ದಾಂಪತ್ಯ ಕಲಹ : ಪುತ್ರಿಯ ಎದುರಲ್ಲೇ ಗುಂಡಿಕ್ಕಿ ಪತ್ನಿಯನ್ನು ಕೊಂದ ಪತಿ
Marital dispute: ದಾಂಪತ್ಯ ಜೀವನದಲ್ಲಿ ಕಲಹಗಳು ಸರ್ವೇ ಸಾಮಾನ್ಯ. ಆದರೆ ಉತ್ತರ ಪ್ರದೇಶದ ಗಾಜಿಯಾಬಾದ್ ಎಂಬಲ್ಲಿ ಪತಿ – ಪತ್ನಿ ನಡುವೆ ನಡೆದ ಜಗಳವು ವಿಕೋಪಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ನಿಯಂತ್ರಣ ತಪ್ಪಿದ ಪರಿಣಾಮ ಪುತ್ರಿಯ ಎದುರಲ್ಲೇ 45 ವರ್ಷದ ವ್ಯಕ್ತಿಯು ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಸ್ಥಳೀಯ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಬಳಿಕ ಆರೋಪಿಯು ತಲೆ ಮರೆಸಿಕೊಂಡಿದ್ದು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಂದಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ನಾರಾ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ವಿಕಾಸ್ ಸೆಹ್ರಾವತ್ (48) ತನ್ನ 11 ವರ್ಷದ ಮಗಳು ನವ್ಯಾ ಸಮ್ಮುಖದಲ್ಲೇ ತನ್ನ ಪತ್ನಿ ರೂಬಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಸಮಯದಲ್ಲಿ ಅವರ ಹಿರಿಯ ಮಗಳು ಕಾವ್ಯಾ ಶಾಲೆಗೆ ಹೋಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ತಲುಪಿದೆ ಎಂದು ಎಸಿಪಿ ನಂದಗ್ರಾಮ ಉಪಾಸನಾ ಪಾಂಡೆ ತಿಳಿಸಿದ್ದಾರೆ. ಕೋಣೆಯಲ್ಲಿ ಚದುರಿಹೋಗಿದ್ದ ವಸ್ತುಗಳಿಂದ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ .
Also Read: ಮನೆಗೆ ಬಾರಲು ಒಪ್ಪದ ಪತ್ನಿ : ಹೆತ್ತ ಮಕ್ಕಳ ಕತ್ತು ಸೀಳಿ ಕೊಂದ ಪಾಪಿ ತಂದೆ
ಪ್ರಾಥಮಿಕ ತನಿಖೆಯಲ್ಲಿ ಸೆಹ್ರಾವತ್ ಮದ್ಯದ ಚಟ ಹೊಂದಿದ್ದನೆಂದು ತಿಳಿದುಬಂದಿದ್ದು, ಕಳೆದ ಒಂದು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಮಂಗಳವಾರ ಬೆಳಿಗ್ಗೆ, ಅವನು ತನ್ನ ಪಾಸ್ಪೋರ್ಟ್ ಮತ್ತು ಆಧಾರ್ ಕಾರ್ಡ್ ಪಡೆಯಲು ಫ್ಲಾಟ್ಗೆ ಭೇಟಿ ನೀಡಿದ್ದ.ಈ ಸಂದರ್ಭದಲ್ಲಿ ಆರೋಪಿ ಮತ್ತು ಮೃತ ರೂಬಿ ನಡುವೆ ಜಗಳ ನಡೆದಿದ್ದು, ಕೋಪದಿಂದ ಅವನು ಅವಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರೂಬಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯ್ತಾದರೂ, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.ಈ ಎಲ್ಲಾ ಘಟನೆಯನ್ನು ಕಣ್ಣಾರೆ ನೋಡಿರುವ ಕಿರಿಯ ಮಗಳು ಆಘಾತಕ್ಕೊಳಗಾಗಿದ್ದಾಳೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೋದಿನಗರ ಪೊಲೀಸರು ಈ ದಂಪತಿಗಳ ವಿರುದ್ಧ ಗ್ಯಾಂಗ್ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
Also Read: ಚೀನಾ – ಭಾರತದ ನಡುವೆ ನೇರ ವಿಮಾನಯಾನ : ಇಂಡಿಗೋದಿಂದ ಮಹತ್ವದ ಘೋಷಣೆ
ಅಪರಾಧದಲ್ಲಿ ಬಳಸಲಾದ ಬಂದೂಕಿಗೆ ಪರವಾನಗಿ ಇದೆಯೇ ಅಥವಾ ಅಕ್ರಮವಾಗಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ನಂದಗ್ರಾಮ್ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.



