ಜಿ. ಪರಮೇಶ್ವರ್ಗೆ ಡಿಸಿಎಂ ಪಟ್ಟ, ಇಲ್ಲಿದೆ ಸಂಭಾವ್ಯ ಸಚಿವರ ಫೈನಲ್ ಲಿಸ್ಟ್!
ದೆಹಲಿಯಲ್ಲಿ ನಡೆದ ಹಲವು ದಿನಗಳ ಮ್ಯಾರಥಾನ್ ಸಭೆಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಈ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದು, ಅವರ ಸಚಿವ ಸಂಪುಟ ಸೇರಲಿರುವ 12 ಸಂಭಾವ್ಯ ಸಚಿವರ ಕೊನೆಯ ಹಂತದ ಫೈನಲ್ ಲಿಸ್ಟ್ ಲಭ್ಯವಾಗಿದೆ. ದೆಹಲಿಯಲ್ಲಿ ನಡೆದ ಹಲವು ದಿನಗಳ ಮ್ಯಾರಥಾನ್ ಸಭೆಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಈ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ (KIA) ಮಾತನಾಡಿದ ಮಾಜಿ ಸಚಿವ ಎಚ್.ಕೆ. ಪಾಟೀಲ್, “ಎಲ್ಲ ಸಮೀಕರಣಗಳನ್ನು ಪರಿಶೀಲಿಸಿಯೇ ವರಿಷ್ಠರು ಈ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸಂಭಾವ್ಯ ಸಚಿವರ ಫೈನಲ್ ಲಿಸ್ಟ್ನಲ್ಲಿ ಯಾರೆಲ್ಲ ಇದ್ದಾರೆ?
ಕೊನೆಹಂತದ ಲೆಕ್ಕಾಚಾರಗಳ ಪ್ರಕಾರ ಇಂದು ಪ್ರಮಾಣವಚನ ಸ್ವೀಕರಿಸಲಿರುವ 14 ಸಂಭಾವ್ಯ ನಾಯಕರ ಪಟ್ಟಿಯಲ್ಲಿ ಹಿರಿಯ ನಾಯಕರಾದ ಡಾ. ಜಿ. ಪರಮೇಶ್ವರ್, ಯತೀಂದ್ರ ಸಿದ್ದರಾಮಯ್ಯ ಮತ್ತು ಕೆ.ಎಚ್. ಮುನಿಯಪ್ಪ ಅಥವಾ ರೂಪಕಲಾ ಶಶಿಧರ್ ಅವರು ಸ್ಥಾನ ಪಡೆದಿದ್ದಾರೆ.
ಇವರೊಂದಿಗೆ ಯು.ಟಿ. ಖಾದರ್, ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ಎಂ.ಬಿ. ಪಾಟೀಲ್, ರಾಮಲಿಂಗ ರೆಡ್ಡಿ, ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ ಹಾಗೂ ಸತೀಶ್ ಜಾರಕಿಹೊಳಿ ಅವರ ಹೆಸರುಗಳೂ ಅಂತಿಮವಾಗಿವೆ ಎನ್ನಲಾಗುತ್ತಿದೆ.
ಜಿ. ಪರಮೇಶ್ವರ್ಗೆ ಮಾತ್ರ ಡಿಸಿಎಂ ಪಟ್ಟ?
ವಿವಿಧ ಸಮುದಾಯಗಳಿಂದ ಭಾರಿ ಒತ್ತಡವಿದ್ದರೂ, ಈ ಬಾರಿ ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಸ್ಥಾನಗಳನ್ನು ಸೃಷ್ಟಿಸಲು ಹೈಕಮಾಂಡ್ ಒಪ್ಪಿಲ್ಲ. ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಏಕೈಕ ಡಿಸಿಎಂ ಸ್ಥಾನ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಪಟ್ಟು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಹೆಸರು?
ಮತ್ತೊಂದೆಡೆ, ಸಚಿವ ಸ್ಥಾನದ ಜೊತೆಗೆ ತಮಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವೂ ಬೇಕೆಂದು ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರಿದ್ದಾರೆ. ಇದೇ ಕಾರಣಕ್ಕೆ ಅವರು ಎರಡು ದಿನಗಳ ಕಾಲ ದೆಹಲಿಯಲ್ಲೇ ಬೀಡುಬಿಟ್ಟಿದ್ದರು.
ಒಬ್ಬರಿಗೆ ಎರಡು ಹುದ್ದೆ ನೀಡಲು ಹಿಂಜರಿಯುತ್ತಿರುವ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆಯಿದೆ. ಒಂದು ವೇಳೆ ಸತೀಶ್ ಜಾರಕಿಹೊಳಿ ಅವರ ಪಟ್ಟು ಸಡಿಲವಾಗದಿದ್ದರೆ, ಹಿಂದುಳಿದ ವರ್ಗದ ಮತ್ತೊಬ್ಬ ಪರ್ಯಾಯ ನಾಯಕನನ್ನು ಹುಡುಕಲು ದೆಹಲಿ ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.



