ಭಾರತ-ಅಮೆರಿಕ ನಡುವೆ ಬೃಹತ್ ವಾಣಿಜ್ಯ ಒಪ್ಪಂದ: ಸುಂಕ ಕಡಿತಗೊಳಿಸಿದ ಡೊನಾಲ್ಡ್ ಟ್ರಂಪ್
US India Trade Deal | Donald Trump: ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ಐತಿಹಾಸಿಕ ವಾಣಿಜ್ಯ ಒಪ್ಪಂದ (Trade Deal) ಏರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಭಾರತದ ಮೇಲಿದ್ದ ಸುಂಕದ ಪ್ರಮಾಣವನ್ನು ಶೇಕಡಾ 25ರಿಂದ 18ಕ್ಕೆ ಇಳಿಸಲು ಅಮೆರಿಕ ಒಪ್ಪಿಗೆ ನೀಡಿದೆ.
ಸೋಮವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ನಂತರ ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ (Truth Social) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
- ಸುಂಕ ಕಡಿತ: ಅಮೆರಿಕವು ಭಾರತದ ಮೇಲೆ ವಿಧಿಸುತ್ತಿದ್ದ ‘ಪರಸ್ಪರ ಸುಂಕ’ವನ್ನು (Reciprocal Tariff) ತಕ್ಷಣದಿಂದ ಜಾರಿಗೆ ಬರುವಂತೆ 25% ರಿಂದ 18% ಕ್ಕೆ ಇಳಿಸಿದೆ.
- ರಷ್ಯಾದ ತೈಲಕ್ಕೆ ಬ್ರೇಕ್: ಉಕ್ರೇನ್ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಬದಲಾಗಿ ಅಮೆರಿಕ ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಭಾರತ ಮುಂದಾಗಲಿದೆ.
- ಬೈ ಅಮೆರಿಕನ್ (Buy American): ಭಾರತವು ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಇಂಧನ, ತಂತ್ರಜ್ಞಾನ, ಕೃಷಿ ಮತ್ತು ಕಲ್ಲಿದ್ದಲು ಉತ್ಪನ್ನಗಳನ್ನು ಖರೀದಿಸಲು ಬದ್ಧತೆ ತೋರಿದೆ.
- ಶೂನ್ಯ ಸುಂಕದ ಗುರಿ: ಭಾರತವು ಕೂಡ ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕ ಮತ್ತು ವಾಣಿಜ್ಯ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸಲು ಕ್ರಮ ಕೈಗೊಳ್ಳಲಿದೆ ಎಂದು ವರದಿಯಾಗಿದೆ.
ಸ್ನೇಹಕ್ಕೆ ಸಿಕ್ಕ ಗೌರವ:
ಪ್ರಧಾನಿ ಮೋದಿ ಅವರನ್ನು ತಮ್ಮ “ಆಪ್ತ ಮಿತ್ರ” ಎಂದು ಕರೆದಿರುವ ಟ್ರಂಪ್, “ಮೋದಿ ಅವರ ಮೇಲಿನ ಗೌರವ ಮತ್ತು ಸ್ನೇಹಕ್ಕಾಗಿ, ಅವರ ಮನವಿಯ ಮೇರೆಗೆ ಈ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ನಿರ್ಧಾರದಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ,” ಎಂದು ಹೇಳಿದ್ದಾರೆ.
HMC Trophy 2026 : ವಿವಾದದಿಂದ ರದ್ದಾದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ: ನಾಲ್ಕು ತಂಡಗಳಿಗೆ ತಲಾ 5 ಲಕ್ಷ ರೂಪಾಯಿ
ಈ ಬಗ್ಗೆ ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅವರು ‘ಎಕ್ಸ್’ನಲ್ಲಿ (X) ಪೋಸ್ಟ್ ಮಾಡಿ, “ಮುಂದಿನ ಅಪ್ಡೇಟ್ಗಳಿಗಾಗಿ ಕಾಯಿರಿ” (Stay Tuned) ಎಂದು ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಭಾರತ ಸರ್ಕಾರದಿಂದ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.



