Diwali Festival 2022 : ಕರಾವಳಿಯಲ್ಲಿ ವಿಶೇಷ ದೀಪಾವಳಿ : ಏನಿದು “ಬಲೀಂದ್ರ ಪೂಜೆ”

ಬೆಳಕಿನ ಹಬ್ಬ, ದೀಪಗಳ ಹಬ್ಬ ದೀಪಾವಳಿಯನ್ನು(Diwali Festival 2022) ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್‌ 24ರಂದು ನರಕಚತುರ್ದಶಿ, 25ಕ್ಕೆ ಅಮಾವಾಸ್ಯೆ ಮತ್ತು 26ರಂದು ಬಲಿಪಾಡ್ಯಮಿ ಹಬ್ಬ ಇರುತ್ತದೆ. ದೇಶದ ವಿವಿಧ ಕಡೆಗಳಲ್ಲಿ ಹಲವು ರೀತಿಯಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ. ಅದರಲ್ಲೂ ನಮ್ಮ ಕರಾವಳಿಯಲ್ಲಿ ಎರಡು ದಿನಗಳ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸುತ್ತಾರೆ. ಈ ಹಬ್ಬದಂದು ನಮ್ಮ ಕರಾವಳಿಯಲ್ಲಿ ಬಲಿರಾಜನ್ನು ವಿಶೇಷವಾಗಿ ಪೂಜಿಸುತ್ತಾರೆ.

ನಮ್ಮ ಕರಾವಳಿಯಲ್ಲಿ ಹೆಚ್ಚಿನ ಆಚರಣೆಗಳು ಇಲ್ಲಿನ ಬೇಸಾಯ ಮತ್ತು ಜೀವನ ಪದ್ಧತಿಗೆ ಸಂಬಂಧ ಪಟ್ಟಂತೆ ಇರುವುದು ವಿಶೇಷವಾಗಿದೆ. ಇಲ್ಲಿನ ಹಿರಿಯರು ತಮ್ಮ ವ್ಯವಸಾಯವನ್ನು ಗಮನದಲ್ಲಿಇಟ್ಟುಕೊಂಡೇ ಹಬ್ಬಗಳನ್ನು ಮಾಡಿರುವ ಹಾಗೇ ಹಬ್ಬಗಳು ಬರುತ್ತದೆ. ನಮ್ಮ ಕರಾವಳಿಯಲ್ಲಿ ಪ್ರತಿವರ್ಷ ದೀಪಾವಳಿಯು ಭತ್ತದ ಬೆಳೆಯ ಕಟಾವು ಮುಗಿದ ಸಂದರ್ಭದಲ್ಲಿ ಪ್ರಾರಂಭವಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಬೆಳೆದಿರುವ ಭತ್ತದ ಬೆಳೆಯನ್ನು ಕೊಯ್ದು ತಂದು ಮನೆಯಲ್ಲಿ ಭತ್ತವನ್ನು ಒಂದು ಕಡೆ ಇಡಲಾಗುತ್ತದೆ. ಹಾಗಾಗಿ ಮನೆ ಮನೆಗಳಲ್ಲೂ ಸಮೃದ್ಧಿ ಹಾಗೂ ಸಂತೋಷದ ವಾತಾವರಣ ಸೃಷ್ಟಿಯಾಗಿರುತ್ತದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಕಡೆಗಳಲ್ಲಿ ಎಣ್ಣೆ ನೀರಿನ ಸ್ನಾನವನ್ನು ಮಾಡುತ್ತಾರೆ. ಕರಾವಳಿಯ ಮನೆಗಳಲ್ಲಿ ಹೆಚ್ಚಾಗಿ ಹಂಡೆ ನೀರಿನಲ್ಲಿ ಸ್ನಾನ ಮಾಡುವುದು ಸಾಮಾನ್ಯವಾಗಿರುತ್ತದೆ. ಹಾಗಾಗಿ ದೀಪಾವಳಿ ಹಬ್ಬದ ಹಿಂದಿನ ದಿನ ಹಂಡೆಯಲ್ಲಿ ನೀರನ್ನು ತುಂಬಿಸಿ ಇಟ್ಟು ಅರಶಿನ ಕುಂಕುಮದಿಂದ ಪೂಜೆ ಮಾಡಲಾಗುತ್ತದೆ. ಮರುದಿನ ಬೆಳಿಗ್ಗೆ ಬೇಗನೆ ಎದ್ದು ತಲೆ ಮತ್ತು ಮೈಗೆಲ್ಲಾ ಎಣ್ಣೆಯನ್ನು ಹಚ್ಚಿ ಸ್ನಾನವನ್ನು ಮಾಡುತ್ತಾರೆ. ನಂತರ ಹೊಸ ಬಟ್ಟೆಯನ್ನು ತೊಟ್ಟು ಹಬ್ಬದ ಆಚರಣೆಯನ್ನು ಪ್ರಾರಂಭಿಸುತ್ತಾರೆ. ಮನೆಯಲ್ಲಿ ಇರುವ ಹೆಂಗಸರು ಹಬ್ಬದ ದಿನದಂದು ಮನೆಗಳಲ್ಲಿ ವಿಶೇಷ ಸಿಹಿ ತಿಂಡಿಗಳ ಜೊತೆಯಲ್ಲಿ ಹಬ್ಬದ ಅಡುಗೆಯನ್ನು ಮಾಡುತ್ತಾರೆ.

