ನವರಾತ್ರಿಯಲ್ಲಿ ದೇವಿಯ ನೈವೇದ್ಯ, ಉಪವಾಸ ಎರಡಕ್ಕೂ ಬೆಸ್ಟ್ ಸಬ್ಬಕ್ಕಿ ಪಾಯಸ
Navaratri Recipes 2025: ಒಂಬತ್ತು ದಿನಗಳ ಕಾಲ ದೇವಿಯನ್ನು ಆರಾಧಿಸುವ ನವರಾತ್ರಿ ಆಚರಣೆ ಪ್ರಾರಂಭವಾಗಿದೆ. ಪ್ರತಿ ದಿನ ದೇವಿಯ ಒಂದು ರೂಪವನ್ನು ಪೂಜಿಸಲಾಗುತ್ತದೆ.
ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಶ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ, ಸಿಧ್ಧಿಧಾತ್ರಿ ಎಂದು 9 ರೂಪಗಳಲ್ಲಿ ದೇವಿಯನ್ನು ಆರಾಧಿಸುತ್ತಾರೆ.
ನವರಾತ್ರಿಯ ಸಮಯದಲ್ಲಿ ಉಪವಾಸವಿದ್ದು ದೇವಿಯ ಪೂಜೆ ಮಾಡಿ, ನೈವೇದ್ಯ ಅರ್ಪಿಸುತ್ತಾರೆ. ನವರಾತ್ರಿಯ ಹಬ್ಬದ ಸಮಯದಲ್ಲಿ ದೇವಿಗೆ ಅರ್ಪಿಸಲು ವಿಶೇಷ ನೈವೇದ್ಯ ತಯಾರಿಸಲು ಬಯಸಿದರೆ ಅದಕ್ಕೆ ಸಬ್ಬಕ್ಕಿಯ ಪಾಯಸ ಉತ್ತಮವಾಗಿದೆ.
ಇದು ಉಪವಾಸಕ್ಕು ಯೋಗ್ಯವಾಗಿರುವುದರ ಜೊತೆಗೆ ಜೀರ್ಣಕ್ರಿಯೆಗೂ ಉತ್ತಮವೆಂದು ಹೇಳಲಾಗುತ್ತದೆ. ಅತ್ಯಂತ ಸುಲಭವಾಗಿ ಹಾಗೂ ಕಡಿಮೆ ಸಾಮಗ್ರಿಗಳನ್ನು ಉಪಯೋಗಿಸಿ ರುಚಿಯಾದ ಸಬ್ಬಕ್ಕಿ ಪಾಯಸ ತಯಾರಿಸುವುದು ಹೇಗೆ ಎಂದು ನೋಡೋಣ.
ಸಬ್ಬಕ್ಕಿ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ – 1 ಕಪ್
ಹಾಲು – 1ಲೀಟರ್
ಸಕ್ಕರೆ – 1 ಕಪ್
ಗೋಡಂಬಿ, ದ್ರಾಕ್ಷಿ – 8–10
ಏಲಕ್ಕಿ ಪುಡಿ – 1/2 ಚಮಚ
ಇದನ್ನೂ ಓದಿ: ಚಂದ್ರಘಂಟೇಯಾಗಿ ಪೂಜಿತಳಾಗುತ್ತಾಳೆ ತಾಯಿ : ನೀಲಿ ಬಣ್ಣದ ವಸ್ತ್ರ ಪೂಜೆಗೆ ಶ್ರೇಷ್ಠ
ಸಬ್ಬಕ್ಕಿ ಪಾಯಸ ತಯಾರಿಸುವ ವಿಧಾನ
ಮೊದಲಿಗೆ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆಗಳ ಕಾಲ ನೆನೆಯಲು ಇಡಿ. ನಂತರ ಒಂದು ದಪ್ಪ ತಳದ ಪಾತ್ರೆಗೆ ಹಾಲನ್ನು ಹಾಕಿ ಬಿಸಿ ಮಾಡಿ. ಸಬ್ಬಕ್ಕಿಯ ನೀರನ್ನು ಬಸಿದುಕೊಂಡು, ಸ್ಟವ್ ಮೇಲಿರುವ ಹಾಲಿನ ಪಾತ್ರೆಗೆ ಬೆರೆಸಿ.
ಪಾಯಸ ಪಾತ್ರೆಯ ತಳ ಹಿಡಿಯದಂತೆ ಒಂದು ದೊಡ್ಡ ಚಮಚದ ಸಹಾಯದಿಂದ ತಿರುವುತ್ತಾ ಇರಿ. ಸಬ್ಬಕ್ಕಿ ಮೃದುವಾಗುತ್ತ ಬಂದ ನಂತರ ಅದಕ್ಕೆ ಸಕ್ಕರೆ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ.
ಸಕ್ಕರೆ ಸಂಪೂರ್ಣವಾಗಿ ಕರಗಿ ಕುದಿಯಲು ಪ್ರಾರಂಭಿಸಿದ ನಂತರ ಅದಕ್ಕೆ ಗೋಡಂಬಿ, ದ್ರಾಕ್ಷಿ ಸೇರಿಸಿ. ಇನ್ನೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಸಬ್ಬಕ್ಕಿ ಪಾಯಸಕ್ಕೆ ಏಲಕ್ಕಿ ಸೇರಿಸಿ ಮತ್ತೊಂದೆರಡು ನಿಮಿಷ ಕುದಿಸಿ.
ಈಗ ರುಚಿಯಾದ ಸಬ್ಬಕ್ಕಿ ಪಾಯಸ ಸಿದ್ಧ. ಇದನ್ನು ದೇವಿಗೆ ಅರ್ಪಿಸಿ. ಉಪವಾಸ ವ್ರತಾಚರಣೆಯಲ್ಲೂ ಈ ಪಾಯಸ ಕುಡಿಯಬಹುದು.
ಇದನ್ನೂ ಓದಿ: ನವರಾತ್ರಿಯಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿ; ದುರ್ಗಾ ದೇವಿಯ ಜೊತೆಗೆ ಶನಿ ದೇವರ ಆಶೀರ್ವಾದ ಪಡೆಯಿರಿ
(Navaratri 2025 Special Sweet Recipes how to make easy and tasty sabudana payasam)



