ಕಾರ್ಕಳ : ಸರಕಾರಿ ನರ್ಸಿಂಗ್ ಕಾಲೇಜಿಗೆ ಮೂಲ ಸೌಕರ್ಯ, ಎಬಿವಿಪಿ ಪ್ರತಿಭಟನೆ

ಕಾರ್ಕಳ (Karkala) : ಇಲ್ಲಿನ ಬಿಎಸ್ಸಿ ನರ್ಸಿಂಗ್ ಕಾಲೇಜಿ (Karkala BSc Nursing College) ಗೆ ಮೂಲ ಸೌಕರ್ಯ, ಉಪನ್ಯಾಸಕರ ಕೊರತೆ, ಸ್ವಂತ ಕಟ್ಟಡ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಎಬಿವಿಪಿ (ABVP) ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ.
ಕಾರ್ಕಳ ನಗರದಲ್ಲಿರುವ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ನರ್ಸಿಂಗ್ ಕಾಲೇಜಿನಿಂದ ಕಾರ್ಕಳದ ತಾಲೂಕು ಕಚೇರಿವರೆಗೆ ಕಾಲ್ನಡಿಗೆಯಲ್ಲಿಯೇ ಮೆರವಣಿಗೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಸಮಸ್ಯೆ ಪರಿಹಾರ ಮಾಡುವಂತೆ ಆಗ್ರಹಿಸಿದ್ದಾರೆ.
ನಂತರ ತಹಶೀಲ್ದಾರ್ ಪ್ರದೀಪ್ ಆರ್.ಅವರಿಗೆ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಕಾಲೇಜಿನ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರರು ಭರವಸೆ ನೀಡಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಕಾರ್ಯದರ್ಶಿ ಗಣೇಶ್ ಪೂಜಾರಿ ಅವರು ಮಾತನಾಡಿದರು. 2022ರಲ್ಲಿ ಕಾರ್ಕಳದಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭಗೊಂಡಿತ್ತು.
ಆರಂಭದ ಬ್ಯಾಚಿನ ವಿದ್ಯಾರ್ಥಿಗಳು 2026ರಲ್ಲಿ ತೇರ್ಗಡೆ ಆಗಲಿದ್ದಾರೆ. ಕಾಲೇಜು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದರು ಕೂಡ ಕನಿಷ್ಟ ಮೂಲಸೌಕರ್ಯ ಒದಗಿಸಿಲ್ಲೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಬಿವಿಪಿ ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೇಯಸ್ ಅಂಚನ್, ಎಬಿವಿಪಿ ಕಾರ್ಯಖ ತಾಲೂಕು ಘಟಕದ ಸುಶಾನ್ ಸೇರಿದಂತೆ ಎಬಿವಿಪಿ ಕಾರ್ಯಕರ್ತರು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಉಡುಪಿ ಜಿಲ್ಲೆಯ ಏಕೈಕ ಬಿಎಸ್ಸಿ ನರ್ಸಿಂಗ್ ಕಾಲೇಜು
ಉಡುಪಿ ಜಿಲ್ಲೆಯ ಏಕೈಕ ಸರ್ಕಾರಿ ಬಿ.ಎಸ್ಸಿ. ನರ್ಸಿಂಗ್ ಕಾಲೇಜು ಕಾರ್ಕಳದಲ್ಲಿ ಸರಿಯಾದ ಮೂಲಸೌಕರ್ಯ, ಉಪನ್ಯಾಸಕರು ಮತ್ತು ಸ್ವಂತ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
2022ರಲ್ಲಿ ಪ್ರಾರಂಭವಾದ ಈ ಕಾಲೇಜಿನಲ್ಲಿ ಇದುವರೆಗೆ ನಾಲ್ಕು ಬ್ಯಾಚ್‌ಗಳಲ್ಲಿ ಸುಮಾರು 160 ವಿದ್ಯಾರ್ಥಿಗಳು ದಾಖಲಾಗಿದ್ದು, 2026ರಲ್ಲಿ ಮೊದಲ ಬ್ಯಾಚ್ ಹೊರಬೀಳಲಿದೆ.
ಆದರೆ ಕಾಲೇಜು ಇಂಡಿಯನ್ ನರ್ಸಿಂಗ್ ಕೌನ್ಸಿಲ್ (INC) ಮಾನ್ಯತೆ ಪಡೆಯದಿದ್ದರೆ, ವಿದ್ಯಾರ್ಥಿಗಳು ಪ್ರತಿಷ್ಠಿತ ಉದ್ಯೋಗ ಮತ್ತು ವಿದೇಶದಲ್ಲಿ ಕೆಲಸ ಮಾಡುವ ಅವಕಾಶದಿಂದ ವಂಚಿತರಾಗುವ ಭೀತಿ ಎದುರಾಗಿದೆ.
