ಜ್ಞಾನಪೀಠ ಮಾದರಿಯ ರೈತಪೀಠ ಪ್ರಶಸ್ತಿ: ರೈತರ ಸ್ವಾಭಿಮಾನಕ್ಕೆ ರಾಷ್ಟ್ರಮಟ್ಟದ ವೇದಿಕೆ

ಉಡುಪಿ: ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮೆರೆದವರಿಗೆ ಜ್ಞಾನ ಪೀಠ ನೀಡುವ ಪರಿಪಾಠವಿದೆ, ಅದು ಶ್ಲಾಘನಾರ್ಹವು ಕೂಡ ಹೌದು. ಆದರೆ ಕೃಷಿಕರ ವಿಚಾರ ಬಂದರೆ, ಕೃಷಿಕರೇ ದೇಶದ ಬೆನ್ನೆಲುಬು ಎನ್ನುವ ನುಡಿಯನ್ನು ಬಿಟ್ಟರೆ ನಿಜವಾದ ಕೃಷಿಕರಿಗೆ ಯಾವ ಗೌರವ ನೀಡಲಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಹೀಗಾಗಿ ಜ್ಞಾನಪೀಠ ಪ್ರಶಸ್ತಿಗೆ ಇರುವಂತಹ ಗೌರವ ಮತ್ತು ಪ್ರತಿಷ್ಠೆಯನ್ನು ಕೃಷಿ ಕ್ಷೇತ್ರಕ್ಕೂ ತಂದುಕೊಡಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ರೂಪುಗೊಂಡಿರುವ ರೈತಪೀಠ ಪ್ರಶಸ್ತಿ ಈ ಬಾರಿ ಉಡುಪಿಯಲ್ಲಿ ಪ್ರದಾನಗೊಳ್ಳುತ್ತಿದೆ.

ರೈತರನ್ನು ಕೇವಲ ಅನ್ನದಾತರಾಗಿ ಮಾತ್ರವಲ್ಲ, ರಾಷ್ಟ್ರದ ಆರ್ಥಿಕತೆ, ಸಂಸ್ಕೃತಿ ಮತ್ತು ಪ್ರಕೃತಿ ಸಂರಕ್ಷಣೆಯ ನಿಜವಾದ ಶಿಲ್ಪಿಗಳಾಗಿ ಗುರುತಿಸುವ ಉದ್ದೇಶವೇ ಈ ಪ್ರಶಸ್ತಿಯ ಮೂಲ ತತ್ವವಾಗಿದೆ.

ಪಶ್ಚಿಮ ಘಟ್ಟದ ತಪ್ಪಲಿನ ಪ್ರಕೃತಿ ಸೌಂದರ್ಯದಿಂದ ಆವೃತವಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮುನಿಯಾಲಿನಲ್ಲಿ ಇರುವ ಸಂಜೀವಿನಿ ಗೋಧಾಮದಲ್ಲಿ ಫೆ.20ರಂದು ಈ ಕಾರ್ಯಕ್ರಮ ನಡೆಯಲಿದೆ.

ಇಲ್ಲಿ ನಡೆಯುವ ಸಾವಯವ ಸ್ವರೂಪದ ನಾಗಮಂಡಲ ಪೂಜೆಯ ಮೂಲಕವೇ ರಾಷ್ಟ್ರಮಟ್ಟದ ಈ ರೈತಪೀಠ ಪ್ರಶಸ್ತಿಗೆ ಅಧಿಕೃತ ಚಾಲನೆ ನೀಡಲಿದೆ.

ನಾಗಮಂಡಲವು ಕರಾವಳಿ ಪ್ರದೇಶದ ವಿಶಿಷ್ಟ ಪ್ರಕೃತಿ ಆರಾಧನೆಯ ಸಂಕೇತವಾಗಿದ್ದು, ಅದು ಭೂಮಿ, ನೀರು, ಗಾಳಿ ಹಾಗೂ ಜೀವಜಾಲದೊಂದಿಗೆ ಮಾನವನ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ಇದೇ ಹಿನ್ನೆಲೆಯಲ್ಲೇ ರೈತಪೀಠ ಪ್ರಶಸ್ತಿಯನ್ನು ಆರಂಭಿಸುವ ಮೂಲಕ, ಕೃಷಿ ಮತ್ತು ಪ್ರಕೃತಿ ಪರಸ್ಪರ ಪೂರಕವಾಗಿವೆ ಎಂಬ ಸಂದೇಶವನ್ನು ದೇಶಕ್ಕೆ ನೀಡಲಾಗುತ್ತಿದೆ.

ಈ ಪ್ರಶಸ್ತಿಯ ವಿಶೇಷತೆ ಎಂದರೆ, ದೇಶದ ವಿವಿಧ ಭಾಗಗಳಿಂದ ಆಯ್ಕೆಯಾಗುವ ಐವರು ರೈತರನ್ನು ಪ್ರತಿವರ್ಷ ಗುರುತಿಸಿ, ತಲಾ ಒಂದು ಲಕ್ಷ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಗೌರವಪತ್ರ ನೀಡಿ ಸನ್ಮಾನಿಸುವುದು. ಕೃಷಿಯಲ್ಲಿ ಹೊಸತನ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಅನುಷ್ಠಾನ, ಪರಂಪರಾಗತ ಬೀಜಗಳ ಸಂರಕ್ಷಣೆ, ಕೃಷಿ ಪೂರಕ ಚಟುವಟಿಕೆಗಳ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿರುವ ರೈತರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ಈ ಬಾರಿ ರೈತಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವವರು ಬತ್ತದ ತಳಿ ಸಂರಕ್ಷಕ ಬಿ.ಕೆ. ದೇವರಾಯ ಅವರು. ದಶಕಗಳಿಂದ ಅಪರೂಪದ ಬತ್ತದ ತಳಿಗಳನ್ನು ಸಂರಕ್ಷಿಸಿ, ಮುಂದಿನ ತಲೆಮಾರಿಗೆ ಕೃಷಿ ಜೈವ ವೈವಿಧ್ಯವನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಅವರ ಈ ಸಾಧನೆಯು ರೈತರ ಶ್ರಮ ಹಾಗೂ ಜ್ಞಾನಕ್ಕೆ ಸಮಾಜದಲ್ಲಿ ಯೋಗ್ಯ ಗೌರವ ಸಿಗಬೇಕು ಎಂಬ ರೈತಪೀಠ ಪ್ರಶಸ್ತಿಯ ಆಶಯಕ್ಕೆ ಪೂರಕವಾಗಿದೆ.

ರೈತಪೀಠ ಪ್ರಶಸ್ತಿಯ ಮೂಲಕ ರೈತರ ಸ್ವಾಭಿಮಾನವನ್ನು ಎತ್ತಿ ಹಿಡಿಯುವುದರ ಜೊತೆಗೆ, ಯುವ ಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸುವುದು ಮತ್ತೊಂದು ಪ್ರಮುಖ ಉದ್ದೇಶವಾಗಿದೆ. ಇಂದಿನ ಯುವಕರು ಕೃಷಿಯಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ, 35 ಎಕರೆ ಪ್ರದೇಶದಲ್ಲಿ ವಿವಿಧ ರೀತಿಯ ಸಾವಯವ ಕೃಷಿ, ಪಶುಸಂಗೋಪನೆ, ಗೋಸಂರಕ್ಷಣೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ತಯಾರಿ ಮುಂತಾದ ಕೃಷಿ ಪೂರಕ ಚಟುವಟಿಕೆಗಳ ಮೂಲಕ ಕಾರ್ಪೊರೇಟ್ ಮಾದರಿಯ ಕೃಷಿ ಸಾಧ್ಯ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಈ ಸಮಗ್ರ ಕಲ್ಪನೆಯ ಹಿಂದೆ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಕನಸು ಅಡಗಿದೆ. ಕೃಷಿಯನ್ನು ಕೇವಲ ಜೀವನೋಪಾಯದ ವೃತ್ತಿಯಲ್ಲ, ಗೌರವಯುತ ಮತ್ತು ಆತ್ಮಗೌರವವನ್ನು ನೀಡುವ ವೃತ್ತಿಯಾಗಿ ರೂಪಿಸಬೇಕು. ರೈತ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂಬ ದೂರದೃಷ್ಟಿಯೇ ರೈತಪೀಠ ಪ್ರಶಸ್ತಿಗೆ ರೂಪ ನೀಡಿದೆ ಎಂದು ರೈತಪೀಠ ಪ್ರಶಸ್ತಿಯ ಆಯೋಜಕರಾದ ಸವಿತಾ ರಾಮಕೃಷ್ಣ ಆಚಾರ್ಯ ಅವರು ಹೇಳುತ್ತಾರೆ.

ಇದನ್ನೂ ಓದಿ: ಶರಾವತಿ ಪಂಪ್ಡ್​ ಸ್ಟೋರೇಜ್​ಗೆ ಒಪ್ಪಿಗೆ ಇಲ್ಲ : ಜೀವ ವೈವಿಧ್ಯತೆಯ ರಕ್ಷಣೆಯೇ ನಮ್ಮ ಆದ್ಯತೆ ಎಂದ ಕೇಂದ್ರ

ಈ ವಿಷಯದ ಕುರಿತು ಸಾಂಸ್ಕೃತಿಕ ಚಿಂತಕರಾದ ಶ್ರೀಕಾಂತ್‌ ಶೆಟ್ಟಿಯವರು ‘ಒಟ್ಟಾರೆಯಾಗಿ, ರೈತಪೀಠ ಪ್ರಶಸ್ತಿ ಕೇವಲ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮವಲ್ಲ. ಇದು ರೈತ, ಪ್ರಕೃತಿ ಮತ್ತು ಸಮಾಜ ಇವರ ನಡುವಿನ ಸಂಬಂಧವನ್ನು ಮರುಸ್ಥಾಪಿಸುವ ಚಳವಳಿಯಂತಿದೆ. ಜ್ಞಾನಪೀಠದಂತೆ ದೀರ್ಘಕಾಲೀನವಾಗಿ ಪ್ರತಿಷ್ಠಿತ ರಾಷ್ಟ್ರಮಟ್ಟದ ಪ್ರಶಸ್ತಿಯಾಗಿ ರೈತಪೀಠ ಬೆಳೆಯಲಿ, ರೈತರ ಸ್ವಾಭಿಮಾನವನ್ನು ದೇಶಾದ್ಯಂತ ಎತ್ತಿ ಹಿಡಿಯಲಿ ಎಂಬ ಆಶಯದೊಂದಿಗೆ ಈ ವಿಶಿಷ್ಟ ಪ್ರಯತ್ನಕ್ಕೆ ಉಡುಪಿ ವೇದಿಕೆಯಾಗುತ್ತಿದೆ’ಎಂದು ಹೇಳಿದ್ದಾರೆ.

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories