ಬ್ರಹ್ಮಾವರ: ತಾಯಿಯ ಅಂತ್ಯಸಂಸ್ಕಾರದ ವೇಳೆ ಮನೆಯಲ್ಲಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು
ತಾಯಿಯ ಅಂತ್ಯಸಂಸ್ಕಾರದ ಸಮಯದಲ್ಲಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಕಳುವಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮದಲ್ಲಿ ನಡೆದಿದೆ.

ಬ್ರಹ್ಮಾವರ: ತಾಯಿಯ ಅಂತ್ಯಸಂಸ್ಕಾರದ ಸಮಯದಲ್ಲಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಕಳುವಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮದಲ್ಲಿ ನಡೆದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕಾಡೂರು ಗ್ರಾಮದ ತಂತ್ರಾಡಿ, ಹೊಸ್ಕೆರೆ ನಿವಾಸಿಯಾದ ಉಮೇಶ್ ಶೆಟ್ಟಿ ಅವರು ಉದ್ಯೋಗದ ನಿಮಿತ್ತ ಮುಂಬಯಿನಲ್ಲಿ ನೆಲೆಸಿದ್ದು, ಅವರ ತಂದೆ ಮತ್ತು ವಯಸ್ಸಾದ ತಾಯಿ ಮಾತ್ರ ಬ್ರಹ್ಮಾವರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಉಮೇಶ್ ಶೆಟ್ಟಿ ಅವರು ಆಗಾಗ್ಗೆ ಊರಿಗೆ ಬಂದು ತಾಯಿಯ ಆರೋಗ್ಯವನ್ನು ವಿಚಾರಿಸಿ ಹೋಗುತ್ತಿದ್ದರು.
ಉಮೇಶ್ ಶೆಟ್ಟಿ ಅವರು ಕಳೆದ ಫೆಬ್ರವರಿ 16, 2026ರಂದು ಸಂಜೆ 5:00 ಗಂಟೆಯ ಸುಮಾರಿಗೆ ತಮ್ಮ ತಾಯಿ ಪಾರ್ವತಿ ಅವರ ಅಂದಾಜು 4 ಲಕ್ಷ ರೂಪಾಯಿ ಮೌಲ್ಯದ 38 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಮನೆಯ ಕೋಣೆಯ ಡ್ರಾಯರ್ನಲ್ಲಿ ಇಟ್ಟು ತೆರಳಿದ್ದರು. ದುರಂತ ಅಂದ್ರೆ ಉಮೇಶ್ ಅವರ ತಾಯಿ ಪಾರ್ವತಿ ಅವರು ಏಪ್ರಿಲ್ 23, 2026ರಂದು ನಿಧನರಾದರು.
Also Read : ಕುಂದಾಪುರ: ಶುಕ್ರವಾರದ ನಮಾಜ್ ಮುಗಿಸಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, ಪ್ರಕರಣ ದಾಖಲು
ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಉಮೇಶ್ ಅವರು ಮುಂಬಯಿಯಿಂದ ಊರಿಗೆ ಬಂದು ಎಲ್ಲಾ ಕಾರ್ಯಗಳನ್ನು ಮುಗಿಸಿ, ಮೇ 1, 2026ರಂದು ಕೋಣೆಯ ಡ್ರಾಯರ್ ಪರಿಶೀಲಿಸಿದ್ದಾರೆ. ಈ ವೇಳೆ, ಡ್ರಾಯರ್ನಲ್ಲಿ ಇಟ್ಟಿದ್ದ ಚಿನ್ನದ ಕರಿಮಣಿ ಸರ ನಾಪತ್ತೆಯಾಗಿರುವುದು ಕಂಡುಬಂದಿದೆ. ಮನೆಯಲ್ಲಿದ್ದ ಚಿನ್ನದ ಸರವನ್ನು ಯಾರೋ ಕಳವು ಮಾಡಿದ್ದಾರೆ ಎಂದು ಉಮೇಶ್ ಶೆಟ್ಟಿ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Also Read : ಮಲ್ಪೆ ಬಂದರಿನಲ್ಲಿ ಗಲಾಟೆ: ಪರಸ್ಪರ ದೂರು ದಾಖಲು
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
brahmavar Kadur gold theft case 2026



