹಾಪೋಹಗಳು ಬಲಗೊಂಡಿರುವ ಬೆನ್ನಲ್ಲೇ ಇದೀಗ ದೈವದ ಭವಿಷ್ಯವೊಂದು ಎಲ್ಲೆಡೆ ವೈರಲ್ ಆಗಿದೆ.
ಆದಷ್ಟು ಬೇಗ ಡಿ.ಕೆ ಶಿವಕುಮಾರ್ ಈ ನಾಡಿನ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ದೈವ ಭವಿಷ್ಯ ನುಡಿದಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿ ಇದಾಗಿದ್ದು ಡಿ.ಕೆ ಶಿವಕುಮಾರ್ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ತುಳುನಾಡಿನ ದೈವವೊಂದು ಈ ಉತ್ತರ ನೀಡಿದೆ.
ಈಗಾಗಲೇ ಭವಿಷ್ಯ ನುಡಿದಾಗಿದೆ. ಅವರಿಗೂ ತಿಳಿಸಲಾಗಿದೆ. ಅದರಂತೆ ನಡೆದುಕೊಳ್ಳಿ ಅಂತಾ ಅವರಿಗೂ ಸೂಚನೆ ನೀಡಲಾಗಿದೆ. ಅವರು ಆದಷ್ಟು ಬೇಗ ಈ ರಾಜ್ಯದ ಸಿಎಂ ಆಗಿ ಅಧಿಕಾರಕ್ಕೆ ಏರಲಿದ್ದಾರೆ ಎಂದು ಹೇಳಿದೆ.
ನನ್ನ ಮೇಲೆ ಅವರಿಗೆ ನಂಬಿಕೆ ಇದ್ದಲ್ಲಿ ಅವರನ್ನು ಆದಷ್ಟು ಬೇಗ ಸಿಎಂ ಸ್ಥಾನದಲ್ಲಿ ಕೂರಿಸುವ ಜವಾಬ್ದಾರಿ ನನ್ನದು ಎಂದು ದೈವ ನುಡಿಯುವ ಮೂಲಕ ಪ್ರಸಾದವನ್ನು ಡಿ.ಕೆ ಶಿವಕುಮಾರ್ ಅಭಿಮಾನಿಯ ಕೈಗಿಟ್ಟಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೈಕಮಾಂಡ್ ಒಪ್ಪಿಗೆ ನೀಡಿದರೆ ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹೈಕಮಾಂಡ್ಗೆ ಪರೋಕ್ಷ ಸಂದೇಶ ರವಾನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಹತ್ವದ ಕ್ಯಾಬಿನೇಟ್ ಸಭೆಯಲ್ಲಿ ಸಂಪುಟ ಸರ್ಜರಿ ಚರ್ಚೆ: ಮಂಗಳೂರಿನ ಅಲ್ಪಸಂಖ್ಯಾತರಿಗೆ ಸಿಹಿಸುದ್ದಿ
ಇತ್ತ ಡಿ.ಕೆ ಶಿವಕುಮಾರ್ ವರ್ತನೆ ನೋಡಿದರೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಡಿಕೆಶಿಗೆ ಸಿಎಂ ಪಟ್ಟ ಒಲಿಯಬಹುದೆಂಬ ಅನುಮಾನ ಮೂಡುತ್ತಿದೆ.
ರಾಜ್ಯದಲ್ಲಿ ಮುಂದೆ ಏನಾಗುತ್ತೆ? ಕರುನಾಡಿಗೆ ಹೊಸ ಸಿಎಂ ಸಿಗುತ್ತಾರಾ ಅಥವಾ ಸಿದ್ದರಾಮಯ್ಯರೇ ಸಿಎಂ ಆಗಿ ಐದು ವರ್ಷಗಳ ಯಶಸ್ವಿ ಆಡಳಿತ ನಡೆಸುತ್ತಾರಾ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.



