ಚಂಡೀಗಢ: ಕೇವಲ 20 ರೂಪಾಯಿ ಮುಖಬೆಲೆಯ (MRP) ನೀರಿನ ಬಾಟಲಿಯನ್ನು 55 ರೂಪಾಯಿಗೆ ಮಾರಾಟ ಮಾಡಿದ ರೆಸ್ಟೋರೆಂಟ್ಗೆ ಚಂಡೀಗಢದ ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (SCDRC) ತಪರಾಕಿ ನೀಡಿದೆ. ಇದೊಂದು ‘ಅನ್ಯಾಯದ ವ್ಯಾಪಾರ ಪದ್ಧತಿ’ ಎಂದು ಘೋಷಿಸಿರುವ ನ್ಯಾಯಾಲಯವು, ಗ್ರಾಹಕರಿಗೆ ನ್ಯಾಯ ಒದಗಿಸಿದೆ.
ಘಟನೆಯ ಹಿನ್ನೆಲೆ: ಡಿಸೆಂಬರ್ 12, 2023 ರಂದು ಖನ್ನಾ ಎಂಬ ಮಹಿಳೆ ಚಂಡೀಗಢದ ರೆಸ್ಟೋರೆಂಟ್ಗೆ ರಾತ್ರಿ ಊಟಕ್ಕೆ ತೆರಳಿದ್ದರು. ಅಲ್ಲಿ ಅವರಿಗೆ ನೀಡಲಾದ ಒಟ್ಟು 1,922 ರೂಪಾಯಿ ಬಿಲ್ನಲ್ಲಿ, 20 ರೂಪಾಯಿ ಎಂಆರ್ಪಿ ಹೊಂದಿದ್ದ ಅಕ್ವಾಫಿನಾ ನೀರಿನ ಬಾಟಲಿಗೆ 55 ರೂಪಾಯಿ ವಿಧಿಸಲಾಗಿತ್ತು. ಇದರ ವಿರುದ್ಧ ಜಿಲ್ಲಾ ಗ್ರಾಹಕ ಆಯೋಗದಲ್ಲಿ ಮೊದಲು ದೂರು ನೀಡಿದಾಗ ಅದು ವಜಾಗೊಂಡಿತ್ತು. ಆದರೆ, ಮಹಿಳೆ ಧೃತಿಗೆಡದೆ ತಾವೇ ವಾದ ಮಂಡಿಸಿ ರಾಜ್ಯ ಆಯೋಗದ ಮೆಟ್ಟಿಲೇರಿದ್ದರು.
ರೆಸ್ಟೋರೆಂಟ್ ನೀಡಿದ ವಿಲಕ್ಷಣ ವಾದ: ವಿಚಾರಣೆ ವೇಳೆ ರೆಸ್ಟೋರೆಂಟ್ ಪರ ವಕೀಲರು, “ನಾವು ಕೇವಲ ನೀರನ್ನು ಮಾತ್ರ ನೀಡುತ್ತಿಲ್ಲ, ಜೊತೆಗೆ ಹವಾನಿಯಂತ್ರಿತ ವ್ಯವಸ್ಥೆ, ಕುಳಿತುಕೊಳ್ಳಲು ಉತ್ತಮ ಜಾಗ, ಸುಂದರ ಪರಿಸರ ಮತ್ತು ಸೇವೆಯನ್ನು ನೀಡುತ್ತಿದ್ದೇವೆ. ಈ ಕಾರಣಕ್ಕಾಗಿ ಹೆಚ್ಚಿನ ಹಣ ವಸೂಲಿ ಮಾಡುವುದು ಸಮಂಜಸ” ಎಂದು ವಾದಿಸಿದ್ದರು.
ಯಶ್ ಟಾಕ್ಸಿಕ್ ಟೀಸರ್ಗೆ ಕಾನೂನು ಸಂಕಷ್ಟ: ಸೆನ್ಸಾರ್ ಮಂಡಳಿಗೆ ದೂರು ನೀಡಿದ ವಕೀಲ!
ಕಾನೂನು ಏನು ಹೇಳುತ್ತದೆ?: ರೆಸ್ಟೋರೆಂಟ್ನ ಈ ವಾದವನ್ನು ಆಯೋಗವು ಸಂಪೂರ್ಣವಾಗಿ ತಿರಸ್ಕರಿಸಿತು. “ರೆಸ್ಟೋರೆಂಟ್ಗಳು ತಮ್ಮ ಮೆನುವಿನಲ್ಲಿರುವ ಆಹಾರ ಪದಾರ್ಥಗಳಿಗೆ ತಮಗೆ ಇಷ್ಟ ಬಂದ ಬೆಲೆ ನಿಗದಿಪಡಿಸುವ ಸ್ವಾತಂತ್ರ್ಯ ಹೊಂದಿವೆ. ಆದರೆ, ಬೆಲೆ ಮುದ್ರಿತವಾಗಿರುವ (MRP) ಪ್ಯಾಕೇಜ್ ಮಾಡಿದ ವಸ್ತುಗಳಿಗೆ (ನೀರಿನ ಬಾಟಲಿ, ತಂಪು ಪಾನೀಯ ಇತ್ಯಾದಿ) ಹೆಚ್ಚಿನ ಬೆಲೆ ವಿಧಿಸುವಂತಿಲ್ಲ” ಎಂದು ಆಯೋಗ ಸ್ಪಷ್ಟಪಡಿಸಿತು.
2011ರ ಕಾನೂನು ಮಾಪನಶಾಸ್ತ್ರ ನಿಯಮಗಳ ಪ್ರಕಾರ, ಎಂಆರ್ಪಿ ಎಂದರೆ ತೆರಿಗೆ, ಪ್ಯಾಕೇಜಿಂಗ್ ಮತ್ತು ಲಾಭಾಂಶ ಸೇರಿದಂತೆ ಗರಿಷ್ಠ ಬೆಲೆಯಾಗಿದೆ. ಇದನ್ನು ಮೀರಿ ಮಾರಾಟ ಮಾಡುವುದು ಕಾನೂನು ಉಲ್ಲಂಘನೆ. ಈಗಾಗಲೇ ಎಂಆರ್ಪಿಯಲ್ಲಿ ತೆರಿಗೆ ಸೇರಿದ್ದರೂ, ರೆಸ್ಟೋರೆಂಟ್ ಹೆಚ್ಚುವರಿ ಬೆಲೆಯ ಮೇಲೆ ಮತ್ತೆ ಜಿಎಸ್ಟಿ ವಿಧಿಸಿರುವುದು ಗ್ರಾಹಕರಿಗೆ ಮಾಡಿದ ದ್ರೋಹವಾಗಿದೆ. ಈ ಪ್ರಕರಣವು ಗ್ರಾಹಕರು ಜಾಗೃತರಾಗಿದ್ದರೆ ದೊಡ್ಡ ಸಂಸ್ಥೆಗಳ ದೌರ್ಜನ್ಯದ ವಿರುದ್ಧ ಜಯಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.



