ಮಾನವೀಯತೆ ಮೆರೆದ ಗಂಗೊಳ್ಳಿ ಪೊಲೀಸರು: ದಾರಿ ತಪ್ಪಿದ್ದ ಬುದ್ಧಿಮಾಂದ್ಯ ಬಾಲಕ 12 ಗಂಟೆಯಲ್ಲಿ ಪೋಷಕರ ವಶಕ್ಕೆ

ಉಡುಪಿ: ಕರ್ತವ್ಯದ ಜೊತೆಗೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸರು ಮಾನವೀಯತೆಯನ್ನು ಮೆರೆದಿದ್ದಾರೆ. ದಾರಿ ತಪ್ಪಿ ಬಂದಿದ್ದ 15 ವರ್ಷದ ಬುದ್ಧಿಮಾಂದ್ಯ ಬಾಲಕನನ್ನು ಕೇವಲ 12 ಗಂಟೆಗಳ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿ ದಾವಣಗೆರೆಯಲ್ಲಿದ್ದ ಆತನ ಪೋಷಕರಿಗೆ ಒಪ್ಪಿಸಿದ್ದಾರೆ. ಪೊಲೀಸರ ಈ ತ್ವರಿತ ಕ್ರಮ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ದಾವಣಗೆರೆಯಿಂದ ಉಡುಪಿಗೆ ಬಂದಿದ್ದ ಬಾಲಕ
ದಾವಣಗೆರೆ ಮೂಲದ ಶಂಕರ್ (ಅಲಿಯಾಸ್ ಪ್ರಸಾದ್) ಎಂಬ 15 ವರ್ಷದ ಬಾಲಕ ಕಡುಬಡತನದಲ್ಲಿ ಬೆಳೆದವನು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಈತ, ಬುದ್ಧಿಮಾಂದ್ಯತೆಯಿಂದಾಗಿ ದಾರಿ ತಪ್ಪಿ ದಾವಣಗೆರೆಯಿಂದ ಉಡುಪಿ ಜಿಲ್ಲೆಯ ಗಂಗೊಳ್ಳಿ ವ್ಯಾಪ್ತಿಯ ನಾಡ ಗ್ರಾಮಕ್ಕೆ ಬಂದು ತಲುಪಿದ್ದನು. ರಾತ್ರಿ ವೇಳೆ ಬಾಲಕ ಒಂಟಿಯಾಗಿ ಅಲೆದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮೇಲೆ ಲೋಕಾಯುಕ್ತ ದಾಳಿ; 8.69 ಕೋಟಿ ಮೌಲ್ಯದ ಅಸಮತೋಲ ಆಸ್ತಿ ಪತ್ತೆ
ಪೊಲೀಸರ ತಕ್ಷಣದ ಸ್ಪಂದನೆ ಮತ್ತು ಆರೈಕೆ
ಮಾಹಿತಿ ತಿಳಿಯುತ್ತಿದ್ದಂತೆಯೇ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯ್ಕ್ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸಿದೆ. ಠಾಣೆಗೆ ಕರೆತಂದು ಬಾಲಕನಿಗೆ ಅಗತ್ಯ ಆಹಾರ ಮತ್ತು ಆರೈಕೆ ನೀಡಿದ ಪೊಲೀಸರು, ತಾತ್ಕಾಲಿಕವಾಗಿ ಆತನಿಗೆ ‘ನಮ್ಮ ಭೂಮಿ’ ಸಂಸ್ಥೆಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದರು. ನಂತರ ಮಕ್ಕಳ ಕಲ್ಯಾಣ ಸಮಿತಿಯ (CWC) ಮುಂದೆ ಹಾಜರುಪಡಿಸಿ ಬಾಲಮಂದಿರಕ್ಕೆ ಒಪ್ಪಿಸಲಾಯಿತು.
ವಾಟ್ಸಪ್ ಮೂಲಕ ವಿಳಾಸ ಪತ್ತೆ: 12 ಗಂಟೆಯಲ್ಲೇ ಸುಖಾಂತ್ಯ
ಬಾಲಕನ ಊರು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಠಾಣಾಧಿಕಾರಿ ಪವನ್ ನಾಯ್ಕ್ ಅವರು ದಾವಣಗೆರೆ ಪೊಲೀಸರನ್ನು ಸಂಪರ್ಕಿಸಿ, ಅಲ್ಲಿನ ಗಾಂಧಿನಗರ ಠಾಣೆಯ ಸಿಬ್ಬಂದಿ ರಮೇಶ್ ನಾಯ್ಕ್ ಅವರ ಸಹಕಾರ ಪಡೆದರು. ಬಾಲಕನ ಭಾವಚಿತ್ರವನ್ನು ವಾಟ್ಸಪ್ ಗ್ರೂಪ್ಗಳಲ್ಲಿ ಹಂಚುವ ಮೂಲಕ ತನಿಖೆ ನಡೆಸಿದಾಗ, ಆತ ದಾವಣಗೆರೆಯ ಗಾಂಧಿನಗರದವನು ಎಂಬುದು ಖಚಿತವಾಯಿತು.
ಇದನ್ನೂ ಓದಿ : ಗ್ಯಾಸ್ ಬಿಲ್ ಅಪ್ಡೇಟ್ ಹೆಸರಲ್ಲಿ ಉಡುಪಿ ಮಹಿಳೆಗೆ ₹1.45 ಲಕ್ಷ ನಾಮ ! ಇಪಿಎಸ್ (APK) ಲಿಂಕ್ ಬಗ್ಗೆ ಇರಲಿ ಎಚ್ಚರ
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಠಾಣೆಯ ಸಿಬ್ಬಂದಿಗಳಾದ ರಾಘವೇಂದ್ರ ಪಿ., ಶಾಂತರಾಮ್ ಶೆಟ್ಟಿ, ಚಂದ್ರ ಹಾಗೂ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಮತ್ತು ನಾಗರಾಜ್ ಸತತ ಪರಿಶ್ರಮ ವಹಿಸಿದ್ದಾರೆ. ಅಂತಿಮವಾಗಿ ಪೋಷಕರನ್ನು ಪತ್ತೆ ಹಚ್ಚಿ, ಕಾನೂನು ಪ್ರಕ್ರಿಯೆಗಳ ನಂತರ ಬಾಲಕನನ್ನು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ತಲುಪಿಸಲಾಗಿದೆ.
ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
ತನ್ನ ಊರು, ವಿಳಾಸ ಹೇಳಲಾಗದ ಸ್ಥಿತಿಯಲ್ಲಿದ್ದ ಬಾಲಕನನ್ನು ತಾಂತ್ರಿಕತೆ ಮತ್ತು ಮಾನವೀಯತೆಯ ನೆರವಿನಿಂದ ಕೇವಲ ಅರ್ಧ ದಿನದಲ್ಲಿ ಪೋಷಕರಿಗೆ ಒಪ್ಪಿಸಿದ ಗಂಗೊಳ್ಳಿ ಪೊಲೀಸರ ಕಾರ್ಯಕ್ಷಮತೆ ಈಗ ಎಲ್ಲೆಡೆ ಸುದ್ದಿಯಾಗಿದೆ.
Udupi gangolli police rescue missing boy from davanagere



