Rakesh Shetty: ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಗೆ 3 ತಿಂಗಳು ಜೈಲು ಶಿಕ್ಷೆ; ಕಾರಣ ಏನು?
Power TV MD Rakesh Shetty: ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನೀಡಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ, ‘ಪವರ್ ಟಿವಿ’ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಅವರಿಗೆ ಬೆಂಗಳೂರು ಗ್ರಾಮಾಂತರ ನ್ಯಾಯಾಲಯವು ಮೂರು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿದೆ.
ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ತಮ್ಮ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸದಂತೆ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತಂದಿದ್ದರು. 2023ರ ಸೆಪ್ಟೆಂಬರ್ 8ರಂದು ನ್ಯಾಯಾಲಯವು ಈ ಆದೇಶ ನೀಡಿತ್ತು. ಆದಾಗ್ಯೂ, ಪವರ್ ಟಿವಿ ವಾಹಿನಿಯು ರವಿಕಾಂತೇಗೌಡ ಅವರನ್ನು “ದುಷ್ಟ ಐಪಿಎಸ್ ಅಧಿಕಾರಿ” ಎಂದು ಸಂಬೋಧಿಸಿ ಪ್ರೋಮೋ ಮತ್ತು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಬ್ದುಲ್ ಸಲೀಂ ಅವರು ಜನವರಿ 6ರಂದು ಈ ಮಹತ್ವದ ತೀರ್ಪು ನೀಡಿದ್ದಾರೆ.
ಉದ್ದೇಶಪೂರ್ವಕ ಉಲ್ಲಂಘನೆ: ರಾಕೇಶ್ ಶೆಟ್ಟಿ ಅವರಿಗೆ ನ್ಯಾಯಾಲಯದ ತಡೆಯಾಜ್ಞೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ, ಉದ್ದೇಶಪೂರ್ವಕವಾಗಿ ಅದನ್ನು ಉಲ್ಲಂಘಿಸಿ ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಿವಿಲ್ ಜೈಲು ಶಿಕ್ಷೆ: ಸಿವಿಲ್ ಪ್ರಕ್ರಿಯಾ ಸಂಹಿತೆಯ (CPC) ಅಡಿಯಲ್ಲಿ ಆದೇಶ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಮೂರು ತಿಂಗಳ ಕಾಲ ಸಿವಿಲ್ ಜೈಲಿನಲ್ಲಿ ಇರಿಸಲು ಆದೇಶಿಸಲಾಗಿದೆ.
ಮುಂದಿನ ಕ್ರಮ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭತ್ಯೆಗಳನ್ನು ಠೇವಣಿ ಮಾಡಲು ನ್ಯಾಯಾಲಯವು ಜನವರಿ 31, 2026ಕ್ಕೆ ದಿನಾಂಕ ನಿಗದಿಪಡಿಸಿದೆ.
ಕಾಂಗ್ರೆಸ್ ಮುಖಂಡನನ್ನೇ ಗಡಿಪಾರು ಮಾಡುತ್ತಾ ಕಾಂಗ್ರೆಸ್ ಸರ್ಕಾರ? ಶಿಡ್ಲಫಟ್ಟ ರಾಜೀವ್ ಗೌಡ ವಿರುದ್ಧ ಭಾರೀ ಆಕ್ರೋಶ
ಹಿಂದಿನ ಕಾನೂನು ಹೋರಾಟಗಳು:
ಪವರ್ ಟಿವಿ ಈ ಹಿಂದೆಯೂ ಕಾನೂನು ಸಂಕಷ್ಟಕ್ಕೆ ಸಿಲುಕಿತ್ತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪರವಾನಗಿ ಇಲ್ಲದ ಕಾರಣಕ್ಕೆ ಚಾನೆಲ್ ಪ್ರಸಾರ ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು. ಆದರೆ, ಈ ಆದೇಶದ ವಿರುದ್ಧ ರಾಕೇಶ್ ಶೆಟ್ಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಂದು ಸುಪ್ರೀಂ ಕೋರ್ಟ್, ವಾಹಿನಿಯ ಧ್ವನಿಯನ್ನು ಅಡಗಿಸಲು ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟು ವಾಹಿನಿಯ ಪರವಾಗಿ ನಿಂತಿತ್ತು.
ಆದರೆ ಸದ್ಯದ ಈ ಜೈಲು ಶಿಕ್ಷೆಯು ನೇರವಾಗಿ ನ್ಯಾಯಾಂಗ ನಿಂದನೆ (Contempt of Court) ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ನ್ಯಾಯಾಲಯದ ಆದೇಶವನ್ನು ಗೌರವಿಸದ ಹಿನ್ನೆಲೆಯಲ್ಲಿ ಈ ಕಠಿಣ ತೀರ್ಪು ಹೊರಬಿದ್ದಿದೆ.



