ಪಾದ ತೊಳೆದು ನೀರು ಕುಡಿಯುವಂತೆ ಯುವಕನಿಗೆ ಚಿತ್ರಹಿಂಸೆ : ವೈರಲ್ ಆಯ್ತು ಅಮಾನವೀಯ ವಿಡಿಯೋ
Viral News: ಈಗ ಇನ್ಸ್ಟಾಗ್ರಾಂ(Instagram) ಬಳಕೆ ಮಾಡದವರು ಯಾರೂ ಇಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರ ಮೊಬೈಲ್ನಲ್ಲೂ ಇನ್ಸ್ಟಾಗ್ರಾಂ ಖಾತೆ ಇದ್ದೇ ಇರುತ್ತದೆ. ಆದರೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಇನ್ಸ್ಟಾಗ್ರಾಂನ ಪೋಸ್ಟ್ ಒಂದನ್ನು ಆಧರಿಸಿ ಒಬಿಸಿ ಸಮುದಾಯದ ಯುವಕನೊಬ್ಬನ ಬಳಿ ಬ್ರಾಹ್ಮಣ ವ್ಯಕ್ತಿಯ ಪಾದ ತೊಳೆದು ನೀರು ಕುಡಿಯುವಂತೆ ಒತ್ತಾಯಿಸಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ದಾಮೋಹ್ನ ಸತಾರಿಯಾ ಗ್ರಾಮದ ಪುರುಷೋತ್ತಮ್ ಕುಶ್ವಾಹ ಎಂಬಾತ ಇನ್ಸ್ಟಾಗ್ರಾಂನಲ್ಲಿ AI ತಂತ್ರಜ್ಞಾನದ ಸಹಾಯದಿಂದ ಅಣ್ಣು ಪಾಂಡೆ ಎಂಬಾತನ ಫೋಟೋಗೆ ಚಪ್ಪಲಿ ಮಾಲೆ ಹಾಕಿದ್ದ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆ ಫೋಟೋವನ್ನು ಡಿಲೀಟ್ ಮಾಡಿದ್ದ ಪುರುಷೋತ್ತಮ್ ಕ್ಷಮಾಪಣೆಯನ್ನೂ ಕೇಳಿದ್ದ ಎನ್ನಲಾಗಿದೆ.
Also Read: ವಿಶ್ವದ ಅತಿ ಶ್ರೀಮಂತ ಈ ರಾಜಕುಮಾರಿಯ ಆದಾಯ ಕೇಳಿದ್ರೆ ತಲೆ ತಿರುಗುತ್ತೆ
ಆದರೆ ಇಲ್ಲಿಗೆ ಪ್ರಕರಣ ಕೊನೆಗಂಡಿರಲಿಲ್ಲ. ಗ್ರಾಮ ಪಂಚಾಯತ ಮಟ್ಟದಲ್ಲಿ ಸಭೆ ನಡೆಸಿ ಪಾಂಡೆಯ ಪಾದಗಳನ್ನು ತೊಳೆದು ನೀರು ಕುಡಿಯುವಂತೆ ಕುಶ್ವಾಹಗೆ ಒತ್ತಾಯಿಸಲಾಯಿತು ಹಾಗೂ 5100 ರೂಪಾಯಿಗಳ ದಂಡವನ್ನೂ ವಿಧಿಸಲಾಗಿತ್ತು. ಈ ಅಮಾನವೀಯ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು ಗ್ರಾಮಸ್ಥರ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಸ್ಥಳೀಯ ಠಾಣೆ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಈ ಸಂಬಂಧ ಪುರುಷೋತ್ತಮ್ ಯಾವುದೇ ರೀತಿಯ ದೂರನ್ನು ದಾಖಲಿಸಿಲ್ಲ. ಪಾಂಡೆ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ನ್ನು ಪೊಲೀಸರು ಸ್ವಯಂಪ್ರೇರತರಾಗಿ ದಾಖಲಿಸಿಕೊಂಡಿದ್ದಾರೆ ಎಂದು ದಾಮೋಹ್ ಜಿಲ್ಲಾಧಿಕಾರಿ ಸುಧೀರ್ ಕುಮಾರ್ ಕೊಚ್ಚರ್ ಮಾಹಿತಿ ನೀಡಿದ್ದಾರೆ.
Also Read: ಧ್ವಂಸವಾಗಲಿದೆಯಾ ಪ್ಯಾರಿಸ್ನ ಐಕಾನಿಕ್ ಐಫೆಲ್ ಟವರ್ : ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು
ಪುರುಷೋತ್ತಮ್ನ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಆತ ನಾನು ಮಾಡಿರುವ ತಪ್ಪಿಗೆ ಕ್ಷಮೆಯಾಚಿಸುತ್ತೇನೆ. ಹಾಗೂ ಇದರಲ್ಲಿ ಯಾವುದೇ ರಾಜಕೀಯ ಮಿಶ್ರಣ ಮಾಡುವ ಇಚ್ಛೆ ನನಗಿಲ್ಲ ಎಂದು ಹೇಳಿದ್ದಾನೆ.
ದಾಮೋಹ್ನಲ್ಲಿ ನಡೆದ ಈ ಘಟನೆಯು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಈ ಘಟನೆಯನ್ನು ಮಾನವೀಯತೆಗೆ ಬಳಿದ ಕಳಂಕ ಎಂದು ಖಂಡಿಸಿದರೆ ಆಡಳಿತಾರೂಢ ಬಿಜೆಪಿ ಪ್ರತಿ ಪ್ರಕರಣಗಳಿಗೂ ರಾಜಕೀಯ ಬಣ್ಣ ಬಳಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ.



