ಶಿರೂರು ಪರ್ಯಯ ಮಹೋತ್ಸವದ ಧಾನ್ಯ ಮಹೂರ್ತ

ಉಡುಪಿ : ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಶಿರೂರು ಪರ್ಯಾಯ (Shirur Paryaya 2026)ಕ್ಕೆ ಸಿದ್ದತೆಗಳು ಜೋರಾಗಿದೆ. ಜನವರಿ 18ರಂದು ಅದ್ದೂರಿ ಪರ್ಯಾಯ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿಂದು ಧಾನ್ಯ ಮಹೂರ್ತ ಅದ್ದೂರಿಯಾಗಿ ನೆರವೇರಿತು.

ಶಿರೂರು ಮಠದ ಮಠಾಧೀಶರಾಗಿರುವ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರಿಗೆ ಇದು ಮೊದಲ ಪರ್ಯಾಯ ಮಹೋತ್ಸವವಾಗಿದೆ. ಇಂದು ಶಿರೂರು ಪರ್ಯಾಯಕ್ಕೆ ಧಾನ್ಯ ಮುಹೂರ್ತ ನೆರವೇರಿದೆ. ಉಡುಪಿಯ ಶ್ರೀಕೃಷ್ಣಮಠದ ರಥ ಬೀದಿಯಲ್ಲಿ ಅಕ್ಕಿಯ ಮುಡಿ ತಲೆಯಲ್ಲಿ ಹೊತ್ತು ಮೆರವಣಿಗೆ ನಡೆಸಲಾಯಿತು.

ಶ್ರೀಮಠಕ್ಕೆ ಬರುವ ಭಕ್ತರ ಊಟೋಪಚಾರಕ್ಕೆ ಬೇಕಾದ ಧಾನ್ಯಗಳ ಸಂಗ್ರಹಕ್ಕೆ ಮಹೂರ್ತ ನಡೆಸಲಾಗುತ್ತದೆ. ಶತ ಶತಮಾನಗಳಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ಕೃಷ್ಣಮಠದಲ್ಲಿ ಕೃಷ್ಣ ದೇವರ ದರ್ಶನ ಪಡೆದು, ಅನಂತೇಶ್ವರ, ಚಂದ್ರಮೌಳೇಶ್ವರ ದೇವರ ದರ್ಶನ ಪಡೆದ ನಂತರ ಬಡಗು ಮಾಳಿಗೆಯಲ್ಲಿ ಭತ್ತ ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ಅಲ್ಲದೇ ಕಟ್ಟಿಗೆ ರಥಕ್ಕೆ ಶಿಖರವಿಟ್ಟು ಮುಹೂರ್ತ ನೆರವೇರಿತು. ಕರಾವಳಿ ಭಾಗದ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು.

ಉಡುಪಿಯ ಕೃಷ್ಣದೇವರನ್ನು ಅನ್ನ ಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ಕೃಷ್ಣದೇವರಿಗೆ ಪ್ರತಿ ದಿನ ಶೋಢಶೋಪಚಾರ ಪೂಜೆಯೊಂದಿಗೆ ಹತ್ತಾರು ಬಗೆಯ ಖಾದ್ಯಗಳ ನೈವೇದ್ಯ ನಡೆದರೆ, ಮತ್ತೊಂದೆಡೆ ಭಕ್ತರಿಗೆ ದೇವರ ನೈವೇದ್ಯ ಅನ್ನಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತದೆ. ಇಲ್ಲಿ ನಡೆಯುವ ಅನ್ನದಾಸೋಹದಲ್ಲಿ ಲಕ್ಷಾಂತರ ಜನ ಪ್ರಸಾದ ಸ್ವೀಕರಿಸುತ್ತಾರೆ. ಹಾಗಾಗಿ ಕೃಷ್ಣನ ಪೂಜೆಯನ್ನು ಅನ್ನ ಬ್ರಹ್ಮನ ಪೂಜೆಯೆಂದು ಕರೆಯಲಾಗುತ್ತದೆ.

ಕಟ್ಟಿಗೆಗಳನ್ನು ಸಾಂಪ್ರದಾಯಿಕವಾಗಿ ಜೋಡಿಸಿ ರಥ ನಿರ್ಮಿಸುವುದು ಉಡುಪಿಯ ಸಂಪ್ರದಾಯ. ಶಿರೂರು ಶ್ರೀ ಲಕ್ಷ್ಮೀವರ ತೀರ್ಥರ, ಅನಿರೀಕ್ಷಿತ ಸಾವಿನ ನಂತರ, ಮಠದಲ್ಲಿ ಅನೇಕ ಗೊಂದಲಗಳು ವಿವಾದಗಳು ಏರ್ಪಟ್ಟಿತ್ತು.

ಇದೀಗ ಶಿರೂರು ಮಠಕ್ಕೆ ಪೀಠಾಧಿಕಾರಿಯಾಗಿ ಬಂದಿರುವ ಶ್ರೀ ವೇದವರ್ಧನ ತೀರ್ಥರು, ತಮ್ಮ ಅತ್ಯಂತ ಎಳೆಯ ಪ್ರಾಯದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುತ್ತಿರುವುದು ವಿಶೇಷವೆನಿಸಿದೆ.

Shirur Paryaya 2026 Dhanya Muhurtha

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories