11,000 ಉದ್ಯೋಗಿಗಳನ್ನು ವಜಾಗೊಳಿಸಿದ ಆಕ್ಸೆಂಚರ್: ಕಾರಣ ಏನು?
Accenture Layoffs: ಎಐನ ಬಳಕೆಯಿಂದಾಗಿ ಪ್ರಪಂಚದಾದ್ಯಂತ ಅನೇಕ ಕಂಪನಿಗಳು ಉದ್ಯೋಗ ಕಡಿತವನ್ನು ಮಾಡುತ್ತಿವೆ. ಇತ್ತೀಚೆಗಷ್ಟೇ ಟಿಸಿಎಸ್ ತನ್ನ ನೌಕರರನ್ನು ವಜಾ ಗೊಳಿಸಿತ್ತು.
ಇದೀಗ ಐಟಿ ಮತ್ತು ಕನ್ಸಲ್ಟಿಂಗ್ ದೈತ್ಯ ಸಂಸ್ಥೆ ಆಕ್ಸೆಂಚರ್ ಜಾಗತಿಕವಾಗಿ ತನ್ನ 11,000 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ತನ್ನ ತ್ರೈಮಾಸಿಕ ಫಲಿತಾಂಶದ ಜೊತೆಗೆ ಘೋಷಿಸಿದೆ.
ಮುಂಬರುವ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಉದ್ಯೋಗ ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಕಂಪನಿ ಹೇಳಿದೆ. ಮಾಧ್ಯಮಗಳ ವರದಿಯ ಪ್ರಕಾರ ಈ ಉದ್ಯೋಗ ಕಡಿತಕ್ಕೆ ಎಐ ಅನ್ನು ಅಳವಡಿಸಿಕೊಳ್ಳುತ್ತಿರುವುದು ಹಾಗೂ ಅದರಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿರುವುದೇ ಕಾರಣವಾಗಿದೆ.
‘ಅಗತ್ಯವಿರುವ ಹೊಸ ಸಾಮರ್ಥ್ಯಗಳನ್ನು ಹೊಂದಿರುವವರಿಗೆ ಅವಕಾಶ ಕಲ್ಪಿಸಲು, ನಿರ್ದಿಷ್ಟ ಕಾಲಮಿತಿಯೊಳಗೆ ಅಗತ್ಯವಿರುವ ಕೌಶಲಗಳನ್ನು ಕಲಿಯಲು ಅಸಾಧ್ಯವಾದ ವ್ಯಕ್ತಿಗಳನ್ನು ತೆಗೆದುಹಾಕುತ್ತಿದ್ದೇವೆ’ ಎಂದು ಕಂಪನಿಯ ಸಿಇಒ ಜೂಲಿ ಸ್ವೀಟ್ ಹೇಳಿದ್ದಾರೆ.
ಆಗಸ್ಟ್ ಅಂತ್ಯದ ವೇಳೆಗೆ, ಆಕ್ಸೆಂಚರ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆಯು 7,79,000 ಕ್ಕೆ ಇಳಿದಿದೆ. ಇದು ಹಿಂದಿನ ಮೂರು ತಿಂಗಳಲ್ಲಿ 7,91,000 ರಷ್ಟಿತ್ತು. ಈ ವರ್ಷದ ಆರಂಭದಲ್ಲಿ ಪ್ರಾರಂಭವಾದ ವಜಾಗಳು ನವೆಂಬರ್ವರೆಗೆ ಮುಂದುವರಿಯಲಿವೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಹ್ಯಾಪಿ ಬರ್ತ್ಡೇ ಗೂಗಲ್: ಕಾಗುಣಿತದ ಒಂದು ಚಿಕ್ಕ ತಪ್ಪಿನಿಂದ ಹೊಸ ಸರ್ಚ್ ಇಂಜಿನ್ ಹುಟ್ಟಿದ್ದೇಗೆ?
ಕಂಪನಿಯು ತನ್ನ ಆರು ತಿಂಗಳ ಮರುಕೌಶಲ ಮತ್ತು ಪುನರ್ರಚನೆ ಕಾರ್ಯಕ್ರಮದ ಮೂಲಕ ಒಂದು ಶತಕೋಟಿ ಡಾಲರ್ಗಳಿಗಿಂತ ಹೆಚ್ಚು ಉಳಿಸಲು ಯೋಜಿಸಿದೆ. ಹೆಚ್ಚುತ್ತಿರುವ ಕ್ಲೈಂಟ್ ಬೇಡಿಕೆಗಳನ್ನು ಪೂರೈಸಲು ಉದ್ಯೋಗಿಗಳಿಗೆ AI ನಲ್ಲಿ ತರಬೇತಿ ನೀಡಲಾಗುತ್ತಿದೆ.
ಈ ತಿಂಗಳು ಉದ್ಯೋಗಿಗಳಿಗೆ AI ನ ಮೂಲಭೂತ ಅಂಶಗಳನ್ನು ಕಲಿಸಲಾಗುತ್ತಿದೆ ಎಂದು ಸಿಇಒ ಸ್ವೀಟ್ ಬ್ಲೂಮ್ಬರ್ಗ್ ಟಿವಿಗೆ ತಿಳಿಸಿದ್ದಾರೆ. ಆಕ್ಸೆಂಚರ್ ಜೂನ್–ಆಗಸ್ಟ್ 2025 ರ ತ್ರೈಮಾಸಿಕದಲ್ಲಿ 17.60 ಬಿಲಿಯನ್ ಡಾಲರ್ ಆದಾಯ ವರದಿ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 7 ರಷ್ಟು ಹೆಚ್ಚಾಗಿದೆ.
ಆಕ್ಸೆಂಚರ್ ಉದ್ಯೋಗ ಕಡಿತಗೊಳಿಸುವ ಸ್ವಲ್ಪ ದಿನ ಮೊದಲು ಭಾರತದ ದೈತ್ಯ ಐಟಿ ಸಂಸ್ಥೆ ಟಿಸಿಎಸ್ ಈ ವರ್ಷ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದಕ್ಕೆ ಎಐ ಮತ್ತು ಬದಲಾಗುತ್ತಿರುವ ವ್ಯವಹಾರ ಬೇಡಿಕೆ ಕಾರಣವಾಗಿತ್ತು.
ಇದನ್ನು ಟಿಸಿಎಸ್ನ ಸಿಇಒ, ಕಂಪನಿಯ ಭವಿಷ್ಯಕ್ಕೆ ಸಿದ್ಧತೆ ಮತ್ತು ಹೊಂದಿಕೊಳ್ಳುವಂತೆ ಮಾಡುವ ಕಾರ್ಯತಂತ್ರದ ಕ್ರಮ ಎಂದು ಬಣ್ಣಿಸಿದ್ದರು.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ವಾ ಫೋನ್ ದರದಲ್ಲಿ ಭಾರಿ ಕಡಿತ! ಪ್ರೀಮಿಯಂ ಆಂಡ್ರಾಯ್ಡ್ ಫೋನ್ ಖರೀದಿಗೆ ಸಕಾಲ
(IT Company Accenture layoffs employees AI is the reason)



