ಧರ್ಮಸ್ಥಳದಲ್ಲಿ ಎಷ್ಟು ಗುಂಡಿ ತೆಗೆಯುತ್ತೀರಿ? ಗೃಹ ಸಚಿವರಿಗೆ ಸುನೀಲ್ ಕುಮಾರ್ ಪ್ರಶ್ನೆ

Dharmasthala Sunil Kumar : ಬೆಂಗಳೂರು: ನಿರೀಕ್ಷೆಯಂತೆ ಧರ್ಮಸ್ಥಳ ಬುರುಡೆ ಪ್ರಕರಣ ಈಗ ವಿಧಾನಸಭೆಯಲ್ಲೂ ಸದ್ದು ಮಾಡಿದ್ದು, ಧರ್ಮಸ್ಥಳದಲ್ಲಿ ಇನ್ನೆಷ್ಟು ಗುಂಡು ತೆಗೆಯುತ್ತೀರಿ? ಎಂದು ಬಿಜೆಪಿ ಹಿರಿಯ ಶಾಸಕ ವಿ.ಸುನೀಲ್ ಕುಮಾರ್ ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ.
ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು ಎಸ್ಐಟಿ ತನಿಖೆ ಸಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಧರ್ಮಸ್ಥಳ ಹಿಂದುಗಳ ಶ್ರದ್ಧಾಕೇಂದ್ರ. ಯಾರೋ ಆರೋಪಿಸಿದರು ಎಂಬ ಮಾತ್ರಕ್ಕೆ ದಿನಕ್ಕೊಂದು ಗುಂಡಿ ತೆಗೆಯುತ್ತಾ ಹೋದರೆ ಹೇಗೆ? ಈ ಬಗ್ಗೆ ಸರ್ಕಾರ ಸ್ಪಷ್ಟ ಹೇಳಿಕೆಯನ್ನು ಸದನದಲ್ಲಿ ನೀಡಬೇಕು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಪಟ್ಟು ಹಿಡಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಎಸ್ಐಟಿ ತನಿಖೆಯನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸುತ್ತೇವೆ. ಮನಬಂದಂತೆ ನೂರಾರು ಗುಂಡಿ ತೆಗೆಯಲು ಸಾಧ್ಯವಿಲ್ಲ. ಎಸ್ಐಟಿ ವರದಿ ಬರುವವರೆಗೆ ಹೇಳಿಕೆ ನೀಡುವುದು ಸರಿಯಾಗುವುದಿಲ್ಲ ಎಂದರು.
ಇದನ್ನೂ ಓದಿ : ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ನರೇಂದ್ರ ಮೋದಿ ಪ್ರಯಾಣ
ಇದನ್ನು ಒಪ್ಪದ ಬಿಜೆಪಿ ಶಾಸಕರು, ದಿನಕ್ಕೊಂದು ಕಥೆ ಹೆಣೆಯಲಾಗುತ್ತಿದೆ. ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ಬಂದಿದೆ. ಕೂಡಲೇ ಸರ್ಕಾರ ಸ್ಪಷ್ಟನೆ ನೀಡಬೇಕು. ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದ ಪರಿಣಾಮ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಯಾರ ಪರವೂ ಅಲ್ಲ; ಈ ಹಂತದಲ್ಲಿ ಎದ್ದುನಿಂತ ಸುರೇಶ್ ಕುಮಾರ್, ಎಡಪಂಥೀಯರ ಒತ್ತಡಕ್ಕೆ ಮಣಿದು ಸರ್ಕಾರ ಎಸ್ಐಟಿ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಹೇಳಿಕೆಯನ್ನು ಸದನದ ಗಮನಕ್ಕೆ ತಂದರು. ಇದಕ್ಕೆ ಸ್ಪಷ್ಟನೆ ನೀಡಿದ ದಿನೇಶ್ ಗುಂಡೂರಾವ್ ನಾವೂ ಎಡವೂ ಅಲ್ಲ, ಬಲವೂ ಅಲ್ಲ. ಸತ್ಯದ ಪರ ಎಂದು ಹೇಳಿದರು.
ಇದನ್ನೂ ಓದಿ : ಯುವನಿಧಿ ಯೋಜನೆ : ಈ ಕೆಲಸ ಮಾಡದೇ ಇದ್ರೆ ಇನ್ಮುಂದೆ ಸಿಗಲ್ಲ ಹಣ
(How many potholes will you remove in Dharmasthala Sunil Kumar questions Home Minister)



