ಹೊಸ ವರ್ಷಾಚರಣೆ, ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್. ಡ್ರೋನ್ ನಿಗಾ
ಉಡುಪಿ: New Year celebrations: ಹೊಸ ವರ್ಷಾಚರಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯೊಂದಿಗೆ ನಡೆಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಹೊಸ ವರ್ಷದ ದಿನದಂದು ಜಿಲ್ಲೆಯ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೈವೇ ಪಟ್ರೋಲ್ ಹಾಗೂ ಹೊಯ್ಸಳ ವಾಹನಗಳನ್ನು ಗಸ್ತಿಗೆ ನಿಯೋಜಿಸಲಾಗಿದ್ದು, ಮದ್ಯಪಾನ ಮಾಡಿ ವಾಹನ ಚಾಲನೆ, ವೀಲಿಂಗ್ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಡಿಸೆಂಬರ್ 31ರಂದು ಕರಾವಳಿ ಪ್ರದೇಶಗಳ ಸಮುದ್ರ ತೀರಗಳು ಹಾಗೂ ಬೀಚ್‌ಗಳಲ್ಲಿ ನಡೆಯುವ ಹೊಸ ವರ್ಷದ ಆಚರಣೆಗಳ ಸುರಕ್ಷತಾ ಕ್ರಮಗಳ ಕುರಿತು ಸಿಎಸ್ ಪಿ ಠಾಣೆಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಠಾಣಾಧಿಕಾರಿಗಳ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಹೋಂ ಸ್ಟೇಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಪಬ್‌ಗಳು ಹಾಗೂ ಬಾರ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ರೇವ್ ಪಾರ್ಟಿ, ಡ್ರಗ್ ಪಾರ್ಟಿ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳು ಹಾಗೂ ವೆಬ್ ಪುಟಗಳ ಮೇಲೂ ಪೊಲೀಸ್ ನಿಗಾವಹಿಸಲಾಗಿದೆ.
Also Read: ಉಡುಪಿ : ಓದಿನ ಕಡೆ ಗಮನಕೊಡು ಎಂದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಗರ ವ್ಯಾಪ್ತಿಯಲ್ಲಿ ಉಡುಪಿ ಜಿಲ್ಲಾ ಅಕ್ಕಪಡೆ ತಂಡವನ್ನು ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ವಿದೇಶಿ ನಾಗರಿಕರ ಸುರಕ್ಷತೆಯ ಮೇಲೂ ಗಮನ ಹರಿಸಲಾಗಿದೆ.
ದೊಡ್ಡ ಸಾರ್ವಜನಿಕ ಸಮಾವೇಶಗಳ ಮೇಲ್ವಿಚಾರಣೆಗಾಗಿ ಡ್ರೋನ್ ಕ್ಯಾಮೆರಾಗಳ ಬಳಕೆ ಮಾಡಲಾಗುತ್ತಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಕ್ಕೆ ಜೊತೆಗೆ 3 ಡ್ರೋನ್ ಕ್ಯಾಮೆರಾ, 10 ಹೆಚ್ಚುವರಿ ಪೆಟ್ರೋಲಿಂಗ್ ವಾಹನಗಳು ಹಾಗೂ 24 ಸಾರ್ವಜನಿಕ ಘೋಷಣಾ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗಿದೆ.
Also Read: Kundapur Fire Accident : ಕುಂದಾಪುರ : ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ
ಜಿಲ್ಲೆಯ ಆಯ್ದ ಸ್ಥಳಗಳಲ್ಲಿ 13 ಡಿಎಆರ್ ತುಕಡಿ ಹಾಗೂ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆ ಜವಾಬ್ದಾರಿಯಿಂದ ಆಚರಿಸಿ ಎಂಬ ಸಂದೇಶದೊಂದಿಗೆ ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಸಂಯಮಿತ ಹೊಸ ವರ್ಷಾಚರಣೆಗೆ ಮನವಿ ಮಾಡಿದೆ.



