ಸಿಎಂ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರ ಕಾರ್ಯಕ್ರಮದಲ್ಲಿ ಕಲ್ಲು ಎಸೆದ ಘಟನೆ ನಡೆದಿದೆ. ಬಸವರಾಜ ರಾಯರೆಡ್ಡಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗಲೇ ಅವರಿದ್ದ ವೇದಿಕೆ ಮೇಲೆ ಕಲ್ಲು ಎಸೆಯಲಾಗಿದೆ. ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನ್ನದಾನೇಶ್ವರ ಮಠದ ಆವರಣದಲ್ಲಿ ಜನಸಂಪರ್ಕ ಕಾರ್ಯಕ್ರಮದಲ್ಲಿ ಬಸವರಾಜ ರಾಯರೆಡ್ಡಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಭಾಷಣ ಮಾಡಲು ಆರಂಭಿಸುತ್ತಿದ್ದಂತೆಯೇ ಕಲ್ಲು ಎಸೆಯಲಾಗಿದೆ.
ವೇದಿಕೆಯ ಮೇಲೆ ಈ ರೀತಿ ಕಲ್ಲೆಸೆತ ನಡೆಯುತ್ತಿದ್ದಂತೆಯೇ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಗ್ರಾಮಸ್ಥರೆಲ್ಲ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಲ್ಲೆಸೆತ ಮಾಡಿದವರು ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.
ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿ ಇದು ಯಾವುದೇ ದ್ವೇಷದಿಂದ ನಡೆದ ಕಲ್ಲೆಸೆತ ಅಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಅಲ್ಲದೇ ಈ ಘಟನೆಯಲ್ಲಿ ಬಸವರಾಜರಾಯರೆಡ್ಡಿ ಅವರಿಗೆ ಯಾವುದೇ ಗಾಯಗಳಾಗಿಲ್ಲ.



