Century Gowda Died: ತಿಥಿ ಚಿತ್ರದ ಶತಾಯುಷಿ ನಟ ಸೆಂಚುರಿ ಗೌಡ ನಿಧನ
ಮಂಡ್ಯ: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಕನ್ನಡದ ಹೆಮ್ಮೆಯ ‘ತಿಥಿ’ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದ್ದ ಹಿರಿಯ ನಟ ಸಿಂಗ್ರಿಗೌಡ (ಸೆಂಚುರಿ ಗೌಡ) ಅವರು ಭಾನುವಾರ (ಜೂನ್ 4, 2026) ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 100 ವರ್ಷಕ್ಕೂ ಅಧಿಕ ವಯಸ್ಸಾಗಿತ್ತು.
ಕಳೆದ ಕೆಲವು ಸಮಯದಿಂದ ವಯೋಸಹಜ ಕಾಯಿಲೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿಂಗ್ರಿಗೌಡನಕೊಪ್ಪಲು ಗ್ರಾಮದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಗಡ್ಡಪ್ಪನ ಬೆನ್ನಲ್ಲೇ ಸೆಂಚುರಿ ಗೌಡ ನಿರ್ಗಮನ:
ವಿಶೇಷವೆಂದರೆ, ಇದೇ ‘ತಿಥಿ’ ಸಿನಿಮಾದಲ್ಲಿ ಅವರ ಪುತ್ರನ ಪಾತ್ರ ಮಾಡಿದ್ದ ‘ಗಡ್ಡಪ್ಪ’ ಖ್ಯಾತಿಯ ಚನ್ನೇಗೌಡ ಅವರು ಕಳೆದ ವರ್ಷ ನವೆಂಬರ್ 12ರಂದು ನಿಧನರಾಗಿದ್ದರು. ಗಡ್ಡಪ್ಪ ಮೃತಪಟ್ಟು ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಸೆಂಚುರಿ ಗೌಡರು ಕೂಡ ಇಹಲೋಕ ತ್ಯಜಿಸಿರುವುದು ಅಭಿಮಾನಿಗಳಲ್ಲಿ ಶೋಕ ಮೂಡಿಸಿದೆ.
ತೆರೆಗೆ ಬಂದ ಹಾದಿ: ಸಿಂಗ್ರಿಗೌಡರ ಸ್ವಂತ ಅಣ್ಣನ ತಿಥಿ ಕಾರ್ಯಕ್ಕೆ ಬಂದಿದ್ದ ಚಿತ್ರದ ಕಥೆಗಾರ ಈರೇಗೌಡ ಅವರು, ಇವರ ವ್ಯಕ್ತಿತ್ವ ಮತ್ತು ಮ್ಯಾನರಿಸಂ ನೋಡಿ ಪ್ರಭಾವಿತರಾಗಿ ‘ಸೆಂಚುರಿ ಗೌಡ’ನ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಸಿನಿಮಾದಲ್ಲಿ ಅವರ “ಹೋಗೋ ಮುಕ್ಕಾ…” ಎಂಬ ಡೈಲಾಗ್ ಬಹಳ ಜನಪ್ರಿಯವಾಗಿತ್ತು. ‘ತಿಥಿ’ ಚಿತ್ರದ ಯಶಸ್ಸಿನ ನಂತರ ಅವರು ತರ್ಲೆ ವಿಲೇಜ್, ಹಾಲು ತುಪ್ಪ, ಹಳ್ಳಿ ಪಂಚಾಯಿತಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಬೇಡ್ತಿ-ವರದಾ ನದಿಜೋಡಣೆ ಯೋಜನೆ ವಿರೋಧಿಸಿ ಭಾರೀ ಹೋರಾಟ; ಕಾರಣವೇನು?
ಸಿಂಗ್ರಿಗೌಡರ ಅಂತ್ಯಕ್ರಿಯೆಯು ಜನವರಿ 5, ಸೋಮವಾರ ಅವರ ಸ್ವಗ್ರಾಮವಾದ ಪಾಂಡವಪುರ ತಾಲ್ಲೂಕಿನ ಸಿಂಗ್ರಿಗೌಡನ ಕೊಪ್ಪಲಿನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನೆರವೇರಿದೆ. ಶತಾಯುಷಿ ಕಲಾವಿದನ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಮಂಡ್ಯ ಭಾಗದ ಜನರು ಕಂಬನಿ ಮಿಡಿದಿದ್ದಾರೆ. ಮಣ್ಣಿನ ಸೊಗಡಿನ ಅಪ್ಪಟ ಪ್ರತಿಭೆಯೊಂದು ಮರೆಯಾದಂತಾಗಿದೆ.



