ಶಾಸಕ ವಿನಯ್ ಕುಲಕರ್ಣಿ ಕೊಲೆಗಾರ : ಶಿಕ್ಷೆ ಪ್ರಮಾಣ ಇಂದು ಪ್ರಕಟ
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಠಿಸಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಎದುರಾಗಿದ್ದ ಕೊಲೆ ಆರೋಪ ಸಾಬೀತಾಗಿದೆ. ಈ ಪ್ರಕರಣದ ವಿಚಾರಣೆ ಕೈಗೆತ್ತಕೊಂಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿ, ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರೀಕರ್ ಸೇರಿದಂತೆ 17 ಮಂದಿ ಆರೋಪಿಗಳನ್ನು ದೋಷಿ ಎಂದು ತೀರ್ಪು ಪ್ರಕಟಿಸಿದೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇಂದು ಘೋಷಿಸಲಿದೆ.
ಬರೋಬ್ಬರಿ 8 ವರ್ಷಗಳವರೆಗೆ ಈ ಕೊಲೆ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಕೊನೆಗೂ ತನ್ನ ಅಂತಿಮ ತೀರ್ಪು ಪ್ರಕಟಿಸಿದೆ. ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಶಾಸಕ ವಿನಯ್ ಕುಲಕರ್ಣಿ, ಕೋರ್ಟ್ನಲ್ಲೇ ಕುಸಿದುಬಿದ್ದು ಕಣ್ಣೀರು ಹಾಕಿದ್ದಾರೆ. ಕೋರ್ಟ್ನಲ್ಲೇ ಇದ್ದ ವಿನಯ್ ಕುಲಕರ್ಣಿ ಮಕ್ಕಳು ಕೂಡ ತಂದೆಯ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.
ಜೂನ್ 16, 2016ರಲ್ಲಿ ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಸಂಭವಿಸಿತ್ತು. ರಾಜಕೀಯ ದ್ವೇಷದ ಕೊಲೆ ಇದು ಎಂದಿದ್ದ ಪೊಲೀಸ್ ತನಿಖೆಯು 6 ಮಂದಿಯನ್ನು ಆರೋಪಿಗಳೆಂದು ಗುರುತಿಸಿತ್ತು. 2019ರಲ್ಲಿ ಈ ಕೊಲೆಯ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. 2020ರಲ್ಲಿ ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಬಳಿಕ ವಿನಯ್ ಕುಲಕರ್ಣಿ ಸೇರಿದಂತೆ 21 ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಘನಗೋರ ದುರಂತ: ಮೆರವಣಿಗೆಯ ಮೇಲೆಯೇ ಹರಿದ ಕಾರು; 7 ವರ್ಷದ ಬಾಲಕಿ ದುರ್ಮರಣ
ಇನ್ನು ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ತೀರ್ಪು ಪ್ರಕಟಗೊಳ್ಳುತ್ತಿದ್ದಂತೆಯೇ ಅವರ ಶಾಸಕ ಸ್ಥಾನಕ್ಕೂ ಕುತ್ತು ಎದುರಾಗಿದೆ. ಇಂದು ಕೋರ್ಟ್ನಲ್ಲಿ ತೀರ್ಪಿನ ಪ್ರಮಾಣ ಪ್ರಕಟಗೊಳ್ಳಲಿದ್ದು , ಯಾವುದೇ ಪ್ರಕರಣದಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಎದುರಾದರೆ ಶಾಸಕ ಸ್ಥಾನ ರದ್ದುಗೊಳ್ಳಲಿದೆ. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೀವಾವಧಿ ಇಲ್ಲವೇ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ದಟ್ಟವಾಗಿದ್ದು, ವಿನಯ್ ಕುಲಕರ್ಣಿಯ ರಾಜಕೀಯ ಭವಿಷ್ಯ ತೂಗುಗತ್ತಿಯಲ್ಲಿ ನಿಂತಿದೆ.



