ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ತೀವ್ರ ಗಂಭೀರ : ಶ್ವಾಸಕೋಶ ಕಸಿಗೆ ಸಜ್ಜಾದ ವೈದ್ಯರ ತಂಡ
ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎನ್ನಲಾಗಿದ್ದು, ಖ್ಯಾತ ಶ್ವಾಸಕೋಶ ತಜ್ಞ ಡಾ. ವೆಂಕಟಗಿರಿ ನೇತೃತ್ವದ ತಂಡವು ಶ್ವಾಸಕೋಶ ಕಸಿಗೆ ನಿರ್ಧರಿಸಿದೆ.
ಕರ್ನಾಟಕ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ . ಸಚಿವರಿಗೆ ಶ್ವಾಸಕೋಶದ ಸೋಂಕು ತೀವ್ರವಾದ ಕಾರಣ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾಸಕೋಶದ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಚಿವರಿಗೆ ಶ್ವಾಸಕೋಶದ ಕಸಿ ನಡೆಸಲು ವೈದ್ಯರು ನಿರ್ಧರಿಸಿದ್ದು, ಇದಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿದ್ದಾರೆ.
ಅಂದಹಾಗೆ ಸಚಿವ ಡಿ. ಸುಧಾಕರ್ ಒಂದು ತಿಂಗಳ ಹಿಂದೆ ಮೊಣಕಾಲು ಶಸ್ತ್ರಚಿಕಿತ್ಸೆಗೆಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಶಸ್ತ್ರಚಿಕಿತ್ಸೆಯೇನೋ ಯಶಸ್ವಿಯಾಗಿತ್ತು, ಆದರೆ ಶ್ವಾಸಕೋಶದಲ್ಲಿ ತೀವ್ರವಾದ ಸೋಂಕು ಕಾಣಿಸಿಕೊಳ್ಳಲಾರಂಭಿಸಿತು. ಕಳೆದ ಒಂದು ತಿಂಗಳಿನಿಂದ ಸಚಿವ ಡಿ. ಸುಧಾಕರ್ ಸಾವು – ಬದುಕಿನ ನಡುವೆ ಹೋರಾಡುತ್ತಲೇ ಇದ್ದಾರೆ . ಎರಡು ದಿನಗಳ ಹಿಂದೆಯಷ್ಟೇ ಇವರನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಜೀವನಾಂಶ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು : ವಿವಾಹ ನಂತರ ಜನಿಸಿದ ಕಂದಮ್ಮನಿಗೂ ನಿಯಮ ಅನ್ವಯ
ಇನ್ನು ನಿನ್ನೆ ರಾತ್ರಿ 9:30ರ ಸುಮಾರಿಗೆ ಡಿ. ಸುಧಾಕರ್ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎನ್ನಲಾಗಿದ್ದು, ಖ್ಯಾತ ಶ್ವಾಸಕೋಶ ತಜ್ಞ ಡಾ. ವೆಂಕಟಗಿರಿ ನೇತೃತ್ವದ ತಂಡವು ಶ್ವಾಸಕೋಶ ಕಸಿಗೆ ನಿರ್ಧರಿಸಿದೆ . ಇನ್ನು ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕುಟುಂಬಸ್ಥರಿಗೆ ಧೈರ್ಯ ತುಂಬಿ , ವೈದ್ಯರೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ. ಸಚಿವರ ಶ್ವಾಸಕೋಶದ ಕಸಿಗೆ ಬೇಕಾದ ಎಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಸೂಚನೆ ನೀಡಿದ್ದಾರೆ.



