ಮುನಿಯಾಲು ಸುಳ್ಳಿಗೆ ಕ್ರಿಮಿನಲ್ ಕೇಸ್..! ಪರಶುರಾಮ ಮೂರ್ತಿ ಸ್ಥಾಪನೆಗೆ ತಿಂಗಳ ಗಡುವು : ಕಾಂಗ್ರೆಸ್ ವಿರುದ್ದ ಶಾಸಕ ವಿ.ಸುನಿಲ್ ಕುಮಾರ್ ಆರ್ಭಟ
ಕಾರ್ಕಳ/ ಉಡುಪಿ : ಕಾರ್ಕಳ ಪರಶುರಾಮ ಮೂರ್ತಿ ವಿಚಾರದಲ್ಲಿ ಎರಡು ವರ್ಷಗಳ ಕಾಲ ಸುಳ್ಳು ಆರೋಪ ಮಾಡುತ್ತಾ ಅಭಿವೃದ್ದಿಯನ್ನೇ ಸಾಯಿಸಿದ್ದೀರಿ. ಆದರೆ ಮುಂದಿನ ಒಂದು ತಿಂಗಳ ಒಳಗಾಗಿ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲೇ ಬೇಕು. ಇಲ್ಲವಾದ್ರೆ ಸೆಪ್ಟೆಂಬರ್ 6ಕ್ಕೆ ಪಾದಯಾತ್ರೆ ನಡೆಸುವುದಾಗಿ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಅವರು ಎಚ್ಚರಿಕೆ ರವಾನಿಸಿದ್ದಾರೆ.
ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯನ್ನು ಆರಂಭಿಸಿ, ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸುವ ಕುರಿತು ಕಾರ್ಕಳದಿಂದ ಉಡುಪಿಯ ವರೆಗೆ ನಡೆದ ವಾಹನ ಜಾಥಾದಲ್ಲಿ ಪಾಲ್ಗೊಂಡು, ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ರು.
ಮುನಿಯಾಲು ಅಥವಾ ಪೊಲೀಸ್ ಅಧಿಕಾರಿ ವಿರುದ್ದ ಕ್ರಿಮಿನಲ್ ಕೇಸ್
ಪರಶುರಾಮ ಮೂರ್ತಿ ಕುರಿತು ಸುಳ್ಳು ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ನಾಯಕರ ಮುಖವಾಡ ಕಳಚಿ ಬಿದ್ದಿದೆ. ಸುಳ್ಳು ಹೇಳುವ ಮೂಲಕ ಜನರನ್ನೇ ಧಿಕ್ಕು ತಪ್ಪಿಸಿದ್ದೀರಿ. ಪರಶುರಾಮ ಥೀಮ್ ಪಾರ್ಕ್ ವಿರುದ್ದ ದಾಖಲಿಸಿರುವ ಕೇಸ್ ವಾಪಾಸ್ ಪಡೆಯಬೇಕು. ಸಾರ್ವಜನಿಕರಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಕ್ಷಮೆ ಕೇಳಬೇಕು. ಸುಳ್ಳು ಅಪಪ್ರಚಾರ ಮಾಡಿದವರ ಮೇಲೆ ಕೇಸು ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪರಶುರಾಮ ಮೂರ್ತಿಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ತನಿಖೆ ಮಾಡಿ ಮೂರ್ತಿ ಫೈಬರ್‌ನಿಂದ ಮಾಡಿಲ್ಲ ಅನ್ನೋದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ ಉದಯ್ ಕುಮಾರ್ ಶೆಟ್ಟಿ ಅವರು ಇಂದಿಗೂ ಫೈಬರ್ ಮೂರ್ತಿ ಎಂದು ಆರೋಪಿಸುತ್ತಿದ್ದಾರೆ. ಹೀಗಾಗಿ ಮುನಿಯಾಲು ಅವರ ವಿರುದ್ದ ಪ್ರಕರಣ ದಾಖಲಿಸಬೇಕು. ಇಲ್ಲವಾದ್ರೆ ತನಿಖೆ ಮಾಡಿ ವರದಿ ನೀಡಿರುವ ಪೊಲೀಸ್ ಅಧಿಕಾರಿಯ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಸುನಿಲ್ ಕುಮಾರ್ ಅವರು ಒತ್ತಾಯಿಸಿದ್ದಾರೆ.
ಪರಶುರಾಮನಿಗಾಗಿ ಬೃಹತ್ ಪಾದಯಾತ್ರೆ.
ಎರಡು ವರ್ಷಗಳ ಕಾಲ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಕಾಲಹರಣ ಮಾಡಿದ್ದೀರಿ. ಆದ್ರೆ ಇನ್ಮುಂದೆ ಸುಮ್ಮನೆ ಕೂರುವುದಕ್ಕೆ ಸಾಧ್ಯವಿಲ್ಲ. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಸೆಪ್ಟೆಂಬರ್ 6ರ ಒಳಗಾಗಿ ಪರಶುರಾಮ ಮೂರ್ತಿಯನ್ನು ಪುನರ್ ನಿರ್ಮಾಣ ಮಾಡಬೇಕು. ಒಂದೊಮ್ಮೆ ಪುನರ್ ನಿರ್ಮಾಣ ಮಾಡದೇ ಇದ್ರೆ ಕಾರ್ಕಳದ ಅನಂತ ಶಯನದಿಂದ ಬೈಲೂರು ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಶಾಸಕ ಸುನಿಲ್ ಕುಮಾರ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ಪರಶುರಾಮ ಮೂರ್ತಿ ಕಳುವಿನ ಆರೋಪ : ಕಾಮಗಾರಿಗೆ ತಡೆ
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿರುವ ಪರಶುರಾಮ ಮೂರ್ತಿಯ ವಿನ್ಯಾಸ ಮಾರ್ಪಾಡಿಗಾಗಿ 2023ರ ಸೆಪ್ಟೆಂಬರ್ 26 ರಂದು ಶಿಲ್ಪಿ ಕೃಷ್ಣ ನಾಯ್ಕ್ ಅವರು ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 9 2023ರಂದು ಥೀಮ್ ಪಾರ್ಕ್‌ನ ಮೂರ್ತಿ ವಿನ್ಯಾಸ ಬದಲಾವಣೆಗ ಅವಕಾಶ ನೀಡಿದ್ದರು.
ಜಿಲ್ಲಾಧಿಕಾರಿಗಳೇ ಅನುಮತಿಯನ್ನು ನೀಡಿದ್ದರೂ ಕೂಡ ಮೂರ್ತಿ ಕಳುವಿನ ಆರೋಪ ಮಾಡಿದ್ರು. ಎರಡು ವರ್ಷಗಳ ಕಾಲ ಪರಶುರಾಮ ಥೀಮ್ ಪಾರ್ಕ್ ಅನ್ನೇ ಸಾಯಿಸಿದ್ದೀರಿ. ನ್ಯಾಯಾಲಯದಿಂದ ಆದೇಶ ತಂದು ಕಾಮಗಾರಿ ಆರಂಭಿಸುವ ವೇಳೆಯಲ್ಲಿ ರಸ್ತೆಗೆ ಮಣ್ಣು ಸುರಿದಿದ್ದು ಕೂಡ ಇದೇ ಉದಯ್ ಕುಮಾರ್ ಶೆಟ್ಟಿ ಅವರ ಟೀಂ ಎಂದು ಆರೋಪಿಸಿದ್ದಾರೆ.

ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಮ್ಯೂನಿಸ್ಟ್ ಗಿಡ, ಧೂಳು ಹಿಡಿಸಿದ್ದು ಕಾಂಗ್ರೆಸ್
ಪರಶುರಾಮ ಥೀಮ್ ಪಾರ್ಕ್‌ಗೆ ಮಂಜೂರಾಗಿರುವ 4.33 ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಸರಕಾರ ಬಿಡುಗಡೆ ಮಾಡಿಲ್ಲ. ಬಿಜೆಪಿ ಮಂಜೂರು ಮಾಡಿದ ಹಣವನ್ನು ಕಾಂಗ್ರೆಸ್ ತಡೆ ಹಿಡಿದಿದೆ. ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಎರಡು ವರ್ಷಗಳ ಕಾಲ ಅಭಿವೃದ್ದಿಯನ್ನೇ ಕಂಡಿಲ್ಲ.
ಥೀಮ್ ಪಾರ್ಕ್‌ನಲ್ಲಿ ಕಮ್ಯೂನಿಸ್ಟ್ ಗಿಡಗಳು ಬೆಳೆಯಲು ಯಾರು ಕಾರಣ ಎಂದು ಪ್ರಶ್ನಿಸಿದ ಅವರು, ಥೀಮ್ ಪಾರ್ಕ್ ಪಾಳು ಬಿದ್ದಿರುವುದಕ್ಕೆ ಕಾಂಗ್ರೆಸ್, ದೂಳು ಹಿಡಿದಿರುವುದಕ್ಕೆ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರೇ ಕಾರಣ ಎಂದಿದ್ದಾರೆ.
ಪದೇ ಪದೇ ನಿಲುವು ಬದಲಾಯಿಸಿದ ಮುನಿಯಾಲು
ಪರಶುರಾಮ ಮೂರ್ತಿ ವಿಚಾರದಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಪದೇ ಪದೇ ತಮ್ಮ ನಿಲುವು ಬದಲಾಯಿಸುತ್ತಲೇ ಇದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪರಶುರಾಮ ಮೂರ್ತಿ ನಿರ್ಮಾಣ ಆಗುವುದೇ ಬೇಡಾ ಅಂದ್ರು, ಇದೀಗ ಮೂರ್ತಿ ನಿರ್ಮಾಣಕ್ಕಾಗಿ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ.
