ಸದನದಲ್ಲಿ ಪೇಚಿಗೆ ಸಿಲುಕಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಕ್ಕೆ ನಿಂತ ಡಿ.ಕೆ ಶಿವಕುಮಾರ್ : ಸಿಎಂ ಇಲಾಖೆ ಮೇಲೆ ಆರೋಪ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗೃಹಲಕ್ಷ್ಮೀ ಯೋಜನೆಯ ಕುರಿತಂತೆ ತಪ್ಪು ಲೆಕ್ಕ ಕೊಟ್ಟು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪೇಚಿಗೆ ಸಿಲುಕಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ವಿಪಕ್ಷಗಳು ಮುಗಿಬಿದ್ದಿದ್ದು ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಸಚಿವೆಯ ಬೆಂಬಲಕ್ಕೆ ನಿಂತಿದ್ದಾರೆ.
ಸದನದಲ್ಲಿ ಗೃಹಲಕ್ಷ್ಮೀ ವಿಚಾರವಾಗಿ ಜಟಾಪಟಿ ಜೋರಾಗುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಈ ವಿಚಾರವಾಗಿ ಸಿಎಂ ಇಲಾಖೆಯನ್ನೇ ದೂರಿದ್ದಾರೆ. ಫೈನಾನ್ಸ್ ಡಿಪಾರ್ಟ್ಮೆಂಟ್ನವರು ಸಕಾಲಕ್ಕೆ ಹಣ ಬಿಡುಗಡೆ ಮಾಡಿಲ್ಲ ಎಂದರೆ ಏನು ಮಾಡೋಕೆ ಆಗತ್ತೆ ಎಂದಿದ್ದಾರೆ. ಈ ಮೂಲಕ ಹಣಕಾಸು ಇಲಾಖೆ ನಿರ್ವಹಣೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಮೇಲೆ ತಪ್ಪು ಹೊರಿಸುವ ಕಾರ್ಯ ಮಾಡಿದ್ದಾರೆ .
ಸದನದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 54 ಸಾವಿರ ಕೋಟಿ ರೂಪಾಯಿ ಹಣ ನೀಡಿದ್ದೇವೆ. ಸದನದಲ್ಲಿ ನಾನು ಹೇಳಿರೋದ್ರಿಂದ ಏನಾದ್ರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ರು. ಈ ವೇಳೆ ಬಿಜೆಪಿ ನಾಯಕ ಸುರೇಶ್ ಕುಮಾರ್ ಮುಗಿಬಿದ್ದಿದ್ದಾರೆ. ಮಧ್ಯಪ್ರವೇಶಿದ ಶರಣಪ್ರಕಾಶ್ ಪಾಟೀಲ್ ಮಹಿಳೆಯ ಬಗ್ಗೆ ಈ ರೀತಿ ಎಲ್ಲಾ ಮಾತನಾಡ್ಬೇಡಿ ಅಂತಾ ಹೇಳುವ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಕ್ಕೆ ನಿಂತಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಉತ್ತರ ನಮಗೆ ಸಮಾಧಾನ ತಂದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗುಡುಗಿದ್ರು. ಅಲ್ಲದೆ ಸಭಾತ್ಯಾಗ ಮಾಡುವ ನಿರ್ಧಾರ ಘೋಷಿಸಿದ್ದು ಬಿಜೆಪಿ ಹಾಗೂ ಜೆಡಿಎಸ್ ಎರಡೂ ನಾಯಕರು ಸದನದಿಂದ ಹೊರ ನಡೆದಿದ್ದಾರೆ.



