ಶಂಕರನಾರಾಯಣ : ಬೆಳ್ವೆಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ; ಐವರ ಬಂಧನ
ಜುಗಾರಿ ಆಟಕ್ಕೆ ಬಳಸಿದ್ದ 11,160/- ರೂ. ನಗದು, 52 ಇಸ್ಪೀಟ್ ಎಲೆಗಳು, ಚಾಪೆ ಹಾಗೂ ಸ್ಥಳದಲ್ಲಿದ್ದ ಮೋಟಾರು ಸೈಕಲ್ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಂಕರನಾರಾಯಣ: ಉಡುಪಿ ಜಿಲ್ಲೆಯಲ್ಲಿ ಅಕ್ರಮ ಜುಗಾರಿ ಆಟಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಬೆಳ್ವೆ ಗ್ರಾಮದ ಸುರ್ಗೋಳಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೀಟ್ ಅಡ್ಡೆಯ ಮೇಲೆ ಶಂಕರನಾರಾಯಣ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ಪರಾರಿಯಾಗಿದ್ದಾನೆ.
ಹೆಬ್ರಿ ತಾಲೂಕಿನ ಕುಚ್ಚೂರಿನ ಡ್ಯಾನೀಶ್ ನೊರೋನಾ (61 ವರ್ಷ ), ಕುಂದಾಪುರ ತಾಲೂಕಿನ ಹೆಂಗವಳ್ಳಿಯ ರಾಘವೇಂದ್ರ ಪೂಜಾರಿ (38 ವರ್ಷ), ಬ್ರಹ್ಮಾವರ ತಾಲೂಕಿನ ನಂಚಾರಿನ ಹರೀಶ ಶೆಟ್ಟಿ (36 ವರ್ಷ), ಬೆಳ್ವೆ ಗ್ರಾಮದ ಚಿರಾಗ್ ಶೆಟ್ಟಿ (34 ವರ್ಷ) ಮತ್ತು ಕಿರಣ ಶೆಟ್ಟಿ (39 ವರ್ಷ) ಎಂಬವರೇ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಬೆಳ್ವೆ ಗ್ರಾಮದ ಸುರ್ಗೋಳಿಯ ವಸಂತ ಪೂಜಾರಿ ಎಂಬುವವರ ಮನೆಯ ಪಕ್ಕದ ಸರ್ಕಾರಿ ಹಾಡಿಯಲ್ಲಿ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಬೀಟ್ ಸಿಬ್ಬಂದಿ ಜಯರಾಮ್ ನಾಯ್ಕ್ ಅವರು ಠಾಣೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಂಕರನಾರಾಯಣ ಪೊಲೀಸ್ ಉಪನಿರೀಕ್ಷಕಿ ಅಕ್ಷಯ ಕುಮಾರಿ ಅವರ ನೇತೃತ್ವದ ತಂಡ ಕೂಡಲೇ ಕಾರ್ಯಪ್ರವೃತ್ತವಾಗಿದೆ.
Also Read : ಉಡುಪಿಯಲ್ಲಿ ಹದಗೆಡುತ್ತಿದೆ ಗಾಳಿಯ ಗುಣಮಟ್ಟ : ಹವಾಮಾನ ವೈಪರೀತ್ಯದಿಂದ ಕಾದಿದ್ಯಾ ಅಪಾಯ ?
ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ:
ಪೊಲೀಸರು ಸುರ್ಗೋಳಿ ತಲುಪುತ್ತಿದ್ದಂತೆಯೇ ಜೀಪನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿ, ಯಾರಿಗೂ ಅನುಮಾನ ಬರದಂತೆ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗಿದ್ದಾರೆ. ಮರೆಯಲ್ಲಿ ನಿಂತು ನೋಡಿದಾಗ ಆರು ಮಂದಿ ಚಾಪೆ ಹಾಸಿ ಕುಳಿತು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ‘ಅಂದರ್-ಬಾಹರ್’ ಆಟವಾಡುತ್ತಿರುವುದು ಕಂಡುಬಂದಿದೆ. “ಒಳಗಡೆ 100, ಹೊರಗಡೆ 100” ಎಂದು ಕೂಗುತ್ತಾ ಹಣ ಕಟ್ಟುತ್ತಿದ್ದ ವೇಳೆ ಪೊಲೀಸರು ಏಕಾಏಕಿ ದಾಳಿ ನಡೆಸಿ ಐವರನ್ನು ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸ್ಥಳೀಯ ನಿವಾಸಿ ಪ್ರಕಾಶ್ ಪೂಜಾರಿ ಎಂಬಾತ ಪೊಲೀಸರನ್ನು ಕಂಡು ಕಾಲ್ಕಿತ್ತಿದ್ದಾನೆ.
Also Read : ಕೋಟ: ಸಿಸಿ ಕ್ಯಾಮೆರಾ ಕಿರಿಕ್; ವೃದ್ಧೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ, 7 ಮಂದಿಯ ವಿರುದ್ಧ ಎಫ್‌ಐಆರ್
ದಾಳಿಯ ವೇಳೆ ಜುಗಾರಿ ಆಟಕ್ಕೆ ಬಳಸಿದ್ದ 11,160/- ರೂ. ನಗದು, 52 ಇಸ್ಪೀಟ್ ಎಲೆಗಳು, ಚಾಪೆ ಹಾಗೂ ಸ್ಥಳದಲ್ಲಿದ್ದ ಮೋಟಾರು ಸೈಕಲ್ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2026 ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
shankaranarayana belve gambling raid five arrested police case Kannada News