ಪಿಐಎಲ್ ಸಲ್ಲಿಕೆ ಮಾಡಿರೋದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪರಶುರಾಮ ಮೂರ್ತಿ ವಿಚಾರದಲ್ಲಿ ದಾಖಲಿಸಿದ್ದ ಕೇಸ್ ವಾಪಾಸ್ ಪಡೆದು ಪಿಐಎಲ್ ಸಲ್ಲಿಕೆ ಮಾಡಿದ್ರೆ ನಿಮ್ಮ ನಿಲುವನ್ನು ಒಪ್ಪಬಹುದಾಗಿತ್ತು. ಆದರೆ ಕೇಸ್ ವಾಪಾಸ್ ಪಡೆಯದೇ ಯಾಕೆ ಪಿಐಎಲ್ ಸಲ್ಲಿಕೆ ಮಾಡಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ಸುಳ್ಳು ಹೇಳಿದವರ ವಿರುದ್ದ ಕೇಸ್
ಮುಂದಿನ ವಿಧಾನ ಮಂಡಲ ಅಧಿವೇಶನ ಸಾಕಷ್ಟು ರೋಚಕವಾಗಿ ಇರಲಿದೆ. ಈ ಬಾರಿಯ ಅಧಿವೇಶನದಲ್ಲಿ ಸುಳ್ಳು ಹೇಳುವವರ ವಿರುದ್ದ ಕೇಸ್ ಹಾಕುವ ಕುರಿತು ಹೊಸ ಬಿಲ್ ಮಂಡನೆ ಆಗಲಿದೆ. ಈ ಬಿಲ್ ಮಂಡನೆ ಆದ ನಂತರದಲ್ಲಿ ಮೊದಲ ಕೇಸ್ ದಾಖಲಾಗುವುದು ಉದಯ್ ಕುಮಾರ್ ಶೆಟ್ಟಿ ಅವರ ವಿರುದ್ದ ಎಂದರು.
ಒಂದೊಮ್ಮೆ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯ ಗುಣಮಟ್ಟದಲ್ಲಿ ಅಕ್ರಮ ನಡೆಸಿದ್ರೆ ತನಿಖೆ ಮಾಡಿ ಎಂದು ಸವಾಲು ಹಾಕಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಅಕ್ರಮಗಳ ತನಿಖೆಗೆ ಸರಕಾರ ಆದೇಶಿಸಿತ್ತು.
ಆದರೆ ಎಲ್ಲಾ ಪ್ರಕರಣದ ತನಿಖೆಯನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ ತನಿಖೆ ನಡೆಸಿ ವರದಿಯನ್ನು ಸರಕಾರಕ್ಕೆ ನೀಡಿದೆ. ಆದರೆ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಎರಡು ವರ್ಷಗಳ ಕಳೆದರೂ ತನಿಖಾ ವರದಿ ಸಲ್ಲಿಕೆ ಆಗಿಲ್ಲ. ಹಾಗಾದ್ರೆ ಇದರ ಹಿಂದೆ ಯಾರಿದ್ದಾರೆ ಎಂದು ಸುನಿಲ್ ಕುಮಾರ್ ಅವರು ಪ್ರಶ್ನಿಸಿದ್ದಾರೆ.
ಕಾರ್ಕಳದಿಂದ ಉಡುಪಿವರೆಗೆ ವಾಹನ ಜಾಥಾ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯನ್ನು ಆರಂಭಿಸಿ, ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಆಗ್ರಹಿಸಿ ಕಾರ್ಕಳ ತಾಲೂಕು ಭಾರತೀಯ ಜನತಾ ಪಾರ್ಟಿಯ ವತಿಯಿಂದ ವಾಹನ ಜಾಥಾ ನಡೆಯಿತು.
ಕಾರ್ಕಳದಿಂದ ಆರಂಭಗೊಂಡ ವಾಹನ ಜಾಥಾವು ಉಡುಪಿಯ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಸಾಗಿತ್ತು. ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರಕಾರದ ವಿರುದ್ದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರಿಗೆ ಶಾಸಕರಾದ ವಿ. ಸುನಿಲ್ ಕುಮಾರ್ ಹಾಗೂ ಕಾರ್ಕಳ ತಾಲೂಕು ಬಿಜೆಪಿ ಅಧ್ಯಕ್ಷರಾದ ನವೀನ್ ನಾಯಕ್ ಅವರು ಮನವಿ ಸಲ್ಲಿಸಿದ್ರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನವೀನ್ ನಾಯಕ್ ಕುತ್ಯಾರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುವಿತ್ ಶೆಟ್ಟಿ ಕೌಡೂರು, ಕಾರ್ಕಳ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಶಿವಪುರ ಮತ್ತು ಸತೀಶ್ ಪೂಜಾರಿ, ರವೀಂದ್ರ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.
Karkala Parashurama Theme Park Controversy Bjp Portest MLA Sunil kumar Speech



