ಕಂಡ್ಲೂರು : ವರಾಹಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ: 11 ಮಂದಿ ಬಂಧನ, 4 ದೋಣಿಗಳು ವಶ
Udupi News | Varahi River : ಉಡುಪಿ: ಕಂಡ್ಲೂರು ಬ್ರಿಡ್ಜ್ ಸಮೀಪ ವರಾಹಿ ನದಿಯಲ್ಲಿ (Varahi River) ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಮಂಗಳವಾರ ಬೆಳಗಿನ ಜಾವ ಧಾಳಿ ಮಾಡಲಾಗಿದೆ. ದಾಳಿಯ ವೇಳೆ ರಾಮಶಂಕರ ರಾಜಬೀರ್ (35), ರಾಮಕುಮಾರ್ (40), ಗೋವಿಂದ ಚೌದರಿ (26), ಶಿವಮುನಿ (32), ಜುನ್ನ ರಾಜಬೀರ್ (35), ಸತ್ಯಾದೇವ (30), ಕಮಲೇಶ ನಿಸಾದ್ (35), ಸಂತೋಷ ನಿಸಾದ್ (23), ಓಂಪ್ರಕಾಶ ರಾಜಬೀರ್ (34), ರಮೇಶ್ ರಾಜಬೀರ್ (35) ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.
ಫೆಬ್ರವರಿ 10ರಂದು ಬೆಳಗಿನ ಜಾವ ಸುಮಾರು 2 ಗಂಟೆ ವೇಳೆಗೆ ಪೊಲೀಸರು ಕಂಡ್ಲೂರು ಬ್ರಿಡ್ಜ್ ಬಳಿ ದಾಳಿ ನಡೆಸಿದಾಗ, ನದಿಯ ಕೆಳಭಾಗದಲ್ಲಿ ದೋಣಿಗಳ ಮೂಲಕ ಅಕ್ರಮವಾಗಿ ಮರಳು ತೆಗೆದು ತುಂಬುತ್ತಿರುವುದು ಪತ್ತೆಯಾಗಿದೆ. ಪೊಲೀಸರನ್ನು ಕಂಡು ದೋಣಿಗಳಲ್ಲಿದ್ದವರು ನದಿಯ ಪೊದೆಯೊಳಗೆ ದೋಣಿಗಳನ್ನು ನಿಲ್ಲಿಸಿ ಅಡಗಿಕೊಂಡಿದ್ದರು.
ಬಳಿಕ ಸಿಬ್ಬಂದಿಗಳನ್ನು ಕರೆಸಿ ಹಳ್ನಾಡು ಕೆಆರ್‌ಐಡಿಎಲ್ ಮರಳು ಧಕ್ಕೆಯಿಂದ ದೋಣಿಯಲ್ಲಿ ತೆರಳಿ ನಾಲ್ಕು ಮರಳು ತುಂಬಿದ ದೋಣಿಗಳನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಅವರು ಹಳ್ನಾಡು ಕೆಆರ್‌ಐಡಿಎಲ್ ಮರಳು ಧಕ್ಕೆಯ ದಿನಗೂಲಿ ಕಾರ್ಮಿಕರಾಗಿದ್ದು, ಉತ್ತಮ ಗುಣಮಟ್ಟದ ಮರಳು ತರಲು ಹೆಚ್ಚುವರಿ ಹಣ ನೀಡುವುದಾಗಿ ಧಕ್ಕೆಯ ಮಾಲಿಕ ಸುನಿಲ್ ಶೆಟ್ಟಿ ಹಾಗೂ ಸೂಪರ್ವೈಸರ್ ಅಜ್ಮಲ್ ಸೂಚಿಸಿದ್ದರಿಂದ ಜಿಯೋ ಫೆನ್ಸಿಂಗ್ ಮಿತಿಯನ್ನು ಮೀರಿ ರಾತ್ರಿ ವೇಳೆ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
ಧರ್ಮಸ್ಥಳದ ಭಕ್ತಾದಿಗಳ ಗಮನಕ್ಕೆ : ವಸತಿ ಗೃಹಗಳ ಬುಕ್ಕಿಂಗ್ ನೆಪದಲ್ಲಿ ಸೈಬರ್ ವಂಚನೆ, ಆಡಳಿತ ಮಂಡಳಿಯಿಂದ ಎಚ್ಚರಿಕೆ
ದಾಳಿಯಲ್ಲಿ ನಾಲ್ಕು ದೋಣಿಗಳು ಸುಮಾರು 3½ ಯುನಿಟ್ ಮರಳು ಅಂದರೆ ಅಂದಾಜು ಮೌಲ್ಯ 4,500 ರೂಪಾಯಿ ಹಾಗೂ ನಾಲ್ಕು ಬಿದಿರಿನ ತೊಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



