ಇದು ಕೇರಳದ ಶಕ್ತಿಶಾಲಿ ಶಿವನ ಆಲಯ : ಇಲ್ಲಿ ಹೆಣ್ಣು ಮಕ್ಕಳಿಗೆ ಹಗಲಲ್ಲಿ ಇಲ್ಲ ಪ್ರವೇಶ

Rajarajeswara Temple : ಕೇರಳ ದೇವಾಲಯಗಳ ನಾಡು. ಇಲ್ಲಿ ಪೂಜೆಗೊಳ್ಳದ ದೇವರುಗಳೇ ಇರಲಿಕ್ಕಿಲ್ಲ. ಶಿವ ಪರಮಾತ್ಮನಿಂದ ಹಿಡಿದು ಪಾರ್ವತಿ, ವಿಷ್ಣು, ಸುಬ್ರಹ್ಮಣ್ಯ , ಗಣೇಶ ಹೀಗೆ ದೇವಾಲಯಗಳ ಸಾಲು ನಮಗೆ ಸಿಗುತ್ತದೆ.

ಇಷ್ಟೆಲ್ಲ ದೇವಾಲಯಗಳಿದ್ದರೂ ಪ್ರತಿಯೊಂದು ದೇವಾಲಯಕ್ಕೂ ಒಂದಾದರೂ ಪುರಾಣದ ನಂಟು ಇರುವುದು ವಿಶೇಷ ಅನ್ನಬಹುದು. ಅದರಲ್ಲೂ 108 ದೇವಾಲಯಗಳು ಅಲ್ಲಿ ಅತ್ಯಂತ ಪ್ರಮುಖ ದೇವಾಲಯಗಳು ಅನಿಸಿಕೊಳ್ಳುತ್ತದೆ.

ಇಂಥ ದೇವಾಲಯಗಳು ಒಂದು ದೇವಾಲಯ ಈ ರಾಜರಾಜೇಶ್ವರ ದೇವಸ್ಥಾನ. ಹೌದು ಇದು ಜಗತ್ತಿಗೆ ಭಗವಂತನನ್ನು ರಾಜನೆನ್ನುವಂತೆ ಆರಾಧಿಸುವ ದೇವಾಲಯ. ಸಾಮಾನ್ಯವಾಗಿ ಪಾರ್ವತಿಯನ್ನು ರಾಜರಾಜೇಶ್ವರಿಯಾಗಿ ಪೂಜಿಸುವ ಸಂಪ್ರದಾಯವಿದೆ.

ಆದರೆ ಇಲ್ಲಿ ಮಾತ್ರ ಮಹಾದೇವನನ್ನು ರಾಜರಿಗೆ ರಾಜ ಎನ್ನುವಂತೆ ಆರಾಧಿಸಲಾಗುತ್ತದೆ. ಇದು ಮೊದಲು ಹೇಳಿದಂತೆ 108 ದೇವಾಲಯಗಳಲ್ಲಿ ಪ್ರಮುಖವೆನಿಸಿಕೊಂಡಿರುವಂತಹ ದೇವಾಲಯ ಇದಕ್ಕೆ ಕಾರಣ ಇಲ್ಲಿನ ಸ್ಥಳ ಪುರಾಣದಲ್ಲಿ ಹೇಳಲಾಗಿರುವ ಇದರ ವಿಶಿಷ್ಟತೆ.

ಲಿಂಗರೂಪದಲ್ಲಿ ನೆಲೆನಿಂತ ಶಿವ

ಇಲ್ಲಿ ಮಹಾದೇವ ಮೂರು ಲಿಂಗದ ರೂಪದಲ್ಲಿ ನೆಲೆ ನಿಂತಿದ್ದಾನೆ . ಒಂದೇ ಸ್ಥಳದಲ್ಲಿ ಮೂರು ಲಿಂಗಗಳು ಪ್ರತಿಷ್ಠಾಪಿತವಾಗಿದ್ದು, ಇದನ್ನು ಅಮೃತಲಿಂಗವೆಂದು ಕರೆಯುತ್ತಾರೆ. ನಿತ್ಯ ಇದಕ್ಕೆ ತುಪ್ಪದ ಅಭಿಷೇಕ ಮಾಡುವುದು ಕಡ್ಡಾಯ.

