ಕಾರ್ಕಳ: Stone mining: ಅಕ್ರಮವಾಗಿ ಸರಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಕಲ್ಲು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಕುಂಟಲಪಾಡಿ ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು.
ಈ ಕುರಿತು ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯ್ಕ್ ಮತ್ತು ಸಿಬ್ಬಂದಿಯವರು ದಾಳಿ ನಡೆಸಿದ್ದಾರೆ.
ಎರ್ಲಪಾಡಿ ಗ್ರಾಮದ ಸ.ನಂ 243/1 ರ ಕಲ್ಲು ಕೋರೆ ಪ್ರದೇಶದಲ್ಲಿ ದಾಳಿ ನಡೆಸಿದಾಗ, ಆರೋಪಿ ಭೋಜ ಶೆಟ್ಟಿ ಎಂಬಾತ ಯಾವುದೇ ಪರವಾನಿಗೆ ಇಲ್ಲದೆ ಸ್ವಂತ ಲಾಭಕ್ಕಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಅಕ್ಟೋಬರ್ 25ರಂದು ದಿ.ಎಂ.ಕೆ ವಿಜಯ ಕುಮಾರ್ ನುಡಿನಮನ
ಪೊಲೀಸ್ ದಾಳಿ ವೇಳೆ, ಸುಮಾರು ₹3,500 ಮೌಲ್ಯದ 300 ಸೈಜು ಶಿಲಾ ಕಲ್ಲುಗಳನ್ನು ಮಾರಾಟಕ್ಕಾಗಿ ರಾಶಿ ಹಾಕಿ ಸಂಗ್ರಹಿಸಲಾಗಿತ್ತು. ಅಲ್ಲದೆ, ಸುಮಾರು 150 ಸೈಜು ಕಲ್ಲುಗಳನ್ನು KA-20-A-2168 ನಂಬರ್ನ ಲಾರಿಯಲ್ಲಿ ಲೋಡ್ ಮಾಡಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.
ಕೃತ್ಯಕ್ಕೆ ಬಳಸಿದ ಸೈಜು ಕಲ್ಲು, ಲಾರಿ, ಕಬ್ಬಿಣದ ಸುತ್ತಿಗೆ ಮತ್ತು ಕಬ್ಬಿಣದ ಚಮ್ಮಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಭೋಜ ಶೆಟ್ಟಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಕುರಿತು ದೂರು ದಾಖಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



