ಕಂಬಳ ಅನುದಾನ ತಾರತಮ್ಯ : ಸರಕಾರದ ವಿರುದ್ದ ಸುನಿಲ್ ಕುಮಾರ್ ಆಕ್ರೋಶ

Kambala grant : ಬೆಳಗಾವಿ : ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಕಂಬಳೋತ್ಸವಕ್ಕೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದ ಎರಡನೇ ದಿನ ಕರಾವಳಿಯ ಕಂಬಳೋತ್ಸವದ ಕುರಿತು ಚರ್ಚೆ ನಡೆದಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಸಮಿತಿಯಿಂದ ಅನುಮೋದನೆಗೊಂಡಿರುವ 23 ಕಂಬಳೋತ್ಸವಕ್ಕೆ ತಲಾ 5 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಸಚಿವ ಎಚ್.ಕೆ ಪಾಟೀಲ್ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಘೋಷಣೆ ಮಾಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಪುತ್ತೂರು ಮತಕ್ಷೇತ್ರದ ಶಾಸಕ ಅಶೋಕ್ ರೈ, ಕಂಬಳ ಈಗ ರಾಜ್ಯ ಕ್ರೀಡೆಯಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವೆ. 2024-25ನೇ ಸಾಲಿನಲ್ಲಿ ಕೇವಲ 10 ಕಂಬಳೋತ್ಸವಗಳಿಗೆ ಮಾತ್ರ ಸರ್ಕಾರದಿಂದ ಅನುದಾನ ದೊರಕಿದೆ. ಈ ಬಾರಿ ಅಂದರೆ 2025-26ನೇ ಸಾಲಿನಲ್ಲಿ 25 ಕಂಬಳೋತ್ಸವ ಇದ್ದು ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ 1 ಕೋಟಿ 15 ಲಕ್ಷ ರೂಪಾಯಿಗಳ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
Kambala grant : ಕಂಬಳ ಅನುದಾನದಲ್ಲಿ ತಾರತಮ್ಯ ಬೇಡ
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಮಾಜಿ ಸಚಿವ ವಿ, ಸುನೀಲ್ ಕುಮಾರ್, ನಮ್ಮ ಸರ್ಕಾರದ ಅವಧಿಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳೆರಡರಲ್ಲಿಯೂ ನಡೆದ ಕಂಬಳಗಳಿಗೆ ಅನುದಾನ ನೀಡಲಾಗಿತ್ತು. ಆದರೆ ಕಳೆದ ವರ್ಷ ಕೇವಲ ದಕ್ಷಿಣ ಕನ್ನಡದಲ್ಲಿ ನಡೆದ ಕಂಬಳೋತ್ಸವಗಳಿಗೆ ಮಾತ್ರ ಅನುದಾನ ದೊರಕಿದೆ.
ಉಡುಪಿ ಜಿಲ್ಲೆಯ ಕಂಬಳಗಳಿಗೆ ಅನುದಾನ ನೀಡಲಾಗಿದೆ. ಇದು ತಾರತಮ್ಯದಂತಾಗಿದೆ. ಹೀಗಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬಜೆಟ್ನಲ್ಲಿಯೇ ಕಂಬಳಕ್ಕೆ ಅನುದಾನ ಮೀಸಲಿರಿಸಿ. ಕೇವಲ 1 ಜಿಲ್ಲೆಗೆ ಅನುದಾನ ನೀಡುವುದು ಸರಿಯಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಕೇವಲ ಐದು ಲಕ್ಷದಲ್ಲಿ ಒಂದು ಕಂಬಳ ನಡೆಸಲು ಸಾಧ್ಯವೇ ಇಲ್ಲ. ಆದರೆ ಸರ್ಕಾರದಿಂದ ಈ ಪ್ರೋತ್ಸಾಹ ಧನ ಸಿಕ್ಕರೆ ಅನುಕೂಲ ಎಂದು ಸುನೀಲ್ ಕುಮಾರ್ ವಾದಿಸಿದರು. ಈ ವೇಳೆ ಪಕ್ಷಬೇಧ ಮರೆತು ಕರಾವಳಿ ಜಿಲ್ಲೆಯ ಎಲ್ಲಾ ಶಾಸಕರು ದನಿಗೂಡಿಸಿ ಎಲ್ಲಾ ಕಂಬಳಗಳಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಶ್ನೆಗಳಿಗೆ ಉತ್ತರಿಸಿದ ಪ್ರವಾಸೋದ್ಯಮ ಇಲಾಖೆ ಸಚಿವ ಡಾ.ಹೆಚ್.ಕೆ ಪಾಟೀಲ, ಕಂಬಳ ಕ್ರೀಡೆಯ ಬಗ್ಗೆ ನಿಮ್ಮೆಲ್ಲರ ಅಭಿಮಾನ ಕಂಡು ಅತೀವ ಸಂತಸವಾಗಿದೆ. ರಾಜ್ಯ ಸರ್ಕಾರ ಈಗಾಗಲೇ 23 ಕಂಬಳಗಳಿಗೆ ತಲಾ 5 ಲಕ್ಷ ನೀಡಬೇಕು ಎಂದು ನಿರ್ಧರಿಸಿದೆ. ಆರ್ಥಿಕ ಇಲಾಖೆಗೆ ಈಗಾಗಲೇ ಕಡತ ಕಳಿಸಿದ್ದೇವೆ. 23 ಕಂಬಳಗಳಿಗೆ ತಲಾ 5 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುತ್ತೇವೆ ಎಂದು ಘೋಷಿಸಿದರು.
belagavi session Kambala grant discrimination Sunil Kumar angry against government