ಇಲ್ಲವಾದಲ್ಲಿ ದೇವಾಲಯಕ್ಕೆ ತೊಂದರೆ ಆಗುತ್ತೆ ಅನ್ನೋದು ಇಲ್ಲಿನ ಜನರ ನಂಬಿಕೆ. ಇದಕ್ಕೆ ಕಾರಣ ಇಲ್ಲಿ ಸ್ಥಳ ಪುರಾಣದಲ್ಲಿನ ಹೇಳಲಾಗಿರುವ ಕಥೆ.ಇಲ್ಲಿನ ಪುರಾಣದ ಪ್ರಕಾರ ಈ ಲಿಂಗಗಳು ಬ್ರಹ್ಮನಿಂದ ಕೊಡಲ್ಪಟ್ಟಿದ್ದು ಎಂದು ನಂಬಲಾಗುತ್ತೆ .

ಸತ್ಯಯುಗಕ್ಕಿಂತ ಮುನ್ನ ಬ್ರಹ್ಮದೇವರ ಪುತ್ರರಾದ ಸತ್ ಕುಮಾರರು ಈ ಲಿಂಗವನ್ನು ವಿಶೇಷವಾದ ಮರಳು ಹಾಗೂ ಅಮೃತ ತತ್ವದಿಂದ ಮಾಡಿ ಬ್ರಹ್ಮದೇವರಿಗೆ ನೀಡಿದರಂತೆ. ಮುಂದೆ ಬ್ರಹ್ಮದೇವರು ಈ ಲಿಂಗಗಳನ್ನು ಪಾರ್ವತಿ ದೇವಿಗೆ ನೀಡಿದರಂತೆ.

ಇದಾಗಿ ಸತ್ಯಯುಗದ ಆರಂಭವಾದಾಗ ಇದರಿಂದ ಒಂದು ಲಿಂಗವನ್ನು ಪಾರ್ವತಿ ದೇವಿಯು ಮಾಂದಾತಾ ಎಂಬ ಋಷಿಗಳಿಗೆ ನೀಡಿ, ಇದನ್ನು ಭೂಮಿಯಲ್ಲಿ ಯಾವುದೇ ಜೀವಿಯು ಸಾವನ್ನಪ್ಪದ ಹಾಗೂ ಯಾರನ್ನು ಅಂತ್ಯಕ್ರಿಯೆ ಮಾಡದ ಜಾಗದಲ್ಲಿ ಸ್ಥಾಪಿಸಬೇಕು ಎಂದರಂತೆ.

ಹೀಗೆ ಹುಡುಕಿಕೊಂಡು ಹೊರಟ ಮಾಂದಾತರು ಇಲ್ಲಿಯ ತಳಿಪರಂಬ ಎಂಬ ಸ್ಥಳಕ್ಕೆ ಆಗಮಿಸಿ ಅಲ್ಲಿ ಪ್ರತಿಷ್ಠಾಪಿಸುತ್ತಾರೆ. ಆದರೆ ಅಲ್ಲಿಯ ದೈವಿಶಕ್ತಿಯ ಕಂಪನದಿಂದಾಗಿ ಆ ಶಿವಲಿಂಗವು ಭೂಮಿಯ ಆಳಕ್ಕೆ ಸೇರಿಕೊಳ್ಳುತ್ತದೆ.

