ಪುತ್ತೂರಿನ ಜಿ.ಎಲ್ ಮಾಲ್ನಲ್ಲಿ ದಿ ಕೇರಳ ಸ್ಟೋರಿ 2 ಉಚಿತ ಪ್ರದರ್ಶನ : ಅನ್ಯಧರ್ಮೀಯರಿಂದ ಮಾಲ್ಗೆ ಬಹಿಷ್ಕಾರ
The Kerala Story 2: ಪುತ್ತೂರಿನ ಜಿ.ಎಲ್ ಮಾಲ್ನಲ್ಲಿ ಇಂದು 16 ವರ್ಷದಿಂದ 22 ವರ್ಷದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿಮಾ ಪ್ರದರ್ಶನ ಆಯೋಜಿಸಲಾಗಿತ್ತು.
The Kerala Story 2: ದಿ ಕೇರಳ ಸ್ಟೋರಿ 2 ಸಿನಿಮಾ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುವ ಸಿನಿಮಾ ಇದಾಗಿದ್ದು ಈ ಸಿನಿಮಾವನ್ನು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಉಚಿತ ಪ್ರದರ್ಶನದ ಮೂಲಕ ಯುವತಿಯರಿಗೆ ತೋರಿಸಲಾಯಿತು. ಪುತ್ತೂರಿನ ಜಿ.ಎಲ್ ಮಾಲ್ನಲ್ಲಿ 16 ವರ್ಷದಿಂದ 22 ವರ್ಷದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿಮಾ ಪ್ರದರ್ಶನ ಆಯೋಜಿಸಲಾಗಿತ್ತು.
ಸೀತಾ ಪರಿವಾರ ಸಂಘಟನೆಯಿಂದ ಈ ಉಚಿತ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದ್ದು ಇದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡಿದರು. ನಿನ್ನೆ ಸಂಜೆ ಮೂರು ಗಂಟೆಗೆ ಆಯೋಜಿಸಲಾಗಿದ್ದ ಈ ಉಚಿತ ಸಿನಿಮಾ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಆದರೆ ಈ ಕಾರ್ಯಕ್ರಮ ಆಯೋಜನೆ ಬಳಿಕ ಇದೀಗ ಪುತ್ತೂರಿನ ಜಿ.ಎಲ್ ಮಾಲ್ಗೆ ಹೊಸ ಸಂಕಷ್ಟ ಎದುರಾಗಿದೆ. ಹಿಂದೂಪರ ಕಾರ್ಯಕ್ರಮ ಆಯೋಜನೆ ಮಾಡಿದ ಹಿನ್ನೆಲೆಯಲ್ಲಿ ಮುಸ್ಲಿಮರು ಯಾರೂ ಜಿ.ಎಲ್ ಮಾಲ್ಗೆ ತೆರಳಬೇಡಿ ಎಂದು ಧರ್ಮ ದಂಗಲ್ ಶುರು ಮಾಡಲಾಗಿದೆ. ಇನ್ಮುಂದೆ ಜಿ.ಎಲ್ ಮಾಲ್ಗೆ ತೆರಳುವ ಮುಸ್ಲಿಂ ಯುವತಿಯರೇ ಗಮನಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಡಲಾಗುತ್ತಿದೆ.
ಇನ್ನು ಇದೇ ವಿಚಾರವಾಗಿ ಹಿಂದೂ ಮುಖಂಡ ಅರುಣ್ ಪುತ್ತಿಲ ಮಾತನಾಡಿದ್ದು, ಸಿನಿಮಾ ಬುಕ್ಕಿಂಗ್ಗಾಗಿ ಪೋಸ್ಟರ್ಗಳಲ್ಲಿ ಮಹಿಳೆಯೊಬ್ಬರ ದೂರವಾಣಿ ಸಂಖ್ಯೆ ನೀಡಿದ್ದೆವು. ಆದರೆ ಈ ನಂಬರಿಗೆ ಸ್ಥಳೀಯ ಮತಾಂಧ ಶಕ್ತಿಗಳು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ವಿದೇಶಗಳಿಂದಲೂ ಕೂಡ ಬೆದರಿಕೆಗಳು ಬಂದಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನಿಸಬೇಕಿದೆ. ಇಂತಹ ಬೆದರಿಕೆಗಳಿಗೆ ನಾವು ಬಗ್ಗುವ ಮಾತೇ ಇಲ್ಲ. ಹಿಂದೂಪರ ಜಾಗೃತಿ ಕಾರ್ಯಗಳು ಇದೇ ರೀತಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ: ಹೊಸ ದಿನಾಂಕ ಘೋಷಣೆ
ದಿ ಕೇರಳ ಸ್ಟೋರಿ 2 ಸಿನಿಮಾ ಕಾಮಾಖ್ಯ ನಾರಾಯಣ ಸಿಂಗ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದು ಫೆಬ್ರವರಿ 27ರಿಂದ ಸಿನಿ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವಿಪುಲ್ ಅಮೃತ್ಲಾಲ್ ಶಾ ಅವರ ಸನ್ಶೈನ್ ಪಿಕ್ಚರ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಕಾರ್ಯ ಮಾಡಿದೆ. ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಹಾಗೂ ಐಶ್ವರ್ಯಾ ಓಜಾ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅನ್ಯಧರ್ಮೀಯರ ಪ್ರೇಮಪಾಶಕ್ಕೆ ಬೀಳುವ ಈ ಮೂವರು ಹಿಂದೂ ಯುವತಿಯರು ಅನುಭವಿಸುವ ವಂಚನೆ ಹಾಗೂ ಹಿಂಸೆಯ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಹೈಕೋರ್ಟ್ನಿಂದ ತಡೆಯಾಜ್ಞೆ ತರಲಾಗಿತ್ತು. ಆದರೆ ಕಾನೂನು ಸಮರದಲ್ಲಿ ಜಯಗಳಿಸಿರುವ ದಿ ಕೇರಳ ಸ್ಟೋರಿ 2 ಕೊನೆಗೂ ಪ್ರದರ್ಶನ ಕಾಣುತ್ತಿದೆ. ಆದರೆ ಬಾಕ್ಸಾಫೀಸಿನಲ್ಲಿ ಹೇಳಿಕೊಳ್ಳುವಂತಹ ಗಳಿಕೆ ಮಾಡಿಲ್ಲ ಎಂದು ವರದಿಯಾಗಿದೆ.



