ಮಲ್ಪೆಯಲ್ಲಿ ಕಿಡಿ ಹೊತ್ತಿಸಿದ ಲವ್ ಅಫೇರ್: ರಾಜಿ ಪಂಚಾಯ್ತಿ ವೇಳೆ ಮೀನುಗಾರ ಮುಖಂಡ ಮಂಜು ಕೊಳಗೆ ಇರಿತ
ಗಾಯಗೊಂಡ ಮಂಜು ಕೊಳ ಅವರನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಡೆದ ರಾಜಿ ಸಂಧಾನ ಸಭೆಯು ವಿಕೋಪಕ್ಕೆ ತಿರುಗಿದ್ದು, ಸ್ಥಳೀಯ ಮೀನುಗಾರ ಮುಖಂಡರೊಬ್ಬರಿಗೆ ಚಾಕುವಿನಿಂದ ಇರಿಯಲಾದ ಆಘಾತಕಾರಿ ಘಟನೆ ನಡೆದಿದೆ. ಮಲ್ಪೆಯ ಪ್ರಭಾವಿ ಮುಖಂಡ ಮಂಜು ಕೊಳ (malpe manju kola ) ಅವರ ಮೇಲೆ ಈ ಹಲ್ಲೆ ನಡೆದಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಹಿನ್ನೆಲೆ:
ಮಲ್ಪೆಯ ಯುವಕ ಹಾಗೂ ಪಡುಬಿದ್ರಿಯ ಪಲಿಮಾರು ಪರಿಸರದ ಯುವತಿಯ ನಡುವೆ ಪ್ರೇಮ ಪ್ರಕರಣವೊಂದು ಇತ್ತು ಎನ್ನಲಾಗಿದೆ. ಈ ವಿಚಾರವಾಗಿ ಉಭಯ ಕಡೆಯವರ ನಡುವೆ ಗೊಂದಲ ಉಂಟಾಗಿತ್ತು. ಇದನ್ನು ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮಲ್ಪೆಯಲ್ಲಿ ರಾಜಿ ಪಂಚಾಯ್ತಿ ಆಯೋಜಿಸಲಾಗಿತ್ತು. ಸ್ಥಳೀಯ ಮುಖಂಡರಾದ ಮಂಜು ಕೊಳ ಅವರು ಈ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದರು.
ಮಾತುಕತೆ ವೇಳೆ ಇರಿತ:
ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಯುವತಿ ಕಡೆಯಿಂದ ಬಂದಿದ್ದ ತಂಡ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ಆಕ್ರೋಶಗೊಂಡ ಯುವತಿಯ ಕಡೆಯ ವ್ಯಕ್ತಿಯೊಬ್ಬ ಮಂಜು ಕೊಳ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಇರಿದ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Also Read : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಲರ್ಟ್: ₹2,000 ಹಣ ಪಡೆಯಲು ಬೇಕಾ ‘ಜೀವಿತ ಪ್ರಮಾಣಪತ್ರ
ಮಂಜು ಕೊಳ ಅಪಾಯದಿಂದ ಪಾರು:
ಗಾಯಗೊಂಡ ಮಂಜು ಕೊಳ ಅವರನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಅವರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಗಳನ್ನು ಸದ್ಯ ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕರಾವಳಿಯಲ್ಲಿ ಈ ಘಟನೆ ಸಂಚಲನ ಮೂಡಿಸಿದೆ.
ಉಡುಪಿ ಎಸ್‌ಪಿ ಹರಿರಾಂ ಶಂಕರ್ ಹೇಳಿದ್ದೇನು ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ಘಟನೆ ನಡೆದಿದೆಯೇ ಹೊರತು ಬೇರೆ ಯಾವುದೇ ಕಾರಣವಿಲ್ಲ. ಅಲ್ಲದೇ ಈ ಕೃತ್ಯದ ಹಿಂದೆ ಯಾವುದೇ ಕೋಮು ಸೌಹಾರ್ದತೆ ಕೆಡಿಸುವ ಉದ್ದೇಶ ಅಥವಾ ಕೋಮು ಆಯಾಮವಿಲ್ಲ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಯಾವುದೇ ರೀತಿಯ ವದಂತಿಗಳನ್ನು ಹಬ್ಬಿಸಬಾರದು ಮತ್ತು ಕಿಡಿಗೇಡಿಗಳ ಮಾತಿಗೆ ಕಿವಿಗೊಡಬಾರದು ಎಂದು ವಿನಂತಿಸಲಾಗಿದೆ. ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಎಸ್‌ಪಿ ಹರಿರಾಂ ಶಂಕರ್ ಅವರು ನ್ಯೂಸ್‌ನೆಕ್ಸ್ಟ್‌ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸದ್ಯ ಗಾಯಾಳು ವ್ಯಕ್ತಿಯು ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
malpe-manju-kola-stabbed-love-affair-compromise-meeting-udupi-news