ಇದಾದ ನಂತರ ದ್ವಾಪರ ಯುಗದಲ್ಲಿ ಪಾರ್ವತಿ ದೇವಿಯು ಮತ್ತೆ ಎರಡನೇ ಲಿಂಗವನ್ನು ಮಾಂದಾತರ ಪುತ್ರ ಮುಚಕೊಂಡನಿಗೆ ನೀಡಿ, ಭೂಮಿಯಲ್ಲಿ ಯಾವುದೇ ಜೀವಿಯು ಸಾವನ್ನಪ್ಪದ ಕಡೆಯಲ್ಲಿ ಪ್ರತಿಷ್ಠಾಪಿಸುವಂತೆ ಹೇಳುತ್ತಾರೆ.

ಇದನ್ನೂ ಓದಿ : ಸಮುದ್ರದ ನಡುವಿನಲ್ಲಿದೆ ಶಿವ ದೇವಾಲಯ : ಭಕ್ತರ ದರ್ಶನಕ್ಕಾಗಿ ಸ್ವಯಂ ದಾರಿ ಬಿಟ್ಟು ಕೊಡುತ್ತೆ ಸಾಗರ

ಅದೇ ರೀತಿ ಮುಚಿಕುಂದ ಕೂಡ ಭೂಮಂಡಲ ಸುತ್ತಿ ಕೇರಳದ ತಳಿಪರಂಬಕ್ಕೆ ಬಂದು ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರಂತೆ . ಆದರೆ ಆಗ ಕೂಡ ಶಿವಲಿಂಗ ಭೂಗರ್ಭಕ್ಕೆ ಸೇರಿಹೋಯಿತು.

ಮುಂದೆ ದ್ವಾಪರದ ಅಂತ್ಯದಲ್ಲಿ ಪಾರ್ವತಿ ದೇವಿಯು ಮೂರನೇ ಲಿಂಗವನ್ನು ಶತಸೋಮ ಎಂಬ ರಾಜನಿಗೆ ನೀಡುತ್ತಾಳೆ. ಆತನು ಕೂಡಾ ಹುಡುಕುತ್ತಾ ಬಂದು ಇದೇ ಸ್ಥಳದಲ್ಲಿ ಆ ಲಿಂಗವನ್ನು ಪ್ರತಿಷ್ಠಾಪಿಸಲಾಗಿ ಅದು ಮತ್ತೆ ಭೂಗರ್ಭಕ್ಕೆ ಸೇರಿಕೊಳ್ಳುತ್ತದೆ.

ಆಗ ಶತಸೋಮನು ಗೊಂದಲಕ್ಕೊಳಗಾಗಿ ಅಗಸ್ತ್ಯಮುನಿಗಳ ಸಹಾಯವನ್ನು ಕೇಳಿದನಂತೆ. ಆಗ ಅಲ್ಲಿಗೆ ಆಗಮಿಸಿದ ಅಗಸ್ತ್ಯರು ಆ ಲಿಂಗಗಳ ಮುಂದೆ ತುಪ್ಪದ ದೀಪವನ್ನು ಬೆಳಗಿ 12 ನಮಸ್ಕಾರ ಮಾಡುತ್ತಾರೆ.

ಆ ವೇಳೆಗೆ ಮೂರೂ ಲಿಂಗಗಳು ಭೂಮಿಯಿಂದ ಮೇಲೆ ಬಂದು ಪ್ರತಿಷ್ಠಾಪಿತವಾದವು ಎಂದು ಹೇಳಲಾಗುತ್ತದೆ. ಅಂದಿನಿಂದ ಇಂದಿನವರೆಗೆ ಅಲ್ಲಿ ತುಪ್ಪದ ದೀಪವನ್ನು ದೇವರಿಗೆ ಅರ್ಪಿಸುವ ಪದ್ಧತಿ, ನಡೆದು ಬಂದಿದೆ.

