ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಕೊರೆಯುವ ಚಳಿ : ಐಎಂಡಿಯಿಂದ ಎಚ್ಚರಿಕೆ
ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಚಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಕರ್ನಾಟಕದಾದ್ಯಂತ ಶೀತಲ ಮತ್ತು ಒಣ ಹವಾಮಾನ ಇರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಹಾಗೂ ಬೆಳಿಗ್ಗೆ ಮಂಜು ಕವಿದ ವಾತಾವರಣ ಇರಲಿದೆ.
ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಯಾವುದೇ ಪ್ರದೇಶದಲ್ಲಿ ಮಳೆ ಸಂಭವಿಸುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟನೆ ನೀಡಿದೆ. ಬೆಳಗ್ಗಿನ ಜಾವ ಮಂಜು ಅತಿಯಾಗಿ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಐಎಂಡಿ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಕನಿಷ್ಠ ತಾಪಮಾನ ಹಲವೆಡೆ 12-16 ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತಲೂ ಇರಲಿದ್ದು, ಬೆಂಗಳೂರಿನಲ್ಲಿ ಸುಮಾರು 14-16 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಸ್ ಅಗ್ನಿ ದುರಂತ ತಡೆಗೆ ಹೊಸ ಕ್ರಮ : ಬಸ್ ಮಾಲೀಕರಿಗೆ ಈ 8 ನಿಯಮ ಪಾಲನೆ ಕಡ್ಡಾಯ
ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಬೆಚ್ಚನೆಯ ಉಡುಪು ಧರಿಸುವಂತೆ ಸೂಚನೆ ನೀಡಲಾಗಿದೆ. ಹಾಗೂ ವಾಹನ ಸವಾರರು ಮಂಜಿನ ಸಂದರ್ಭದಲ್ಲಿ ವಾಹನದ ವೇಗ ಕಡಿಮೆ ಮಾಡಿಕೊಳ್ಳುವಂತೆ ಐಎಂಡಿ ಸಲಹೆ ನೀಡಿದೆ.