ಇನ್ನೂ ಗಂಡಸರು ಸಂಜೆ ಹಾಗೂ ಮರುದಿನದ ಪೂಜೆಗಾಗಿ ಬೇಕಾಗುವ ಕೆರೆಗಳಲ್ಲಿ ಸಿಗುವ ತಾವರೆ ಹೂ ಮತ್ತು ಅದರ ಎಲೆಗಳನ್ನು ಸಂಗ್ರಹಿಸಲು ಹೋಗುತ್ತಾರೆ. ಸಂಜೆಯ ಗದ್ದೆ ಪೂಜೆಗೆ ಬೇಕಾಗುವ ಸಾಮಗ್ರಿಗಳಾದ ತಾವರೆ ಹೂವಿನ ಎಲೆ(ಸಿಗದಿದ್ದರೆ ಬಾಳೆಎಲೆಯನ್ನು ಬಳಸುತ್ತಾರೆ), ದೊಂದಿ(ಸಣ್ಣ ಕೋಲಿನ ತುದಿಗೆ ಕಾಂಟನ್‌ ಬಟ್ಟೆಯಿಂದ ಸುತ್ತಿ ಎಣ್ಣೆಯಲ್ಲಿ ಮುಳುಗಿಸಿ ರೆಡಿ ಮಾಡಿರುವುದು), ಅವಲಕ್ಕಿ, ವಿಳ್ಯದೆಲೆ, ಅಡಿಕೆ ತುಂಡುಗಳು, ಗೊಡ್ಹಿಟ್ಟು (ಕೊಚ್ಚಲಕ್ಕಿಯಿಂದ ತಯಾರಿಸಿದ ಒಂದು ರೀತಿಯ ಖಾದ್ಯ), ಮತ್ತು ಸೂಡಿ( ತೆಂಗಿಗರಿಗಳನ್ನು ಒಟ್ಟುಗೂಡಿಸಿ ಮಾಡಲಾಗುತ್ತದೆ) ರೆಡಿ ಮಾಡಿಕೊಳ್ಳುತ್ತಾರೆ.

ಕತ್ತಲಾಗುತ್ತಿದಂತೆ ತಯಾರಿ ಮಾಡಿ ಇಟ್ಟುಕೊಂಡಿರುವ ವಸ್ತುವಿನ ಜೊತೆಯಲ್ಲಿ ಸೂಡಿಯನ್ನು ಬೆಂಕಿಯಿಂದ ಹೊತ್ತಿಸಿಕೊಂಡು ತಾವು ಬೆಳೆ ಬೆಳೆಯುವ ಪ್ರತಿಯೊಂದು ಗದ್ದೆಗಳಿಗೆ ಹೋಗಿ ತಾವರೆ ಎಲೆಗಳಲ್ಲಿ ಎಲ್ಲವನ್ನು ಇಟ್ಟು ದೊಂದಿಯನ್ನು ಹಚ್ಚಿ ಬಲಿಂದ್ರ ದೇವರ ಕಥೆಯನ್ನು ಚುಟುಕಾಗಿ ಹೇಳಿ ಕೂಗು ಹಾಕುವ ಮೂಲಕ ಗದ್ದೆಗಳ ಪೂಜೆಯನ್ನು ಮುಗಿಸಿ ಮನೆಗೆ ಬರುತ್ತಾರೆ. ಮನೆ ಬಂದು ಅದೇ ವಸ್ತುಗಳ ಮೂಲಕ ಗೊಬ್ಬರ ಗುಂಡಿಗಳಿಗೆ, ಹುಲ್ಲಿನ ರಾಶಿ ಮತ್ತು ಭತ್ತದ ರಾಶಿಗೆ ಪೂಜೆಯನ್ನು ಮಾಡುತ್ತಾರೆ. ನಂತರ ಮನೆಯಲ್ಲಿ ಸಾಕಿರುವ ದನಕರುಗಳಿಗೆ ಆಹಾರ ಧಾನ್ಯಗಳನ್ನು ಕೊಟ್ಟು ಪೂಜಿಸುತ್ತಾರೆ.

