Separate Captains for T20 & ODI: ವಿಶ್ವಕಪ್ ಸೋಲಿನ ಎಫೆಕ್ಟ್: ಟೀಮ್ ಇಂಡಿಯಾಗೆ ಮೇಜರ್ ಸರ್ಜರಿ, ಟಿ20, ಏಕದಿನಕ್ಕೆ ಪ್ರತ್ಯೇಕ ಕ್ಯಾಪ್ಟನ್ಸ್ ?

ಬೆಂಗಳೂರು: Indian cricket team : ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್’ನಲ್ಲಿ ಸೋತು ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ವಿಫಲವಾಗಿರುವ ಟೀಮ್ ಇಂಡಿಯಾ ಆಟಗಾರರು ತವರಿಗೆ ಮರಳಿದ್ದಾರೆ. ವಿಶ್ವಕಪ್ ವೈಫಲ್ಯದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆಗಳಿವೆ. ಮುಖ್ಯವಾಗಿ ಏಕದಿನ ಹಾಗೂ ಟಿ20 ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಕ ಮಾಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದ್ದು, ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಾಂಗರೂ ನಾಡಿನಲ್ಲಿ ನಡೆದ ಚುಟುಕು ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಂಡಿತ್ತು. ಭಾನುವಾರ ನಡೆದ ಫೈನಲ್’ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು 5 ವಿಕೆಟ್’ಗಳಿಂದ ಮಣಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. 2007ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದದ್ದೇ ಕೊನೆ. ನಂತರ ಚುಟುಕು ವಿಶ್ವಕಪ್ ಗೆಲ್ಲುವ ಭಾರತದ ಕನಸು ನುಚ್ಚು ನೂರಾಗುತ್ತಾ ಬಂದಿದೆ. ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಭಾರತ ಮತ್ತೊಮ್ಮೆ ನಿರಾಸೆ ಅನುಭವಿಸಿತ್ತು.

ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗ್ತಿದೆ. ಮುಖ್ಯವಾಗಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ರೋಹಿತ್ ಶರ್ಮಾ ಅವರಿಗೆ ಈಗಾಗಲೇ 35 ವರ್ಷ. ಹೀಗಾಗಿ 2024ರ ಟಿ20 ವಿಶ್ವಕಪ್’ನಲ್ಲಿ ಆಡುವ ಸಾಧ್ಯತೆಗಳಿಲ್ಲ. ಹೀಗಾಗಿ ಈಗಲೇ ಟಿ20 ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಿ ಮುಂದಿನ ವಿಶ್ವಕಪ್’ಗೆ ತಂಡವನ್ನು ಸಜ್ಜುಗೊಳಿಸಲು ಬಿಸಿಸಿಐ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

“ತಂಡದಲ್ಲಿ ಬದಲಾವಣೆ ಮಾಡುವ ಕುರಿತು ಮಾತನಾಡಲು ಇದು ಸೂಕ್ತ ಸಮಯವಲ್ಲ. ಆದರೆ ಟಿ20 ಹಾಗೂ ಏಕದಿನ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವುದು ಸತ್ಯ. ಇದು ಒಬ್ಬನ ಮೇಲೆ ಹೆಚ್ಚಿನ ಒತ್ತಡ ಬೀಳುವುದನ್ನು ತಪ್ಪಿಸಲಿದೆ. ಟಿ20 ಕ್ರಿಕೆಟ್’ನಲ್ಲಿ ನಮಗೆ ಫ್ರೆಶ್ ಅಪ್ರೋಚ್ ಬೇಕಾಗಿದೆ. ಇದೇ ವೇಳೆ 2023ರಲ್ಲಿ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್ ಕಡೆಗೂ ನಾವು ಗಮನ ಹರಿಸಬೇಕಿದೆ. ಪ್ರತ್ಯೇಕ ನಾಯಕರ ಆಯ್ಕೆಯ ಬಗ್ಗೆ ಜನವರಿ ತಿಂಗಳಲ್ಲಿ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಕೆ.ಎಲ್ ರಾಹುಲ್ ಅಥವಾ ಬರೋಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಧ್ಯೆ ಭಾರತದ ಟಿ20 ನಾಯಕತ್ವಕ್ಕೆ ಸ್ಪರ್ಧೆಯಿದೆ. 2023ರಲ್ಲಿ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕರಾಗಿರಲಿದ್ದಾರೆ. ವಿಶ್ವಕಪ್ ನಂತರ ಏಕದಿನ ಹಾಗೂ ಟೆಸ್ಟ್ ತಂಡಗಳಿಗೂ ಹೊಸ ನಾಯಕ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ : Ben Stokes : 2016ರ ದುಸ್ವಪ್ನ.., 2019ರಲ್ಲಿ ವಿಶ್ವಕಪ್, ಆಷಸ್, 2022ರಲ್ಲಿ ಮತ್ತೊಂದು ವಿಶ್ವಕಪ್; ಇಂಗ್ಲೆಂಡ್‌ನ ಗ್ರೇಟೆಸ್ಟ್ ವಿಶ್ವಕಪ್ ಹೀರೊ

ಇದನ್ನೂ ಓದಿ : IPL 2023 Retention: ಮುಂಬೈನಿಂದ ಪೊಲ್ಲಾರ್ಡ್ ರಿಲೀಸ್, ಚೆನ್ನೈನಲ್ಲೇ ಉಳಿದ ರವೀಂದ್ರ ಜಡೇಜಾ

T20 World Cup 2022 Effect Separate Captains for T20 and ODI Indian cricket team

Comments are closed.