ಒನ್ಪ್ಲಸ್ ಹೊಸ OnePlus Nord CE6 ಸ್ಮಾರ್ಟ್ಫೋನ್ ಹವಾ! ಮೊದಲ ಮಾರಾಟದಲ್ಲೇ ದಾಖಲೆ
OnePlus Nord CE6 ಸ್ಮಾರ್ಟ್ಫೋನ್ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆ ಪಡೆದಿದ್ದು, ಅಮೆಜಾನ್ ಮೊದಲ ಮಾರಾಟದಲ್ಲೇ 25 ರಿಂದ 35 ಸಾವಿರ ರೂ. ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಫೋನ್ ಆಗಿದೆ.

ಒನ್ಪ್ಲಸ್ ಕಂಪನಿಯ ಹೊಸ OnePlus Nord CE6 ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಂದ ತಕ್ಷಣವೇ ಭಾರೀ ಸದ್ದು ಮಾಡುತ್ತಿದೆ. ಅಮೆಜಾನ್ ಇಂಡಿಯಾದ ಮೊದಲ ಸೇಲ್ನಲ್ಲೇ ಈ ಫೋನ್ 25 ಸಾವಿರದಿಂದ 35 ಸಾವಿರ ರೂ. ದರದ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಮೊಬೈಲ್ ಎಂಬ ದಾಖಲೆ ನಿರ್ಮಿಸಿದೆ ಎಂದು ಕಂಪನಿ ತಿಳಿಸಿದೆ.
ಪ್ರೀಮಿಯಂ ವಿನ್ಯಾಸ, ಬಲಿಷ್ಠ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್ ಸೌಲಭ್ಯಗಳಿಂದ ಈ ಫೋನ್ ಯುವಕರ ಗಮನ ಸೆಳೆದಿದೆ. ಲಾಂಚ್ಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟಿಸಿದ್ದ ಈ ಡಿವೈಸ್, ಸೇಲ್ ಆರಂಭವಾದ ಕೆಲವೇ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.
OnePlus Nord CE6 ನಲ್ಲಿ 6.78 ಇಂಚಿನ 1.5K AMOLED ಡಿಸ್ಪ್ಲೇ ನೀಡಲಾಗಿದ್ದು, 144Hz ರಿಫ್ರೆಶ್ ರೇಟ್ ಬೆಂಬಲ ಹೊಂದಿದೆ. ಗೇಮಿಂಗ್, ವಿಡಿಯೋ ವೀಕ್ಷಣೆ ಮತ್ತು ಸ್ಕ್ರೋಲಿಂಗ್ ಅನುಭವವನ್ನು ಇದು ಮತ್ತಷ್ಟು ಸ್ಮೂತ್ ಮಾಡುತ್ತದೆ ಎಂದು ಕಂಪನಿ ಹೇಳಿದೆ.
ಫೋನ್ನಲ್ಲಿ Qualcomm Snapdragon 7s Gen 4 ಪ್ರೊಸೆಸರ್ ನೀಡಲಾಗಿದೆ. 4nm ತಂತ್ರಜ್ಞಾನ ಆಧಾರಿತ ಈ ಚಿಪ್ ಉತ್ತಮ ವೇಗ ಹಾಗೂ ಪವರ್ ಸೇವಿಂಗ್ ಸಾಮರ್ಥ್ಯ ನೀಡುತ್ತದೆ. ಜೊತೆಗೆ 3200Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು Touch Reflex ತಂತ್ರಜ್ಞಾನ ಗೇಮಿಂಗ್ ಪ್ರಿಯರಿಗೆ ಉತ್ತಮ ಅನುಭವ ನೀಡಲಿದೆ.
ಈ ಮೊಬೈಲ್ನ ಪ್ರಮುಖ ಆಕರ್ಷಣೆ ಎಂದರೆ 8000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ. ದೀರ್ಘಕಾಲ ಚಾರ್ಜ್ ಬ್ಯಾಕಪ್ ನೀಡುವ ಈ ಬ್ಯಾಟರಿಗೆ 80W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲ ಇದೆ. ಜೊತೆಗೆ 27W ರಿವರ್ಸ್ ವೈರ್ಡ್ ಚಾರ್ಜಿಂಗ್ ಸೌಲಭ್ಯವೂ ಲಭ್ಯವಿದೆ.
ಫೋಟೋಗ್ರಫಿಗಾಗಿ 50MP ಪ್ರಾಥಮಿಕ ಕ್ಯಾಮೆರಾ ನೀಡಲಾಗಿದ್ದು, OIS ಬೆಂಬಲ ಇರುವುದರಿಂದ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋ ಕ್ಲಿಕ್ ಮಾಡಬಹುದು. ಸೆಲ್ಫಿ ಮತ್ತು ವಿಡಿಯೋ ಕಾಲ್ಗಾಗಿ 32MP ಫ್ರಂಟ್ ಕ್ಯಾಮೆರಾ ನೀಡಲಾಗಿದ್ದು, 4K ವಿಡಿಯೋ ರೆಕಾರ್ಡಿಂಗ್ಗೂ ಬೆಂಬಲ ನೀಡುತ್ತದೆ.
ಗೇಮಿಂಗ್ ಸಮಯದಲ್ಲಿ ಫೋನ್ ಹೆಚ್ಚು ಬಿಸಿಯಾಗದಂತೆ ದೊಡ್ಡ ವೆಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಜೊತೆಗೆ IP66, IP68 ಹಾಗೂ IP69 ರೇಟಿಂಗ್ಗಳಿಂದ ನೀರು ಮತ್ತು ಧೂಳಿನಿಂದ ರಕ್ಷಣೆ ಸಿಗುತ್ತದೆ ಎಂದು ಕಂಪನಿ ಹೇಳಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. 8GB RAM + 128GB ಮಾದರಿಯ ಬೆಲೆ ₹29,999 ಆಗಿದ್ದು, 256GB ಸ್ಟೋರೇಜ್ ವೇರಿಯಂಟ್ ₹32,999 ದರ ಹೊಂದಿದೆ. ಬ್ಯಾಂಕ್ ಆಫರ್ಗಳೊಂದಿಗೆ ಗ್ರಾಹಕರು ಕಡಿಮೆ ದರದಲ್ಲಿ ಖರೀದಿಸಬಹುದು.