ಇದನ್ನೂ ಓದಿ : Scientific Reason Behind Diwali:ದೀಪಾವಳಿ ಆಚರಣೆಯ ಹಿಂದಿದೆ ವೈಜ್ಞಾನಿಕ ಕಾರಣ : ನಿಮಗಿದು ಗೊತ್ತೆ ?

ಇದನ್ನೂ ಓದಿ : Diwali Bank Holidays : ದೀಪಾವಳಿ, ನಾಳೆಯಿಂದ ಸತತ 6 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : Deepavali bus fares : ಬೆಂಗಳೂರು – ಹುಬ್ಬಳ್ಳಿ 5 ಸಾವಿರ ರೂ.: ದೀಪಾವಳಿಗೆ ಮನೆಗೆ ಹೊರಟವರಿಗೆ ಶಾಕ್

ನಂತರ ಮನೆಯ ಸುತ್ತಲು ಮತ್ತು ತುಳಸಿ ಕಟ್ಟೆಯ ಮೇಲೆ ಮಣ್ಣಿನ ಹಣತೆಗಳ ಮೂಲಕ ದೀಪಗಳನ್ನು ಹಚ್ಚುತ್ತಾರೆ. ನಂತರ ಮಕ್ಕಳು, ದೊಡ್ಡವರು ಮನೆ ಮಂದಿ ಎಲ್ಲಾ ಸೇರಿ ಪಟಾಕಿಗಳನ್ನು ಹಚ್ಚಿ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇನ್ನೂ ಮಾರನೇ ದಿನ ಗೋಪೂಜೆ ಹಾಗೂ ಯಂತ್ರಗಳ ಪೂಜೆಯನ್ನು ಕೂಡ ಮಾಡುತ್ತಾರೆ. ಮನೆಯಲ್ಲಿ ಸಾಕಿರುವ ಧನಕರುಗಳನ್ನು ಮುಂಜಾನೆ ಸ್ನಾನ ಮಾಡಿಸಿ ಅವುಗಳನ್ನು ಅಲಂಕರಿಸಿ ತಾವರೆ ಹೂವಿನಿಂದ ಹಾರವನ್ನು ಮಾಡಿ ಹಾಕುತ್ತಾರೆ. ನಂತರ ಅವುಗಳಿಗೆ ತಿನ್ನಲು ಧಾನ್ಯಗಳನ್ನು ಕೊಡುತ್ತಾರೆ. ಒಟ್ಟಾರೆ ಕರಾವಳಿ ಕಡೆಗಳಲ್ಲಿ ವರ್ಷ ಪೂರ್ತಿ ವ್ಯವಸಾಯವನ್ನು ಅವಲಂಬಿಸಿದ್ದು ಅದರ ನಡುವೆ ಬಿಡುವಿಗಾಗಿ ಹೆಚ್ಚಿನ ಹಬ್ಬಗಳನ್ನು ಆಚರಿಸಾಗುತ್ತದೆ. ಹಾಗೆ ದೀಪಾವಳಿ ಹಬ್ಬವನ್ನು ತಾವು ಬೆಳೆದ ಭತ್ತದ ಬೆಳೆಯನ್ನು ಮನೆಗೆ ತಂದ ಖುಷಿಯಲ್ಲಿ ಈ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ.

Diwali Festival 2022 : Special Diwali on Coastal Area : What is “Balindra Puja”

Comments are closed.