ಇದನ್ನೂ ಓದಿ : ಅಂಗಾರಕ ಚತುರ್ಥಿಯಂದು ಗಣಪನಿಗೆ ಅರ್ಪಿಸಿ ಕಡಲೆ

ಪರಶುರಾಮರು ನಿರ್ಮಿಸಿದ ದೇವಾಲಯ

ಒಂದು ವೇಳೆ ಈ ಪದ್ದತಿ ನಿಂತು ಹೋದಲ್ಲಿ ಲಿಂಗಗಳು ಮತ್ತೆ ಭೂಮಿಯನ್ನು ಸೇರುತ್ತದೆ ಎಂಬ ನಂಬಿಕೆ ಇದೆ. ಈ ದೇವಾಲಯವನ್ನು ಮೊದಲು ಭಗವಾನ್ ಪರಶುರಾಮರು ನಿರ್ಮಿಸಿದರು ಎನ್ನುವ ನಂಬಿಕೆ ಇದೆ.

ದ್ವಾಪರದಲ್ಲಿ ಒಂದು ಬಾರಿ ಪರಶುರಾಮರು ಇಲ್ಲಿಗೆ ಬಂದಾಗ ಇಲ್ಲಿನ ದೈವೀಶಕ್ತಿಗಳ ಅರಿವಾಗಿ ನಾರದರಿಂದ ಸ್ಥಳ ಮಹಿಮೆಯನ್ನು ಅರಿತು ಮೊದಲು ದೇವಾಲಯವನ್ನು ನಿರ್ಮಿಸಿದರಂತೆ. ಮುಂದೆ ಮುಂದೆ 11ನೇ ಶತಮಾನದಲ್ಲಿ ಇದು ಮತ್ತೆ ಪುನರ್ ನಿರ್ಮಾಣಗೊಂಡಿತು ಎಂಬುದು ನಂಬಿಕೆ.

ಈ ದೇವಾಲಯದ ವಿಚಾರ ಇಷ್ಟು ಮಾತ್ರವಲ್ಲ ಇಲ್ಲಿನ ಆಚರಣೆಗಳು ಉಳಿದ ದೇವಾಲಯಕ್ಕಿಂತ ಭಿನ್ನ ಹಾಗೂ ಅಚ್ಚರಿಯನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಎಲ್ಲಾ ಶಿವ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶವಿದೆ.

ಆದರೆ ಈ ದೇವಾಲಯದಲ್ಲಿ ಮಾತ್ರ ಮಹಿಳೆಯರಿಗೆ ಹಗಲಿನಲ್ಲಿ ದೇವಾಲಯಕ್ಕೆ ಪ್ರವೇಶವಿಲ್ಲ. ಬದಲಾಗಿ ಸಂಜೆ 7:30ರ ನಂತರ ದೇವಾಲಯದ ದರ್ಶನವನ್ನು ಪಡೆಯಬಹುದು.

ಇದಕ್ಕೆ ಕಾರಣ ರಾತ್ರಿಯ ವೇಳೆಯಲ್ಲಿ ಶಿವನ ಜೊತೆಯಲ್ಲಿ ಪಾರ್ವತಿಯು ದರ್ಶನ ನೀಡುದರಿಂದ ಈ ವೇಳೆಯಲ್ಲಿ ಶಿವ ಶಾಂತ ರೂಪದಲ್ಲಿ ಇರುತ್ತಾನಂತೆ. ಜೊತೆಯಲ್ಲಿ ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಇಲ್ಲಿ ಪ್ರವೇಶವಿಲ್ಲ.

ಶ್ರೀರಾಮಚಂದ್ರನೇ ಬಂದು ಪೂಜಿಸಿದ್ದ

ಇನ್ನು ಇಲ್ಲಿ ಶ್ರೀ ರಾಮಚಂದ್ರ ಕೂಡ ಬಂದು ಪೂಜೆ ಮಾಡಿದ್ದ ಅನ್ನೋ ನಂಬಿಕೆ ಇಲ್ಲಿದೆ ವನವಾಸದ ವೇಳೆಯ ಇಲ್ಲಿಗೆ ಬಂದಿದ್ದ ರಾಮ ಇಲ್ಲಿ ದೀರ್ಘದಂಡ ನಮಸ್ಕಾರ ಮಾಡಿದ್ದನಂತೆ . ಅದೇ ಜಾಗದಲ್ಲಿ ಈಗಿನ ನಮಸ್ಕಾರ ಮಂಟಪವಿದ್ದು, ಹೀಗಾಗಿ ಈ ಮಂಟಪದಲ್ಲಿ ಸಾರ್ವಜನಿಕರಿಗೆ ನಮಸ್ಕರಿಸಲು ಪ್ರವೇಶವಿಲ್ಲ ಎನ್ನಲಾಗುತ್ತದೆ.

