ಫಾಕ್ಸ್‌ಕಾನ್ ಕಂಪೆನಿಯಿಂದ ಕನ್ನಡಿಗರಿಗೆ ವಂಚನೆ : ಕರವೇ ಪ್ರತಿಭಟನೆ

ದೇವನಹಳ್ಳಿ : ಭಾರತದಲ್ಲಿ ಐಪೋನ್‌ ತಯಾರಿಕಾ ಕಂಪೆನಿಯಾಗಿರುವ ದೇವನಹಳ್ಳಿಯ ಫಾಕ್ಸ್‌ಕಾನ್ ಕಂಪೆನಿ ವಿರುದ್ದ ಕನ್ನಡಿಗರು ಸಿಡಿದೆದ್ದಿದ್ದಾರೆ. ಕಂಪೆನಿ ಕನ್ನಡಿಗರಿಗೆ ಅನ್ಯಾಯ ಎಸಗುತ್ತಿದೆ ಅನ್ನೋ ಆರೋಪ ಕೇಳಿಬಂದಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪ್ರವೀಣ್‌ ಶೆಟ್ಟಿ ಅವರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿರುವ ಫಾಕ್ಸ್‌ಕಾನ್‌ ಕಂಪೆನಿ ಭಾರತದ ಅತೀ ದೊಡ್ಡ ಐಪೋನ್‌ ತಯಾರಿಕಾ ಘಟಕ. ಈ ಕಂಪೆನಿಗೆ ಸುಮಾರು 22 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಕಂಪೆನಿ ಆಪಲ್‌ ಕಂಪೆನಿಗೆ ಐಪೋನ್‌ ಬಿಡಿಭಾಗಗಳನ್ನು ಜಾಗತಿಕ ಮಟ್ಟದಲ್ಲಿ ಪೂರೈಕೆ ಮಾಡುತ್ತಿದೆ.

ಆದರೆ ಕಂಪೆನಿ ಕನ್ನಡಿಗರಿಗೆ ಕೊಟ್ಟಿದ್ದ ಮಾತನ್ನು ತಪ್ಪಿದೆ ಅನ್ನೋ ಆರೋಪ ಕೇಳಿಬಂದಿದೆ. ಆರಂಭದಲ್ಲಿ 30 ಸಾವಿರಕ್ಕೂ ಅಧಿಕ ಕನ್ನಡಿಗರಿಗೆ ದೇವನಹಳ್ಳಿಯ ಫಾಕ್ಸ್‌ಕಾನ್‌ ಕಂಪೆನಿಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು.

ಆದರೆ ಕಂಪೆನಿ ಕನ್ನಡಿಗರ ಬದಲು ತಮಿಳು ಭಾಷಿಕರನ್ನೇ ಶೇಕಡಾ 90 ರಷ್ಟು ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಮೂಲಕ ಕನ್ನಡಿಗರಿಗೆ ವಂಚನೆ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಣದ ಕಾರ್ಯಕರ್ತರು ಕಂಪೆನಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಕಂಪೆನಿಯ ಉನ್ನತ ಸ್ಥಾನದಲ್ಲಿಯೂ ತಮಿಳು ಭಾಷಿಕರನ್ನು ನೇಮಕಾತಿ ಮಾಡಲಾಗುತ್ತಿದ್ದು, ಕ್ಲಿನಿಂಗ್‌ ಮುಂತಾದ ಕೆಲಸಕ್ಕೆ ಮಾತ್ರವೇ ಕನ್ನಡಿಗರನ್ನು ಸೀಮಿತ ಮಾಡಲಾಗುತ್ತಿದೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿದ್ದಾರೆ.

ಕಂಪೆನಿಯ ಎಚ್‌ಆರ್‌ ಮ್ಯಾನೇಜರ್‌ ನರ್ಮದಾ ಕಾಮೇಶ್ವರನ್‌, ಸುಬ್ರಹ್ಮಣಿ, ಫೆಸಿಲಿಟಿ ವಿಭಾಗದ ಪ್ರೇಮ್‌ ಪ್ರಸಾದ್‌, ಎಂಎಫ್‌ಜಿ ಸ್ವಾಮಿಯಪ್ಪನ್‌, ಐಟಿ ಮ್ಯಾನೇಜರ್‌ ನೀತಿರಾಜನ್‌, ಪರ್ಚೇಸರ್‌ ಅಜೀಮ್‌ ಮತ್ತು ರಾಜಾ ಪ್ರಭು, ಎಂಎಲ್‌ಬಿ ವಿಜಯನ್‌, ಕಾರ್ತಿಕ್‌, ಎಚ್‌ಆರ್‌ ದಾಮೋದರನ್‌, ಎಸ್‌ಸಿಎಂ ಬಾಲಗಣಪತಿ ಹಾಗೂ ಕ್ಯಾಟೀನ್‌ ನಿರ್ವಹಣೆ ಮಾಡುತ್ತಿರೋ ಮುರಳಿ ಹಾಗೂ ನರೇಶ್‌ ಕನ್ನಡಿಗರ ನೇಮಕಾತಿಗೆ ತೊಡಕಾಗಿದ್ದಾರೆ. ಹೀಗಾಗಿ ಇವರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಹಿಳಾ ನೌಕರರಿಗಿಲ್ಲ ರಕ್ಷಣೆ, ಎಸ್ಕಾರ್ಟ್‌ ನೇಮಕಕ್ಕೆ ಆಗ್ರಹ

