ಮತ್ತೆ ಶುರುವಾಗಿದೆ ನಿಫಾ ಹಾವಳಿ : ರಾಜ್ಯ ಆರೋಗ್ಯ ಇಲಾಖೆಯಿಂದ ತೀವ್ರ ಕಟ್ಟೆಚ್ಚರ
ವಿವಿಧ ರಾಜ್ಯಗಳಲ್ಲಿ ಮತ್ತೆ ನಿಫಾ ವೈರಸ್ ಕಾಟ ಶುರುವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಫಾ ಭೀತಿ ತಡೆಗೆ ರಾಜ್ಯ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ. ಸೋಂಕಿತರದಲ್ಲಿ ಮರಣಪ್ರಮಾಣ 75 ಶೇಕಡಾ ಏರಿಕೆ ಕಂಡಿರುವುದು ತೀವ್ರ ಆತಂಕಕ್ಕೆ ದಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಫಾ ಸೋಂಕು ತಡೆಗೆ ಹೈ ಅಲರ್ಟ್ ಘೋಷಣೆಯಾಗಿದೆ.
ನಿಫಾ ವೈರಸ್ ಲಕ್ಷಣಗಳು :
ನಿಫಾ ವೈರಸ್ ದೇಹಕ್ಕೆ ಸೇರಿದ 4 ರಿಂದ 14 ದಿನಗಳ ಬಳಿಕ ತನ್ನ ಲಕ್ಷಣಗಳನ್ನು ತೋರಿಸಲು ಆರಂಭಿಸುತ್ತದೆ. ತೀವ್ರ ಜ್ವರ ಹಾಗೂ ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ. ಗಂಟಲು ಕೆರೆತ, ಅತಿಯಾದ ಸುಸ್ತು, ಕುತ್ತಿಗೆಯ ಹಿಂಭಾಗದಲ್ಲಿ ಸೆಳೆತ ಈ ವೈರಸ್ನ ಲಕ್ಷಣಗಳಾಗಿವೆ.
ನಿಫಾ ವೈರಸ್ ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ :
ನಿಫಾ ವೈರಸ್ ತಡೆಗೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಯಾವುದೇ ಕಾರಣಕ್ಕೂ ಹಣ್ಣುಗಳನ್ನು ಚೆನ್ನಾಗಿ ತೊಳೆಯದೇ ತಿನ್ನಬಾರದು. ಪ್ರಮುಖವಾಗಿ ಇದು ಬಾವಲಿಯಿಂದ ಹರಡುವ ಕಾಯಿಲೆಯಾಗಿರುವ ಹಿನ್ನೆಲೆಯಲ್ಲಿ ನೆಲಕ್ಕೆ ಬಿದ್ದಿರುವ ಅಥವಾ ಪ್ರಾಣಿ/ ಪಕ್ಷಿಗಳು ಕಚ್ಚಿದ ಗುರುತು ಹೊಂದಿರುವ ಹಣ್ಣುಗಳನ್ನು ಸೇವಿಸಲೇಬಾರದು. ಕುದಿಸಿ ಆರಿಸದ ನೀರನ್ನೇ ಕುಡಿಯಬೇಕು. ಮನೆಯಲ್ಲಿರುವ ಸಾಕು ಪ್ರಾಣಿಗಳು ಬಾವಲಿಗಳ ಸಂಪರ್ಕಕ್ಕೆ ಬಾರದಂತೆ ನಿಗಾ ವಹಿಸಬೇಕು. ಪ್ರಾಣಿಗಳ ಜೊತೆ ಇರುವಾಗ ಮಾಸ್ಕ್ ಹಾಗೂ ಕೈಗಳಿಗೆ ಗ್ಲೌಸ್ ಧರಿಸುವುದು ಉತ್ತಮ. ಮರಗಳಿಂದ ತೆಗೆಯುವ ನೀರಾಗಳನ್ನು ಸೇವನೆ ಮಾಡಬಾರದು. ಯಾವುದೇ ರೀತಿಯ ಸಣ್ಣ ಲಕ್ಷಣಗಳು ಗೋಚರಿಸಿದರೂ ಕೂಡಲೇ ವೈದ್ಯರನ್ನು ಕಾಣುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ: ಬೆಳಿಗ್ಗೆ ಬೆಳ್ಳುಳ್ಳಿ ತಿಂದ್ರೆ ಕೊಲೆಸ್ಟ್ರಾಲ್ ಕಂಟ್ರೋಲ್‌ಗೆ ಬರತ್ತಾ? ಇಲ್ಲಿದೆ ಅದಕ್ಕೆ ಉತ್ತರ
ನಿಫಾ ವೈರಸ್ ದಾಳಿಗೆ ಒಳಗಾದ ವ್ಯಕ್ತಿಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು 4 ರಿಂದ 14 ದಿನಗಳ ಸಮಯಾವಕಾಶ ಬೇಕಾಗುತ್ತದೆ. ಈಗಾಗಲೇ ಗಡಿ ಭಾಗಗಳಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.



