T20 Blind Cricket World Cup : ಅಂಧರ ಟಿ20 ವಿಶ್ವಕಪ್ 2022 ಗೆ ಯುವರಾಜ್ ಸಿಂಗ್ ಬ್ರ್ಯಾಂಡ್ ಅಂಬಾಸಿಡರ್

ಬೆಂಗಳೂರು : ಇದೇ ವರ್ಷಾಂತ್ಯ ಭಾರತದಲ್ಲಿ ನಡೆಯಲಿರುವ ಅಂಧರ 3 ನೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ (T20 Blind Cricket World Cup) ಭಾರತದ ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಬ್ರಾಂಡ್ ರಾಯಭಾರಿಯಾಗಿದ್ದಾರೆ ಎಂದು ದಿ ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೆಂಡ್ ಇನ್ ಇಂಡಿಯಾ (ಸಿಎಬಿಐ), ಇಂದು ಇಲ್ಲಿ ಘೋಷಿಸಿದೆ. ಈಗಾಗಲೇ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿ ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು,ಅಜಯ್ ರೆಡ್ಡಿ -ಬಿ2 (ಆಂಧ್ರ ಪ್ರದೇಶ) ಭಾರತ ತಂಡದ ನಾಯಕರಾಗಿದ್ದಾರೆ. ಹಾಗೇ ವೆಂಕಟೇಶ್ವರ ರಾವ್ ದುನ್ನಾ -ಬಿ2 (ಆಂಧ್ರ ಪ್ರದೇಶ) ತಂಡದ ಉಪನಾಯಕರಾಗಿದ್ದಾರೆ. ವಿಶ್ವ ಕಪ್ ಪಂದ್ಯಾವಳಿಯ ಪಂದ್ಯಗಳು ಇದೇ 2022ರ ಡಿಸೆಂಬರ್ 6 ರಿಂದ ಆರಂಭವಾಗಿ ಡಿಸೆಂಬರ್ 17 ರವರೆಗೆ ಭಾರತದಲ್ಲಿ ನಡೆಯಲಿವೆ.

ಅಂಧರ 3ನೇ ಟಿ20 ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ, ಆಸ್ಟೆಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶದ ತಂಡಗಳು ಭಾಗವಹಿಸಲಿವೆ. ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ಭಾರತ ಹಾಗೂ ನೇಪಾಳ ತಂಡಗಳ ನಡುವೆ 2022ರ ಡಿಸೆಂಬರ್ 6 ರಂದು ಪಂದ್ಯಾವಳಿಯ ಉದ್ಘಾಟನಾ ಪಂದ್ಯ (ಮೊದಲ ಪಂದ್ಯ) ನಡೆಯಲಿದೆ. “ಒಬ್ಬ ಬ್ರಾಂಡ್ ರಾಯಭಾರಿಯಾಗಿ ಅಂಧರ 3 ನೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಒಂದು ಭಾಗವಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ ಎಂದು ಭಾರತದ ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಯುವರಾಜ್ ಸಿಂಗ್,“ದೃಷ್ಟಿ ವಿಕಲಚೇತನ ಕ್ರಿಕೆಟಿಗರು ಕ್ರಿಕೆಟ್ ಆಟದ ಬಗ್ಗೆ ಹೊಂದಿರುವ ಪ್ರೀತಿ,ಬದ್ಧತೆ ಹಾಗೂ ಪ್ಯಾಷನ್ ಅನ್ನು ಕಂಡು ಪ್ರಶಂಸೆ ಮಾಡಲೇಬೇಕು ಎಂದೆನಿಸಿದೆ. ಅಲ್ಲದೆ ಅವರು ನಿತ್ಯ ಜೀವನದ ಸವಾಲುಗಳನ್ನು ಮೆಟ್ಟಿನಿಂತು ಇಂತಹ ಸಾಧನೆ ತೋರುತ್ತಿರುವುದು ಶ್ಲಾಘನೀಯ ಎಂದರು.

