ಮಾಂತ್ರಿಕನ ಮಾಟದ ಆಟ..! ಬಲಿಗೆ ಕೋಳಿಯನ್ನೇ ಕೇಳೋದು ಯಾಕೆ ಗೊತ್ತಾ..? ಭಾಗ – 8

0

ಮಾಂತ್ರಿಕನ ಮನೆಯಲ್ಲಿ ನನ್ನ ಕಣ್ಣಿಗೆ ಕತ್ತಿ, ಗುರಾಣಿ, ಒಂದು ಮರದ ತುಂಡಿನಿಂದ ಮಾಡಿದ ಬೊಂಬೆ, ಮರದ ಪಾದುಕೆ, ಭರ್ಜಿ, ಈಟಿ, ಸಪ್ಪೆ ದಾರ ಒಣಗಿ ಕರಕಲಾದ ನಿಂಬೆ ಹಣ್ಣುಗಳ ರಾಶಿ, ಮಣ್ಣಿನ ಹೆಂಟೆಗಳು ಇದ್ದಿಲಮಸಿ ರಂಗೋಲಿ, ಭರಣಿಗಳ ತುಂಬಾ ಅರಿಶಿನ ಕುಂಕುಮ ಚಿಣಿಮಿಣಿ ಮಿಂಚುವ ವಸ್ತ್ರಗಳು ಅಲ್ಲಿ ಗೋಚರಿಸಿದ್ವು..

ಇನ್ನು ಸರಿಯಾದ ಒಂದು ಮಳೆ ಬಿದ್ದರೆ ಈ ಮಾಂತ್ರಿಕನ ಮೋಡಿಗಾರನ ಮನೆ ಕುಸಿದರೆ ಹೋಗುತ್ತದೇನೋ ಎನ್ನುವಂತೆ ಆ ಮನೆಯ ಗೋಡೆಗಳಿದ್ವು. ಆ ಗೋಡೆಗಳ ಮೇಲೆ ತನ್ನ ಪೂರ್ವಿಕರ ಫೋಟೋ ಸಿದ್ದಪ್ಪಾಜಿ ಗುರುಗಳ ಫೋಟೋ ಮಂಟೇಸ್ವಾಮಿ ರಾಚಪ್ಪಾಜಿ ಫೋಟೋಗಳು ಎಲ್ಲೋ ಮಾಟ ತೆಗೆಯುತ್ತಿರುವ ಮೋಡಿ ಆಟ ಪ್ರದರ್ಶನ ಮಾಡಿದ ಫೋಟೋಗಳನ್ನು ನೇತುಹಾಕಲಾಗಿತ್ತು. ನಾನು ಸುಮ್ಮನಿರುವ ಜಾಯಮಾನದವನು ಅಲ್ಲಾ, ಹೀಗಾಗಿ ಆ ಗೋಡೆಯ ಮೇಲಿರುವ ಫೋಟೋಗಳ ಬಗ್ಗೆ ಮರದ ಪಾದುಕೆ ಬಗ್ಗೆ, ಅಲ್ಲಿರುವ ಯಾವುದೇ ವಸ್ತುವಿನ ಬಗ್ಗೆ ಕೇಳಿದ್ರು ಅದಕ್ಕೆ ಥಟ್ಟನೆ ಆ ಮಾಂತ್ರಿಕ ಒಂದು ಕಥೆ ಹೆಣೆಯುತ್ತಿದ್ದ..

ನಿಜ ಹೇಳ್ಬೇಕು ಅಂದ್ರೆ ಈ ಮಾಟ ಮಂತ್ರಗಳು ಮೂಢನಂಬಿಕೆಗಳು ಅಗ್ರಸ್ಥಾನದಲ್ಲಿ ಇರೋ ಮನೆಯೊಳಗೆ ಹವಾಮಾನ ವೈಪರೀತ್ಯಕ್ಕೆ ಜ್ವರ ಬಂದ್ರೆ ಆರೋಗ್ಯದಲ್ಲಿ ಸಾಕಷ್ಟು ಏರು ಪೇರಾದರೆ ಅದಕ್ಕೆ ಯಾರೋ ಮಾಟ ಮಾಡಿಸಿದ್ದಾರೆ ಎಂದು ಹೇಳಲಾಗುತ್ತೆ.. ಹೀಗೆ ಮಾಟ ಮಾಡಿಸಿದ್ದಾರೆ ಎಂದು ಹೇಳಲಿಕ್ಕೂ ಒಂದು ಕಾರಣವಿರುತ್ತದೆ..ಅದು ಆಸ್ತಿ ಜಗಳಕ್ಕೆ ದಾಯಾದಿಗಳ ಕಲಹ ವಿರಬಹುದು ಅಥವಾ ಮನೆ ಮಗ್ಗುಲಿನ ನೆರೆಹೊರೆಯವರೊಂದಿಗೆ ಕಿತ್ತಾಟ ಮಾಡಿಕೊಂಡಾಗ ಮಾಟ ಮಾಡಿಸಿ ಅವರ ಕುಟುಂಬವನ್ನು ಸರ್ವನಾಶ ಮಾಡೋಕೆ ಇಂತಹ ಪ್ರಯತ್ನಗಳು ನಡೆಯುತ್ತವೆ..

ಅಲ್ಲಾ.. ಅಲ್ಲೆಲ್ಲೋ ಗುಡಿಸಲಿನಂಥ ಮನೆಯೊಳಗೆ ಕೂತು ಹತ್ತು ಹದಿನೈದು ಸಾವಿರ ಪೀಕಿ ಒಂದಷ್ಟು ಬುರುಡೆ ಬಿಟ್ಟು ಮಾಟ ಮಾಡ್ತೀನಿ, ನಿನ್ನ ಶತ್ರುಗಳಿಗೆ ಇನ್ನಿಲ್ಲದ ಕಾಟ ಕೊಟ್ಟು ಕೊಡ್ತೀನಿ ಅಂತ ಕಾಸು ಪೀಕಿ ಅವರಿಂದ ಒಂದು ಪೂಜೆ ಮಾಡಿಸಿ ಅದಕ್ಕೆ ಕೋಳಿ ಮೊಟ್ಟೆ ನಿಂಬೆಹಣ್ಣು ಒಂದು ಸರಿಯಾದ ಉಂಡೆ ಕೋಳಿ ತರಿಸಿಕೊಂಡು ಬಂದವರಿಗೆ ನಂಬಿಕೆ ಬರಲಿ ಅಂತ ಅಮಾವಾಸ್ಯೆಯ ರಾತ್ರಿ ಅವರನ್ನು ಸ್ಮಶಾನದೊಳಗೆ ಕರೆದೊಯ್ದು ಕೋಳಿ ಕೊಯ್ದು , ಮೊಟ್ಟೆಯನ್ನು ಯಾವುದಾದರೂ ಒಂದು ಸಮಾಧಿಯ ಮೇಲಿಟ್ಟ ಮಂತ್ರ ಹೇಳಿ ಒಂದು ಮಡಿಕೆಗೆ ಸೆಪ್ಪೆ ದಾರ ಸುತ್ತಿ, ಉಪ್ಪು ಮೆಣಸಿನ ಕಾಯಿ ಇದ್ದಿಲು ಮೆಣಸು ಹಾಕಿ ಕುಯ್ದು ಕೋಳಿಯ ಒಂದೆರಡು ತೊಟ್ಟು ರಕ್ತ ಅನುಕಿಸಿ ನಿಂಬೆ ಹಣ್ಣನ್ನು ಅದರೊಳಗೆ ಇಟ್ಟು ಮುಚ್ಚಿ, ಮಾಟ ಮಾಡಿದ್ದಾಗಿದೆ. ಇದನ್ನು ತೆಗೆದುಕೊಂಡು ಹೋಗಿ ನಿಮ್ಮ ಶತ್ರುಗಳ ಮನೆಯ ಉತ್ತರ ದಿಕ್ಕಿಗೆ ಬರುವ ಯಾವುದಾದರೂ ಮೂಲೆಯಲ್ಲಿ ಯಾರಿಗೂ ತಿಳಿಯದಂತೆ ಇಟ್ಟು ಬಿಡಿ ಅಂತೇಳಿ ಕಳಿಸಿದ್ರೆ ಮಾಟ ಮುಗಿಸಿದಂತೆ…

ಆತ ಕೊಟ್ಟ ಮೂರು ರೂಪಾಯಿ ಸಾಮಗ್ರಿಯನ್ನು ಬಲು ಜೋಪಾನವಾಗಿ ಬಗಲಲ್ಲಿಟ್ಟುಕೊಂಡು ಅವನ ಕೈಗೆ ಹದಿನೈದು ಸಾವಿರ ಹಣ ಕೊಟ್ಟು ಬರುವ ಈ ಎಡಬಿಡಂಗಿ ಜನ ಸ್ವಾಮಿ ನಮ್ಮಪ್ಪಾ ಅಂತ ಅವನಿಗೆ ಕೈ ಮುಗಿದು ಬಂದುಬಿಡ್ತಾರೆ. ಆ ಮಾಟಗಾರ ನೀವು ಕೊಟ್ಟ ಕಾಸಲ್ಲಿ ಕಂಠಮಟ್ಟ ಎಣ್ಣೆ ಕುಡಿದು ನೀವೇ ಕೊಟ್ಟ ಕೋಳಿಯಲ್ಲಿ ಸಾರು ಮಾಡಿಕೊಂಡು ತಿಂದು ನೆಮ್ಮದಿಯಾಗಿ ಮಲಗಿ ಬಿಡ್ತಾನೆ.. ಇತ್ತ ಜನ ಅವನು ಕೊಟ್ಟ ಮಡಕೆಯನ್ನು ತಂದು ಶತ್ರುವಿನ ಜಮೀನಿನಲ್ಲಿ ಹೂತು ಹಾಕಿ ಇಂದಿಗೆ ನಮ್ಮ ಶತ್ರುವಿನ ನಿರ್ನಾಮವಾಯಿತು ಅಂತ ಹೇಳ್ಕೊಂಡು ನೆಮ್ಮದಿಯಾಗಿರುತ್ತಾರೆ …ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಒಂದೇ ಆಯ್ತು ಎಂಬಂತೆ ಏನಾದ್ರೂ ಆದ್ರೆ ಆತನ ಬಗ್ಗೆ ಹೇಳಿಕೊಂಡು ತಿರುಗ್ತೀರಾ… ನೀವೊಂದಿಷ್ಟು ಕಸ್ಟಮರ್ಸ್ ಗಳನ್ನು ಅವನಿಗೆ ಕೊಡ್ತೀರಾ..ಅದಿರಲಿ ಈ ಮಾಂತ್ರಿಕನ ಬಳಿ ಐದು ನಿಗ್ರಾಣ ಶಕ್ತಿಗಳು ಇರುತ್ತವೆಯಂತೆ… ನೀವು ಇವರು ಹಾವು ಚೇಳು ಸೃಷ್ಟಿಸಿ ತಿನ್ನೋದನ್ನು ನೋಡಿರಬಹುದು ಅದು ಹೇಗೆ ಮಾಡ್ತಾರೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ…

(ಮುಂದುವರಿಯುವುದು….)

  • ಕೆ.ಆರ್.ಬಾಬು

Leave A Reply

Your email address will not be published.