ಗ್ಯಾಸ್ ಬಿಲ್ ಅಪ್‌ಡೇಟ್ ಹೆಸರಲ್ಲಿ ಉಡುಪಿ ಮಹಿಳೆಗೆ ₹1.45 ಲಕ್ಷ ನಾಮ ! ಇಪಿಎಸ್‌ (APK) ಲಿಂಕ್ ಬಗ್ಗೆ ಇರಲಿ ಎಚ್ಚರ

ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ಬರುವ ಯಾವುದೇ ಅಪ್ಲಿಕೇಶನ್ ಲಿಂಕ್‌ಗಳನ್ನು (APK Files) ಎಂದಿಗೂ ಡೌನ್‌ಲೋಡ್ ಮಾಡಬೇಡಿ.

ಉಡುಪಿ: ಆಧುನಿಕ ಡಿಜಿಟಲ್ ಯುಗದಲ್ಲಿ ಸೈಬರ್ ವಂಚಕರು ಹೊಸ ಹೊಸ ಹಾದಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಗ್ಯಾಸ್ ಬಿಲ್ ಅಪ್‌ಡೇಟ್ ಮಾಡುವ ನೆಪದಲ್ಲಿ ಉಡುಪಿಯ ಮಹಿಳೆಯೊಬ್ಬರಿಗೆ ಆಮಿಷ ಒಡ್ಡಿ, ದಂಪತಿಯ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹1,45,022 ಹಣವನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಉಡುಪಿ ನಿವಾಸಿ ಲೀಲಿ ಪ್ಲೋರಿನ್ ಡಿಸಿಲ್ವಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಮಹಾನಗರ ಗ್ಯಾಸ್ ಕಂಪನಿ ಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ನೀವು ಆನ್‌ಲೈನ್‌ನಲ್ಲಿ ಪಾವತಿಸಿದ ಗ್ಯಾಸ್ ಬಿಲ್ ಇನ್ನೂ ಅಪ್‌ಡೇಟ್ ಆಗಿಲ್ಲ, ಅದನ್ನು ಸರಿಪಡಿಸದಿದ್ದರೆ ಸಂಪರ್ಕ ಕಡಿತಗೊಳ್ಳಬಹುದು” ಎಂದು ನಂಬಿಸಿದ್ದಾನೆ.

ಬಳಿಕ ವಾಟ್ಸಾಪ್ ಮೂಲಕ ಒಂದು APK (ಎಪಿಕೆ) ಆಪ್ ಲಿಂಕ್ ಕಳುಹಿಸಿ, ಅದನ್ನು ಡೌನ್‌ಲೋಡ್ ಮಾಡುವಂತೆ ಸೂಚಿಸಿದ್ದಾನೆ. ಮಹಿಳೆ ಆಪ್ ಡೌನ್‌ಲೋಡ್ ಮಾಡಿದ ತಕ್ಷಣ ವಂಚಕ ಅವರ ಮೊಬೈಲ್ ಮೇಲೆ ನಿಯಂತ್ರಣ ಸಾಧಿಸಿದ್ದಾನೆ. ಅಷ್ಟಕ್ಕೇ ನಿಲ್ಲದ ಆರೋಪಿ, ತಾಂತ್ರಿಕ ದೋಷದ ನೆಪವೊಡ್ಡಿ ಅವರ ಪತಿಯ ಬ್ಯಾಂಕ್ ಖಾತೆ ವಿವರಗಳನ್ನೂ ಪಡೆದುಕೊಂಡಿದ್ದಾನೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಸುಡುವ ಬಿಸಿಲು: ಬೆಂಗಳೂರು, ಉಡುಪಿ ಸೇರಿ ಹಲವೆಡೆ ತಾಪಮಾನ ಏರಿಕೆ; ‘ಹೀಟ್’ ಅಲರ್ಟ್ ಎಚ್ಚರಿಕೆ ?

ದಂಪತಿಯ ಖಾತೆಯಿಂದ ಕ್ಷಣಾರ್ಧದಲ್ಲಿ ಹಣ ಮಾಯ!

ಅಪರಾಹ್ನ 4 ಗಂಟೆ ಸುಮಾರಿಗೆ ಲೀಲಿ ಅವರ ಮೊಬೈಲ್‌ಗೆ ಸರಣಿ ಸಂದೇಶಗಳು ಬರಲಾರಂಭಿಸಿದವು. ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ ಅಘಾತ ಕಾದಿತ್ತು. ಲೀಲಿ ಅವರ ಖಾತೆಯಿಂದ ಎರಡು ಹಂತಗಳಲ್ಲಿ ₹46,636 ಮತ್ತು ₹29,381 ಕಡಿತವಾಗಿತ್ತು. ಇದೇ ವೇಳೆ ಅವರ ಪತಿಯ ಖಾತೆಯಿಂದಲೂ ₹69,005 ವರ್ಗಾವಣೆಯಾಗಿದ್ದು, ಒಟ್ಟು ₹1,45,022 ವಂಚನೆಯಾಗಿದೆ.

ಇದನ್ನೂ ಓದಿ : ರಕ್ಷಿತಾ ಶೆಟ್ಟಿ ಹುಟ್ಟುಹಬ್ಬಕ್ಕೆ ‘ಹೊಸಬದುಕು’ ಆಶ್ರಮ ಸಾಕ್ಷಿ: ನಿವಾಸಿಗಳೊಂದಿಗೆ ಕುಣಿದು ಕುಪ್ಪಳಿಸಿದ ಬಿಗ್ ಬಾಸ್ ರನ್ನರ್ ಅಪ್!

ಸೈಬರ್ ಸುರಕ್ಷತೆಗಾಗಿ ಈ ಅಂಶಗಳನ್ನು ಗಮನಿಸಿ

  • ಅಪರಿಚಿತ ಲಿಂಕ್‌ಗಳು: ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ಬರುವ ಯಾವುದೇ ಅಪ್ಲಿಕೇಶನ್ ಲಿಂಕ್‌ಗಳನ್ನು (APK Files) ಎಂದಿಗೂ ಡೌನ್‌ಲೋಡ್ ಮಾಡಬೇಡಿ.
  • ಅಧಿಕೃತ ಆಪ್‌ಗಳು: ಯಾವುದೇ ಬಿಲ್ ಪಾವತಿ ಅಥವಾ ಅಪ್‌ಡೇಟ್ ಮಾಡಲು ಆಯಾ ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಪ್ಲೇ-ಸ್ಟೋರ್‌ನಲ್ಲಿರುವ ಅಧಿಕೃತ ಆಪ್‌ಗಳನ್ನು ಮಾತ್ರ ಬಳಸಿ.
  • ಬ್ಯಾಂಕ್ ವಿವರ: ಯಾವುದೇ ಕಂಪನಿಯ ಪ್ರತಿನಿಧಿಗಳು ಫೋನ್ ಕರೆ ಮೂಲಕ ನಿಮ್ಮ ಬ್ಯಾಂಕ್ ವಿವರ ಅಥವಾ ಓಟಿಪಿ (OTP) ಕೇಳುವುದಿಲ್ಲ.

ಸದ್ಯ ಲೀಲಿ ಪ್ಲೋರಿನ್ ಡಿಸಿಲ್ವಾ ಅವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories