ಬಸರಿ ಮರದಿಂದ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿದರೆ ನಿಜಕ್ಕೂ ಮನುಷ್ಯನಿಗೆ ಎಫೆಕ್ಟ್ ಆಗುತ್ತಾ..? ಭಾಗ -17

0

ಸುಮಿತ್ರಾ ಬಾಯಿಯ ಸ್ಥಿತಿ ಕಂಡು ಅಕ್ಷರಶಃ ಮರುಗಿದವನು ನಾನು. ಆದ್ರೆ ಅಲ್ಲಿ ನಾನು ಏನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ…ಯಾಕಂದ್ರೆ ಎಲ್ಲರೂ ಭಾನಾಮತಿಯನ್ನ ನಂಬುವವರೇ ತುಂಬಿಕೊಂಡಿದ್ದರು. ಆ ದಿನ ರಾತ್ರಿ ಕುಲಕರ್ಣಿ ಅಜ್ಜನಿಗೊಂದು ನಮಸ್ಕಾರ ಹಾಕಿ ಮನೆಗೆ ಬಂದು ಮಲಗಿದ್ವಿ. ರಾತ್ರಿ ಪೂರ್ತಿ ನನಗೆ ಸುಮಿತ್ರಾ ಬಾಯಿಯ ವರ್ತನೆಯ ಬಗ್ಗೆಯೇ ಕಾಡತೊಡಗಿತ್ತು. ನಿದ್ದೆ ಬರಲಿಲ್ಲ. ಒಬ್ಬ ಬರಹಗಾರನಿಗೆ ಬರಹದ ವಿಚಾರ ಪೂರ್ತಿಯಾಗಿ ತಿಳಿಯುವ ತನಕ ನಿದ್ದೆ ಹತ್ತೋದಿಲ್ಲ. ಅದೇ ರೀತಿ ನಿದ್ದೆ ಬರಲಿಲ್ಲ. ಮರುದಿನ ಬೆಳಿಗ್ಗೆ ಇಬ್ಬರು ಎದ್ದವರೇ ಸೀದಾ ಕುಲಕರ್ಣಿ ಅಜ್ಜನ ಮನೆಗೆ ಹೋಗಿದ್ವಿ. ಪ್ರೀತಿಯಿಂದ ಸ್ವಾಗತಿಸಿದ ಅಜ್ಜ ನಮಗೆ ಚಹಾ ಮಾಡಿಕೊಟ್ಟು ನಮ್ಮ ಮುಂದೆ ಪವಡಿಸಿತ್ತು.

ನಾನೇ ಮಾತು ಆರಂಭಿಸಿದ್ದೇ. ರಾತ್ರಿಯೆಲ್ಲ ತಲೆ ಕೊರೆದಿದ್ದ ಸುಮಿತ್ರಾಬಾಯಿ ವಿಚಾರವನ್ನು ತೆಗೆದಿದ್ದೆ. ಅಜ್ಜ. ಇದು ಮನೋವಿಕಲತೆ ಇರಬೇಕು. ಯಾರಾದ್ರೂ ಒಳ್ಳೆ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಿ ತೋರಿಸಿದ್ರೆ ಸರಿ ಹೋಗುತ್ತೆ. ಊಹುಂ.. ಅಜ್ಜನ ಕಡೆಯಿಂದ ಉತ್ತರವಿಲ್ಲ. ಅಜ್ಜನ ಮುಖದಲ್ಲಿ ನನಗೆ ಗೊತ್ತಾಗಿದ್ದು ಒಂದು. ಅಜ್ಜ ಅದಾಗಲೇ ಸಾಕಷ್ಟು ಬಾರಿ ಈ ಜನರಿಗೆ ಹೇಳಿ ಸೋತಿದೆ ಅನ್ನೋದು. ಬಾರಜ್ಜ. ಈಗ ಹೋಗಿ ಸುಮಿತ್ರಾ ಬಾಯಿಯನ್ನು ಮಾತಾಡಿಸಿಕೊಂಡು ಬರೋಣ ಅಂತ ಕರೆದಿದ್ದೇ…ಅವರೆಲ್ಲಿದ್ದಾರಪ್ಪ..? ಅವರು ಮುಂಜಾನೆಯೇ ಉಕ್ಕಡಗಾತ್ರಿಗೆ ಹೋಗಿದ್ದಾರೆ ಎಂದಿದ್ದ…ಅಯ್ಯೋ…ಇಲ್ಲಿ ಈ ತರಹದ ಘಟನೆಗಳಿಗೆ ಕೊರತೆ ಇಲ್ಲ ಕಣಪ್ಪಾ ನಿನಗೆ ಇನ್ನೊಂದು ಉದಾಹರಣೆ ಹೇಳ್ತೀನಿ ಕೇಳು…
ಅದೊಂದು ಮುಸ್ಲಿಂ ಕುಟುಂಬ… ಮನೆ ಒಡೆಯನ ಹೆಸರು ಅಜೀಜ್ ಪಾಷಾ.. ಮನೆಯೊಡತಿ ಶಹನಾಜ್… ಬರೋಬ್ಬರಿ ಹನ್ನೆರಡು ಮಕ್ಕಳು… ಮೊದಲ ನಾಲ್ವರಿಗೆ ಈಗಾಗಲೇ ಮದುವೆಯಾಗಿದೆ…ಮೊಮ್ಮಕ್ಕಳಾಗಿದ್ದರೂ ಆ ಮಹಾತಾಯಿ ತನ್ನ ಒಂದೂವರೆ ವರ್ಷದ ಹನ್ನೆರಡನೇ ಮಗುವಿಗೆ ಹಾಲೂಣಿಸುತ್ತಿದ್ದಳು…ಅಂತಹ ಕುಟುಂಬಕ್ಕು ಭಾನಮತಿ ಕಾಟ ತಪ್ಪಲಿಲ್ಲ…ಹೌದು.. ಆ ಮನೆಯವರನ್ನ ಭಾನಮತಿ ಕಾಡೋಕೆ ಆರಂಭಿಸಿತ್ತಂತೆ…

ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಎಲ್ಲರೂ ಪಕ್ಕದ ಊರಿನ ದರ್ಗಾಕ್ಕೆ ಹೋಗಿದ್ದರು… ಅಕ್ಕ ತಂಗಿ ವಯಸ್ಸಿಗೆ ಬಂದಿದ್ದರು… ಮನೆಯ ರೂಮಿನಲ್ಲಿ ನೇತಾಕಿದ್ದ ಸೀರೆಯೊಂದಕ್ಕೆ ಧಗ್ಗನೆ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿತ್ತಂತೆ….ಅಕ್ಕ ತಂಗಿ ಇಬ್ಬರೂ ಬಂದು ನೋಡುವಷ್ಟರಲ್ಲಿ ಸೀರೆ ಸುಟ್ಟು ಬೂದಿಯಾಗಿತ್ತು…ಗಾಬರಿಗೆ ಬಿದ್ದವರೇ ಆ ಬೂದಿಯನ್ನು ಗುಡಿಸಿ ಹಾಕೋಕೆ ಅಂತ ಪೊರಕೆ ತರೋಕೆ ಒಬ್ಬಳು ಹೋದ್ಲು…ಅಲ್ಲಿ ಚೇಳುಗಳ ರಾಶಿ…ಕಿಟಾರನೆ ಕಿರುಚಿಕೊಂಡಿದ್ದಾಳೆ…ಅಕ್ಕಪಕ್ಕದವರನ್ನು ಕೂಗಿದ್ದಾರೆ…ಅವರೆಲ್ಲ ಬಂದು ಸೇರಿಕೊಳ್ಳುವ ಹೊತ್ತಿಗೆ ಚೇಳುಗಳೆಲ್ಲ ಮಾಯ…ಇತ್ತ ಸೀರೆ ಸುಟ್ಟ ಜಾಗದಲ್ಲಿದ್ದ ಬೂದಿಯೂ ಮಾಯ..! ನೇತಾಕಿದ್ದ ಸೀರೆ ಹಾಗೆಯೇ ಇದೆ… ಇವರ ಕೈಗಳ ಮೇಲೆ ಬರೆಗಳು ಮೂಡಿವೆ… ಇದನ್ನು ಕಂಡ ಮಗ್ಗುಲ ಮನೆಯ ಹಿರಿಯನೊಬ್ಬ.. ಓ ಇದು ಭಾನಾಮತಿ ಕಾಟ ಅಂತ ಚೀರಿದ್ನಂತೆ…ಉಳಿದವರು ಹೌದೌದು ಅಂತ ತಲೆಯಾಡಿಸಿದ್ದರಂತೆ…ಮನೆ ಯಜಮಾನ ಅಜೀಜ್ಗೂ ವಿಚಾರ ತಿಳಿದು ಹತ್ತಾರು ದೇವಸ್ಥಾನಗಳಿಗೆ, ಮಾಂತ್ರಿಕರ ಬಳಿಗೆ ಕರೆದೊಯ್ದಿದ್ದಾನೆ… ಆದರೆ ಇವತ್ತಿಗೂ ಇದು ಹಾಗೆಯೇ ಮುಂದುವರಿದಿದೆ ಕಣಪ್ಪಾ ಅಂತ ಕುಲಕರ್ಣಿ ಅಜ್ಜ ಕತೆ ಮುಗಿಸಿದ್ದ …

ಅಜ್ಜನ ಮಾತಿನಲ್ಲಿ ದೃಢತೆ ಇತ್ತು…. ಆದ್ರೆ ನನಗೆ ನಂಬೋದು ಬಿಡೋದು ಗೊತ್ತಾಗಲಿಲ್ಲ…ಈ ಭಾಗದ ಜನರು ಹೇಳುವಂತೆ ಇದಕ್ಕೆಲ್ಲಾ ಕಾರಣ ಭಾನಮತಿ… ಇದರ ಮುಂದೆ ನಾವೇನು ಮಾಡೋಕಾಗಲ್ಲ… ಇದು ನಮ್ಮ ತಾತ ಮುತ್ತಾತನ ಕಾಲದಿಂದಲೂ ಐತ್ರಿ… ಕೆಲವರು ಭಾನಮತಿ ಮಾಡೋದು ಹೊಟ್ಟೆಪಾಡಿಗೆ ಹಣದಾಸೆಗೆ ಕಲ್ತು ಕಾಟ ಕೊಡುತ್ತಿದ್ದಾರೆ ಅಂತಲೇ ಹೇಳ್ತಾರೆ ಈ ಭಾಗದ ಜನರು..
ಕುಲಕರ್ಣಿ ಅಜ್ಜನ ಜೊತೆ ಎರಡು ದಿನಗಳ ಕಾಲ ಕಳೆದಿದ್ದೀನಿ… ಆತನ ಮಾತಿನಲ್ಲಿ ಸ್ಪಷ್ಟತೆ ಇತ್ತು… ಆಗಲೇ ನನ್ನನ್ನು ಕಾಡಿದ ಪ್ರಶ್ನೆಯೊಂದೇ ಈ ಬಾನಾಮತಿ ಅನ್ನೋದು ನಿಜವಾ..? ಈ ಘನಘೋರ ವಿದ್ಯೆಯನ್ನು ಹೇಗೆ ಕಲಿತ್ತಾರೆ..? ಬಸರಿ ಮರದ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿದರೆ ನಿಜಕ್ಕೂ ಮನುಷ್ಯನಿಗೆ ಎಫೆಕ್ಟ್ ಆಗುತ್ತಾ..? ಈ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದ್ದು ಬೀದರ್ ಜಿಲ್ಲೆಯ ಮನ್ನಾಖೇಳಿ ಎಂಬ ಗ್ರಾಮದಲ್ಲಿ…ಅದನ್ನ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ..

(ಮುಂದುವರಿಯುತ್ತದೆ….)

  • ಕೆ.ಆರ್. ಬಾಬು

Leave A Reply

Your email address will not be published.