ಇದೊಂದು ವಿಭಿನ್ನವಾಗಿರುವ ಜಗತ್ತು.ಆದರೆ ಇದು ಕ್ರಿಕೆಟಿನ ಜಗತ್ತು. ಕ್ರಿಕೆಟ್‌ಗೆ ಯಾವುದೇ ಎಲ್ಲೆಗಳಿಲ್ಲ. ಈ ಆಟ ನನಗೆ, ಹೋರಾಟದ ಮನೋಭಾವವನ್ನು ಕಲಿಸಿದೆ ಎಂಬುದು ನನ್ನ ನಂಬಿಕೆಯಾಗಿದೆ. ಹಾಗೇ ಜೀವನದಲ್ಲಿ ಬೀಳುವುದು, ಧೂಳಿನಿಂದ ಮತ್ತೆ ಕೊಡವಿಕೊಂಡು ಮೇಲೆದ್ದು ಬರುವುದು, ಆತ್ಮವಿಶ್ವಾಸದಿಂದ ಮುನ್ನುಗ್ಗುವ ಪಾಠವನ್ನು ಈ ಕ್ರೀಡೆ ನನಗೆ ಕಲಿಸಿಕೊಟ್ಟಿದೆ. ಹೀಗಾಗಿ ಈ ಒಂದು ಅತ್ಯದ್ಭುತ ಕ್ರೀಡಾಕೂಟವನ್ನು ಎಲ್ಲರೂ ಬೆಂಬಲಿಸಬೇಕು ಎಂದು ನಾನು ಈ ಮೂಲಕ ಮನವಿ ಮಾಡುತ್ತೇನೆ ಮತ್ತು ಕ್ರೀಡಾಕೂಟಕ್ಕೆ ಆಹ್ವಾನವನ್ನು ಕೂಡ ನೀಡುತ್ತಿದ್ದೇನೆ,” ಎಂದು ಯುವಿ ಹೇಳಿದರು. ಈ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯು ಸಮರ್ಥನಂ ಅಂಗವಿಕಲರ ಸಂಸ್ಥೆಯ ಒಂದು ಮಹತ್ವಾಕಾಂಕ್ಷಿ ಕ್ರೀಡಾ ಚಟುವಟಿಕೆಯಾಗಿದ್ದು, ಸಮರ್ಥನಂ ಸಂಸ್ಥೆಯು 2012 ರಿಂದಲೂ ಅಂಧರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಸಮರ್ಥನಂ ಸಂಸ್ಥೆಯು ಎಲ್ಲರನ್ನೂ ಒಂದುಗೂಡಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸದೃಢವಾಗಿಸುವ ಹಾಗೂ ವಿವಿಧ ರೀತಿಯ ಅಂಗ ವಿಕಲತೆಗಳನ್ನು ಹೊಂದಿರುವ ವಿಕಲಚೇತನ ವ್ಯಕ್ತಿಗಳಿಗೆ ಉತ್ತೇಜನ ನೀಡುವ ಒಂದು ಮಾಧ್ಯಮವಾಗಿ ಕ್ರೀಡೆಯನ್ನು ಪರಿಗಣಿಸಿದೆ. ಹಾಗೇ, ಸಂಸ್ಥೆಯು ಆರಂಭವಾದಾಗಿನಿಂದ ಇದುವರೆಗೆ ಸುಮಾರು 25,000 ಕ್ಕೂ ಹೆಚ್ಚಿನ ಸಂಖ್ಯೆಯ ದೃಷ್ಟಿ ವಿಕಲಚೇತನ ಕ್ರಿಕೆಟಿಗರನ್ನು ತಲುಪಿದೆ ಎಂಬುದು ಗಮನಿಸಬೇಕಾದ ಅಂಶ.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಕ್ರೀಡಾ ವಿಭಾಗವಾಗಿರುವ ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೆಂಡ್ ಇನ್ ಇಂಡಿಂಯಾ (ಸಿಎಬಿಐ) 2010 ರಲ್ಲಿ, ದೃಷ್ಟಿ ವಿಕಲಚೇತನರ ಕ್ರಿಕೆಟ್ ಕನಸನ್ನು ನನಸಾಗಿಸುವ ಮಹತ್ತರ ಗುರಿಯೊಂದಿಗೆ ಹಾಗೂ ಅವರಲ್ಲಿರುವ ಅಪರಿಮಿತ ಪ್ರತಿಭೆಗೆ ಪ್ರೋತ್ಸಾಹ ನೀಡುವ ಜೊತೆಗೆ, ಅಂಧರ ಕಿಕೆಟ್ ಜಗತ್ತಿನಲ್ಲಿ ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಸದುದ್ದೇಶದೊಂದಿಗೆ ಆರಂಭವಾದ ಸಂಸ್ಥೆಯಾಗಿದೆ. ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಂಯಾ, ವರ್ಲ್ಡ್ ಬ್ಲೈಂಡ್ ಕ್ರಿಕೆಟ್ ಲಿಮಿಟೆಡ್ (ಡಬ್ಲೂಬಿಸಿ) ಜೊತೆ ಸಂಯೋಜನೆಗೊಂಡಿರುವ ಸಂಸ್ಥೆಯಾಗಿದೆ. ಯುವರಾಜ್ ಸಿಂಗ್ ಅವರನ್ನು ಅಂಧರ 3 ನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್ ಆಗಿ ಹೊಂದಿರುವ ಕುರಿತಂತೆ ತಮ್ಮ ಅನಿಸಿಕೆ ಹಂಚಿಕೊಂಡ ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾದ ಅಧ್ಯಕ್ಷರು ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಗಳಾಗಿರುವ ಡಾ.ಮಹಾಂತೇಶ್ ಜಿ.ಕೆ. ಅವರು, “ಅಂಧರ ಕ್ರಿಕೆಟ್ ಕುಟುಂಬಕ್ಕೆ ಯುವರಾಜ್ ಸಿಂಗ್ ಅವರನ್ನು ಸ್ವಾಗತಿಸಲು ನಮಗೆ ಹೆಮ್ಮೆ ಎನಿಸುತ್ತಿದೆ. ಅವರ ಸಾಟಿಯಿಲ್ಲದ ಸಾಮರ್ಥ್ಯ ಮತ್ತು ಧೈರ್ಯ, ನಿಖರತೆ, ನೈಜತೆ, ಸತ್ಯ, ಹೋರಾಟದ ಕಿಚ್ಚು ಮತ್ತು ಯಾರೊಂದಿಗೂ ಹೋಲಿಕೆ ಮಾಡಲಾಗದ ಗುಣಮಟ್ಟದ ಬಗ್ಗೆ ಅವರು ಹೊಂದಿರುವ ಬದ್ಧತೆ ಸಿಎಬಿಐನ ಬ್ರಾಂಡ್ ಮೌಲ್ಯಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ,” ಎಂದು ಹೇಳಿದರು.

ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾ ಸಂಸ್ಥೆಯು 56 ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಜುಲೈ ಮಾಹೆಯಲ್ಲಿ ಬೆಂಗಳೂರಿನಲ್ಲಿ ನಡೆದ ಶಿಬಿರದಲ್ಲಿ ಅಗತ್ಯ ತರಬೇತಿ ನೀಡಿತ್ತು. ಬಳಿಕ ಆಯ್ಕೆ ಸಮಿತಿಯಿಂದ ಮೌಲ್ಯಮಾಪನ ನಡೆಸಿ 25 ಆಟಗಾರರನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಯಿತು. ಈ ಆಟಗಾರರು, 12 ದಿನಗಳ ಕಾಲ ಭೋಪಾಲ್‌ನಲ್ಲಿ ಕಠಿಣ ಕ್ರಿಕೆಟ್ ತರಬೇತಿ ಮತ್ತು ದೈಹಿಕ ಸದೃಢತೆಯ ಮೌಲ್ಯಮಾಪನಕ್ಕೆ ಒಳಪಟ್ಟರು. ಈ ಎಲ್ಲ ಹಂತಗಳ ಬಳಿಕ ಪ್ರಸ್ತುತ ಆಯ್ಕೆ ಸಮಿತಿಯು, ಅಂಧರ 3ನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ 17 ಆಟಗಾರರನ್ನು ಒಳಗೊಂಡ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದೆ. ಈ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಒಟ್ಟು 24 ಪಂದ್ಯಗಳು ಇರಲಿದ್ದು, ಅವೆಲ್ಲ ಪಂದ್ಯಗಳು ಭಾರತದ ವಿವಿಧ ನಗರಗಳಲ್ಲಿ ನಡೆಯಲಿವೆ.

2012 ಮತ್ತು 2017 ರಲ್ಲಿ ನಡೆದ ಅಂಧರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಗೆದ್ದ ಕ್ಷಣ ನಮಗೆ ಅತ್ಯಂತ ವಿಶೇಷವಾಗಿದೆ. ಏಕೆಂದರೆ, ಇದು ಬಹಳಷ್ಟು ಜನರಿಗೆ ಬಹಳಷ್ಟು ವಿಧದಲ್ಲಿ ನೆರವಾಗಿದೆ. ಪಂದ್ಯಾವಳಿಗೆ ಆಯ್ಕೆಯಾಗಿರುವ ನಮ್ಮ ಆಟಗಾರರು ಅತ್ಯಂತ ಕಠಿಣ ಸ್ಕೆಡ್ಯೂಲ್‌ಗಳು, ಶಿಸ್ತುಬದ್ಧ, ಕಠಿಣ ಪರಿಶ್ರಮದಿಂದ ಕೂಡಿದ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಅಂತಿಮವಾಗಿ ಆಯ್ಕೆಯಾಗಿರುವ ಅತ್ಯುತ್ತಮ 17 ಆಟಗಾರರು ಕ್ರೀಡಾ ಮಾನೋಭಾವ ಮತ್ತು ಸ್ಫೂರ್ತಿಯ ಸೆಲೆಗಳಾಗಿದ್ದು, ಮೂರನೇ ಬಾರಿ ವಿಶ್ವಕಪ್ ಗೆಲ್ಲಲು ಸನ್ನದ್ಧರಾಗಿದ್ದಾರೆ ಎಂದು ಸಿಎಬಿಐ ಆಯ್ಕೆ ಸಮಿತಿ ಮುಖ್ಯಸ್ಥರು ಹಾಗೂ ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇ.ಜಾನ್ ಡೇವಿಡ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : BCCI ಮುಂದೆ PCB ಜುಜುಬಿ, ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ಒಟ್ಟು ಮೌಲ್ಯ ಎಷ್ಟು ಗೊತ್ತಾ?

ಇದನ್ನೂ ಓದಿ : West Indies out of T20 World Cup 2022: ಎರಡು ಬಾರಿಯ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಅರ್ಹತಾ ಸುತ್ತಿನಲ್ಲೇ ಔಟ್

T20 Blind Cricket World Cup Yuvraj Singh is the brand ambassador

Comments are closed.