ಜೊತೆಗೆ ಇಲ್ಲಿ ಯಾವುದೇ ರೀತಿಯ ವಾ಼ರ್ಷಿಕ ಉತ್ಸವ ನಡೆಯೋದಿಲ್ಲ ಅನ್ನೋದು ವಿಶೇಷ.ಇಲ್ಲಿ ಮತ್ತೊಂದು ವಿಶಿಷ್ಟತೆ ಅಂದ್ರೆ ,ಇಲ್ಲಿನ ಲಿಂಗವನ್ನು ಶಿವ ಹಾಗೂ ವಿಷ್ಣುವಿನ ರೂಪವೆಂದು ನಂಬಲಾಗುತ್ತದೆ.

ಇದೇ ಕಾರಣಕ್ಕೆ ತುಳಸಿ ಹಾಗೂ ಬಿಲ್ಲುವನ್ನು ದೇವರಿಗೆ ಪೂಜೆಯಲ್ಲಿ ಅರ್ಪಿಸಲಾಗುತ್ತದೆ. ಸಾಮಾನ್ಯವಾಗಿ ಶಿವ ದೇವಾಲಯಗಳಲ್ಲಿ ತುಳಸಿಯನ್ನು ಶಿವನಿಗೆ ಬಲಸಲಾಗುವುದಿಲ್ಲ.

ಜೊತೆಗೆ ಸೋಮವಾರದ ಬದಲು ಬುಧವಾರದಂದು ವಿಶಿಷ್ಟ ಪೂಜೆಯನ್ನು ನೆರವೇರಿಸಲಾಗುತ್ತದೆ .ಇಲ್ಲಿ ಬರುವ ಭಕ್ತರು ಹರಕೆಯ ರೂಪದಲ್ಲಿ ದೇವರಿಗೆ ತುಪ್ಪವನ್ನು ಸಮರ್ಪಿಸುತ್ತಾರೆ ಇಲ್ಲಿ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು ಪುರುಷರು ಧೋತಿ, ಪಂಚೆ ಹೆಂಗಸರು ಸೀರೆ ಚೂಡಿದಾರನ್ನು ಧರಿಸಬಹುದು.

ಇಂತಹ ವಿಶಿಷ್ಟ ದೇವಾಲಯವಿರೋದು ಎಲ್ಲಿ ಅಂತ ನೀವು ಕೇಳಿದ್ರೆ ಇದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿದೆ. ಈ ದೇವಾಲಯ ಕೇರಳದಲ್ಲಿದ್ದರೂ ಕನ್ನಡಿಗರೇ ಹೆಚ್ಚು ಇಲ್ಲಿಗೆ ಭೇಟಿ ನೀಡೋದು ಇಲ್ಲಿನ ವಿಶೇಷ,

ಈ ದೇವಾಲಯ ಕೇರಳ ಅತ್ಯಂತ ಶಕ್ತಿ ಶಾಲಿ ದೇವಾಲಯ ಅಂತಾನೂ ನಂಬಲಾಗುತ್ತೆ. ಇಲ್ಲಿ ಯಾರಾದರೂ ಬೇಡಿಕೊಂಡ್ರೆ ತಕ್ಷಣ ಕೆಲಸ ಆಗುತ್ತೆ ಅನ್ನೋ ನಂಬಿಕೆ ಇಲ್ಲಿದೆ.

Rajarajeswara Temple Taliparamba Kannur Kerala

Vandana kommunje | ವಂದನಾ ಕೊಮ್ಮುಂಜೆ

Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories