Indian cricket Team : ಮೆಲ್ಬೋರ್ನ್‌ನಲ್ಲಿ ವಿಕ್ಟೋರಿಯಾ ಗವರ್ನರ್‌ರಿಂದ ಟೀಮ್ ಇಂಡಿಯಾಗೆ “ವಿಶೇಷ ಆತಿಥಿ ಸತ್ಕಾರ”

ಮೆಲ್ಬೋರ್ನ್: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡದ (Indian cricket Team) ಟಿ20 ವಿಶ್ವಕಪ್ ಟೂರ್ನಿ (T20 World Cup 2022) ಆರಂಭಕ್ಕೂ ಮುನ್ನ ವಿಕ್ಟೋರಿಯಾ ಗವರ್ನರ್ ಲಿಂಡಾ ಡೆಸ್ಸೂ AC (Governor of Victoria, Linda Dessau AC) ಅವರನ್ನು ಮೆಲ್ಬೋರ್ನ್’ನಲ್ಲಿರುವ ಗವರ್ನಮೆಂಟ್ ಹೌಸ್’ನಲ್ಲಿ ಭೇಟಿ ಮಾಡಿದ್ದಾರೆ. ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿ ನೀಡಿದ್ದು, ಗವರ್ನರ್ ಭೇಟಿಯ ಫೋಟೋವನ್ನು ಶೇರ್ ಮಾಡಿದೆ. ಭಾರತ ತಂಡದ ಭೇಟಿಯ ಚಿತ್ರಗಳನ್ನು ಗವರ್ನರ್ ಆಫ್ ವಿಕ್ಟೋರಿಯಾದ ಟ್ವಿಟರ್ ಖಾತೆಯಲ್ಲೂ ಪ್ರಕಟಿಸಲಾಗಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ (Indian cricket Team) ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈಗಾಗಲೇ ಪರ್ತ್ ಹಾಗೂ ಬ್ರಿಸ್ಬೇನ್’ನಲ್ಲಿ ಒಟ್ಟು ಮೂರು ಅಭ್ಯಾಸ ಪಂದ್ಯಗಳನ್ನಾಡಿರುವ ಭಾರತ 2ರಲ್ಲಿ ಗೆದ್ದು ವಿಶ್ವಕಪ್’ಗೆ ಸಿದ್ಧತೆ ಮುಗಿಸಿದೆ. ಬ್ರಿಸ್ಬೇನ್’ನ ಗಾಬಾ ಮೈದಾನದಲ್ಲಿ ಸೋಮವಾರ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 6 ರನ್’ಗಳಿಂದ ಮಣಿಸಿದ್ದ ರೋಹಿತ್ ಪಡೆ, ವಿಶ್ವಕಪ್ ಟೂರ್ನಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಟಿ20 ವಿಶ್ವಕಪ್’ನ ಚೊಚ್ಚಲ ಆವೃತ್ತಿಯ ಚಾಂಪಿಯನ್ ಭಾರತ ತಂಡ, ಈ ವಿಶ್ವಕಪ್’ನಲ್ಲಿ ಗ್ರೂಪ್ 2ರಲ್ಲಿ ಸ್ಥಾನ ಪಡೆದಿದೆ. ಭಾರತ ತಂಡದ ಜೊತೆ ಬಾಂಗ್ಲಾದೇಶ, ನೆದರ್ಲೆಂಡ್ಸ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ಗ್ರೂಪ್-2ರಲ್ಲಿ ಕಾಣಿಸಿಕೊಂಡಿವೆ. ಗ್ರೂಪ್-1ರಲ್ಲಿ ಅಫ್ಘಾನಿಸ್ತಾನ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ.

ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಶುಕ್ರವಾರ ಮುಕ್ತಾಯಗೊಂಡಿದ್ದು; ಶ್ರೀಲಂಕಾ, ನೆದರ್ಲೆಂಡ್ಸ್, ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳು ಪ್ರಧಾನ ಸುತ್ತಿಗೆ (ಸೂಪರ್-12) ಅರ್ಹತೆ ಪಡೆದಿವೆ. ಎರಡೂ ಗ್ರೂಪ್’ಗಳಲ್ಲಿ ತಲಾ ಆರು ತಂಡಗಳಂತೆ, ಒಟ್ಟು 12 ತಂಡಗಳು ಸೂಪರ್-12 ಹಂತದಲ್ಲಿ ಸೆಣಸಲಿವೆ. ಪ್ರತೀ ಗ್ರೂಪ್’ನಲ್ಲಿ ಅಗ್ರ ಎರಡು ಸ್ಥಾನಗಳ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಇದನ್ನೂ ಓದಿ : IND vs PAK Playing XI : ಪಾಕಿಸ್ತಾನ ವಿರುದ್ಧದ ಮೆಗಾ ಮ್ಯಾಚ್‌ಗೆ ಕೌಂಟ್‌ಡೌನ್, ಹೀಗಿರಲಿದೆ ಭಾರತದ ಪ್ಲೇಯಿಂಗ್ XI

ಇದನ್ನೂ ಓದಿ : IPL 2023 Ravindra Jadeja : ಗುಡ್ ನ್ಯೂಸ್, ಐಪಿಎಲ್ ನಲ್ಲಿ ಚೆನ್ನೈ ತಂಡಕ್ಕೆ ರವೀಂದ್ರ ಜಡೇಜಾ ಕಂಬ್ಯಾಕ್

T20 World cup Indian cricket Team Met Victoria Governor

Comments are closed.