Dinesh Karthik Alex Wharf : 2004ರಲ್ಲಿ ಡಿಕೆ ಜೊತೆ ಆಡಿದ್ದ ಇಂಗ್ಲೆಂಡ್ ಆಟಗಾರ, ಈಗ ಡಿಕೆ ಆಡುತ್ತಿರುವಾಗ ಅಂಪೈರ್

ಲಂಡನ್: ಕ್ರಿಕೆಟ್ ಜಗತ್ತಿನಲ್ಲಿ ದಿನೇಶ್ ಕಾರ್ತಿಕ್ ಅವರದ್ದೊಂದು ಅದ್ಭುತ ಯಶೋಗಾಥೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ, 2019ರಲ್ಲಿ ಕ್ರಿಕೆಟ್ ಬಿಟ್ಟು ಕಾಮೆಂಟೇಟರ್ ಆಗಿ, ಮತ್ತೆ ಮೈದಾನಕ್ಕಿಳಿದು, ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿರುವ ರೀತಿಯೇ ಅಚ್ಚರಿ ಹುಟ್ಟಿಸುವಂಥದ್ದು. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, ದಿನೇಶ್ ಕಾರ್ತಿಕ್ 2004ರಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದಾಗ ಕಾರ್ತಿಕ್ ಜೊತೆ ಆಡಿದ್ದ ಆಟಗಾರನೊಬ್ಬ, ಈಗ ಡಿಕೆ ಆಡುತ್ತಿರುವ ಪಂದ್ಯಗಳಲ್ಲಿ ಅಂಪೈರ್ (Dinesh Karthik Alex Wharf) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂಗ್ಲೆಂಡ್”ನ ಆ ಅಂಪೈರ್ ಹೆಸರು ಅಲೆಕ್ಸ್ ವಾರ್ಫ್. ಅಂತಾರಾಷ್ಟ್ರೀಯ ಕ್ರಿಕೆಟ್”ಗೆ ಕಾಲಿಟ್ಟ 22 ವರ್ಷಗಳ ನಂತರವೂ ಡಿಕೆ ಆಡುತ್ತಲೇ ಇದ್ದಾರೆ. ಅವರ ಜೊತೆ ಆಡಿದ್ದ ಆಟಗಾರ ಅಂಪೈರ್ ಆಗಿದ್ದಾರೆ.

2004ರಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ದಿನೇಶ್ ಕಾರ್ತಿಕ್ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರ ಅಲೆಕ್ಸ್ ವಾರ್ಫ್ ಕೂಡ ಆಡಿದ್ದರು. ಅದು ಅಲೆಕ್ಸ್ ವಾರ್ಫ್ ಪಾಲಿಗೆ 3ನೇ ಏಕದಿನ ಪಂದ್ಯವಾಗಿತ್ತು. ಆಲ್ರೌಂಡರ್ ಆಗಿದ್ದ ಅಲೆಕ್ಸ್ ವಾರ್ಫ್ ಆ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಅವರ ವಿಕೆಟ್ ಪಡೆದಿದ್ದರು.

22 ವರ್ಷಗಳ ಹಿಂದೆ ದಿನೇಶ್ ಕಾರ್ತಿಕ್ ಜೊತೆ ಆಡಿದ್ದ ಆಟಗಾರನೇ ಈಗ ಡಿಕೆ ಆಡುತ್ತಿರುವ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿಯಲ್ಲಿ ಅಲೆಕ್ಸ್ ವಾರ್ಫ್ ಅಂಪೈರ್ ಆಗಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಫೀಲ್ಡ್ ಅಂಪೈರ್ ಆಗಿದ್ದ ಅಲೆಕ್ಸ್ ವಾರ್ಫ್, 2ನೇ ಪಂದ್ಯದಲ್ಲಿ ಟಿವಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

ಇಂಗ್ಲೆಂಡ್ ಪರ 13 ಏಕದಿನ ಪಂದ್ಯಗಳನ್ನಾಡಿರುವ 47 ವರ್ಷದ ಅಲೆಕ್ಸ್ ವಾರ್ಫ್, 18 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್, ನಾಂಟಿಂಗ್”ಹ್ಯಾಮ್’ಶೈರ್, ಗ್ಲಾಮರ್ಗನ್ ಮತ್ತು ಯಾರ್ಕ್”ಶೈರ್ ತಂಡಗಳನ್ನು ಪ್ರತಿನಿಧಿಸಿರುವ ಅಲೆಕ್ಸ್ ವಾರ್ಫ್ ಒಟ್ಟು 121 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 3,570 ರನ್ ಮತ್ತು 293 ವಿಕೆಟ್ ಪಡೆದಿದ್ದಾರೆ. 155 ಲಿಸ್ಟ್ ಎ ಪಂದ್ಯಗಳಿಂದ 1,411 ರನ್ ಮತ್ತು 192 ವಿಕೆಟ್ ಪಡೆದಿದ್ದಾರೆ. 2005ರಲ್ಲಿ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಅಲೆಕ್ಸ್ ವಾರ್ಫ್, ನಿವೃತ್ತಿಯ ನಂತರ ಅಂಪೈರ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ಇನ್ನು 2004ರಲ್ಲಿ ಭಾರತ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಡಿಕೆ, 26 ಟೆಸ್ಟ್, 94 ಏಕದಿನ ಹಾಗೂ 41 ಟಿ20 ಪಂದ್ಯಗಳನ್ನಾಡಿದ್ದಾರೆ. ಕಳೆದ ವರ್ಷ ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಸ್ಕೈ ಸ್ಪೋರ್ಟ್ಸ್ ವಾಹಿನಿಯಲ್ಲಿ ಕಾಮೆಂಟೇಟರ್ ಆಗಿದ್ದ ದಿನೇಶ್ ಕಾರ್ತಿಕ್, ಈ ವರ್ಷ ಅದೇ ಇಂಗ್ಲೆಂಡ್”ನಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ಆಟಗಾರನಾಗಿ ಆಡುತ್ತಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಮೋಘ ಪ್ರದರ್ಶನ ತೋರಿ ಟೀಮ್ ಇಂಡಿಯಾಗೆ ಮರಳಿದ್ದಾರೆ.

ಇದನ್ನೂ ಓದಿ : Pant meets Dhoni: ಕ್ರಿಕೆಟ್ ಜನಕರ ನಾಡಿನಲ್ಲಿ ಮಹಾಗುರು, ಸೂಪರ್ ಹೀರೋನನ್ನು ಭೇಟಿ ಮಾಡಿದ ಶಿಷ್ಯರು

ಇದನ್ನೂ ಓದಿ : Rohit Best T20 Captain: ಟಿ20 ನಾಯಕತ್ವ: ಬೆಸ್ಟ್ ವಿನ್ %ನಲ್ಲಿ ಹಿಟ್ ಮ್ಯಾನ್ ರೋಹಿತ್ ಈಗ ಜಗತ್ತಿಗೇ ನಂ.1 ಕ್ಯಾಪ್ಟನ್

Umpire Alex Wharf debut With Dinesh Karthik Alex Wharf now Umpire and DK is playing

Comments are closed.