160 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು !
ಕಾಲೇಜು ಸ್ಥಾಪನೆಯಾಗಿ ನಾಲ್ಕು ವರ್ಷಗಳಾಗಿದ್ದರೂ ಇದುವರೆಗೆ ಸರ್ಕಾರದಿಂದ ಸ್ವಂತ ಕಟ್ಟಡ, ಅಗತ್ಯವಿರುವಷ್ಟು ಉಪನ್ಯಾಸಕರು ಅಥವಾ ಮೂಲಸೌಕರ್ಯಗಳು ದೊರೆತಿಲ್ಲ. ಪ್ರಸ್ತುತ, ಕಾರ್ಕಳ ಸರ್ಕಾರಿ ತಾಲೂಕು ಆಸ್ಪತ್ರೆಯ ಹಳೆಯ, ಸೋರುತ್ತಿರುವ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ. ವಿದ್ಯುತ್ ಶಾಕ್ ಹೊಡೆಯುವ ಅಪಾಯದಲ್ಲಿ ತರಗತಿಗಳಿಗೆ ಹಾಜರಾಗುವ ಸ್ಥಿತಿ ಇದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತೀವ್ರ ಉಪನ್ಯಾಸಕರ ಕೊರತೆ:
INC ಮಾನ್ಯತೆ ಸಿಗಲು ಕನಿಷ್ಠ 16 ಉಪನ್ಯಾಸಕರು ಇರಬೇಕಾಗಿದ್ದು, ಸದ್ಯ ಕೇವಲ 3 ಜನ ಉಪನ್ಯಾಸಕರಿಂದಲೇ ಇಷ್ಟು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಅನಿವಾರ್ಯತೆ ಇದೆ. ಇದರಿಂದ ಸರಿಯಾದ ಸಮಯಕ್ಕೆ ಪಠ್ಯಕ್ರಮ ಪೂರ್ಣಗೊಳಿಸಲು ಸಾಧ್ಯವಾಗದೆ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಅಲ್ಲದೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯವಿಲ್ಲದೆ ರೋಗಿಗಳ ಶೌಚಾಲಯಗಳನ್ನು ಬಳಸುತ್ತಿರುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ನರ್ಸಿಂಗ್ ಕಲಿಕೆಗೆ ಅಗತ್ಯವಿರುವ ಅಡ್ವಾನ್ಸ್ ಸ್ಕಿಲ್ ಲ್ಯಾಬ್, ಸುಸಜ್ಜಿತ ಗ್ರಂಥಾಲಯ, ಕ್ಷೇತ್ರ ಭೇಟಿ ಹಾಗೂ ಪೋಸ್ಟಿಂಗ್‌ಗಳಿಗೆ ತೆರಳಲು ಕಾಲೇಜು ವಾಹನಗಳ ಕೊರತೆ ಇದೆ.
ಇದರಿಂದ ವಿದ್ಯಾರ್ಥಿಗಳು ಪ್ರತಿದಿನ ಸುಮಾರು 80 ಕಿ.ಮೀ.ಗಳಷ್ಟು ದೂರವನ್ನು ಸ್ವಂತ ಖರ್ಚಿನಲ್ಲಿ ಖಾಸಗಿ ಬಸ್‌ಗಳಲ್ಲಿ ಸಂಚರಿಸಬೇಕಾಗಿದೆ. ವಿದ್ಯಾರ್ಥಿಗಳು ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ ಸೂಕ್ತ ವ್ಯವಸ್ಥೆ ಆಗಿಲ್ಲ.
ಆದ್ದರಿಂದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಏಕೈಕ ಸರ್ಕಾರಿ ನರ್ಸಿಂಗ್ ಕಾಲೇಜಿನ ಅಭಿವೃದ್ಧಿಗೆ ಈಗಿನ ಸರ್ಕಾರವು ತ್ವರಿತವಾಗಿ ಸ್ವಂತ ಕಟ್ಟಡ ನಿರ್ಮಾಣ, ಕಾಯಂ ಉಪನ್ಯಾಸಕರ ನೇಮಕ ಮತ್ತು ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ವಿದ್ಯಾರ್ಥಿಗಳು ವಿನಂತಿಸಿದ್ದಾರೆ.
Karkala BSc Nursing College ABVP Protest in Kannada News