ಫಾಕ್ಸ್‌ಕಾನ್‌ ಕಂಪೆನಿ ಸಾವಿರಾರು ಮಹಿಳಾ ನೌಕರರನ್ನು ನೇಮಕಾತಿ ಮಾಡಿಕೊಂಡಿದೆ. ಆದರೆ ಮಹಿಳಾ ನೌಕರರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಹಿಳಾ ಸಿಬ್ಬಂದಿಗಳನ್ನು ಮನೆಗೆ ತಲುಪಿಸಲು ವಾಹನದ ವ್ಯವಸ್ಥೆ ಮಾಡಿದೆ. ಆದರೆ ನಡುರಾತ್ರಿ ಮಹಿಳಾ ನೌಕರರನ್ನು ನಡುರಸ್ತೆಯಲ್ಲಿಯೇ ಇಳಿಸಿ ಹೋಗುತ್ತಿರುವ ಸಾಕಷ್ಟು ಪ್ರಕರಣಗಳು ಕಂಡು ಬರುತ್ತಿದೆ.

ಮಹಿಳೆಯರು ಪ್ರಯಾಣಿಸುವ ವಾಹನದಲ್ಲಿಯೇ ಮಹಿಳಾ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಡೋರ್‌ ಟು ಡೋರ್‌ ಪಿಕ್‌ಅಪ್‌ ಮತ್ತು ಡೋರ್‌ ಟು ಡೋರ್‌ ಡ್ರಾಪ್‌ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಅಷ್ಟೇ ಅಲ್ಲಾ ಕಂಪೆನಿ ಮಹಿಳಾ ಸಿಬ್ಬಂದಿಗಳು ಪ್ರಯಾಣಿಸುವ ಪ್ರತೀ ವಾಹನಕ್ಕೆ ಓರ್ವ ಎಸ್ಕಾರ್ಟ್‌ ನೇಮಕ ಮಾಡುವಂತೆ ಕರವೇ ಆಗ್ರಹಿಸಿದೆ.

ಕೈಗಾರಿಕಾ ಪ್ರದೇಶದಲ್ಲಿ ಡಾರ್ಮೆಂಟ್ರಿಗೆ ವಿರೋಧ

ಕರ್ನಾಟಕ ರಾಜ್ಯ ಸರಕಾರ ಫಾಕ್ಸ್‌ಕಾನ್ ಕಂಪೆನಿಗೆ ನೂರಾರು ಎಕರೆ ರೈತರ ಜಮೀನು ನೀಡಿದೆ. ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಒದಗಿಸಿದೆ. ಆದರೆ ಫಾಕ್ಸ್‌ಕಾನ್ ಕಂಪೆನಿ ತನಗೆ ನೀಡುವ ಜಾಗದಲ್ಲಿ ಮಹಿಳಾ ನೌಕರರಿಗಾಗಿ ಡಾರ್ಮೆಂಟ್ರಿ ನಿರ್ಮಾಣ ಮಾಡುತ್ತಿದೆ.

ಕೈಗಾರಿಕಾ ಪ್ರದೇಶಕ್ಕೆ ನೀಡಿರುವ ಜಾಗದಲ್ಲಿ ಯಾವುದೇ ಕಾರಣಕ್ಕೂ ಡಾರ್ಮೆಂಟ್ರಿ ನಿರ್ಮಾಣಕ್ಕೆ ಅವಕಾಶವೇ ಇಲ್ಲ. ಕಂಪೆನಿ ಜಾಗದಲ್ಲಿ ಮಹಿಳೆಯನ್ನು ಬಲವಂತವಾಗಿ ಕೂಡಿ ಹಾಕುವ ಅವಶ್ಯಕತೆ ಏನಿದೆ ಎಂದು ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್‌ ಶೆಟ್ಟಿ ಅವರು ಪ್ರಶ್ನಿಸಿದ್ದಾರೆ.

ಈ ಹಿಂದೆ ಹೊಸಕೋಟೆಯಲ್ಲಿರುವ ಫಾಕ್ಸ್‌ಕಾನ್ ಕಂಪೆನಿಗೆ ಸೇರಿದ ಅಪಾರ್ಟ್ ಮೆಂಟ್‌ನಲ್ಲಿ ಬ್ರೂಣ ಪತ್ತೆಯಾಗಿತ್ತು. ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಪೊಲೀಸ್‌ ಠಾಣೆಯ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕರವೇ ಉಗ್ರ ಹೋರಾಟದ ಎಚ್ಚರಿಕೆ

ಫಾಕ್ಸ್‌ ಕಾನ್‌ ಕಂಪೆನಿ ಕನ್ನಡಗರಿಗೆ ಅನ್ಯಾಯ ಎಸಗುತ್ತಿರುವುದರ ಹಿನ್ನೆಲೆಯಲ್ಲಿ ಈಗಾಗಲೇ ಕಂಪೆನಿಯ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವ ಪ್ರವೀಣ್‌ ಶೆಟ್ಟಿ ಅವರ ನೇತೃತ್ವದಲ್ಲಿ ಬೃಹತ್‌ ಮಟ್ಟದ ಹೋರಾಟವನ್ನು ನಡೆಸುವುದಾಗಿ ರಕ್ಷಣಾ ವೇದಿಕೆಯ ಮುಖಂಡರು ಎಚ್ಚರಿಸಿದ್ದಾರೆ.

Foxconn company defrauds Kannadigas Karnataka Rakshana Vedike Protest

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories