ಡಾ ರಾಜ್‌ಕುಮಾರ್ ಅಭಿಮಾನಿಗಳ ಬಳಿ ಬೇಷರತ್ ಕ್ಷಮೆ ಯಾಚಿಸಿದ ಚೇತನ್ ಅಹಿಂಸ
Dr Rajkumar Memorial | Chetan Ahimsa: ಏಪ್ರಿಲ್ 24 ರಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಚೇತನ್, "ರಾಜ್‌ಕುಮಾರ್ ಅವರನ್ನು ಕಲಾವಿದರಾಗಿ ಗೌರವಿಸುತ್ತೇವೆ. ಆದರೆ 2006ರಲ್ಲಿ ಬೆಂಗಳೂರಿನ ಮಧ್ಯಭಾಗದಲ್ಲಿ ಒಬ್ಬ ನಟನ ಸಮಾಧಿ ಕಾಂಪ್ಲೆಕ್ಸ್‌ಗಾಗಿ 2.5 ಎಕರೆ ಭೂಮಿಯನ್ನು ನೀಡಿರುವುದು ಸರಿಯಾದ ನಿರ್ಧಾರವೇ? ಸರ್ಕಾರ ಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ನೀಡಬೇಕೇ ಹೊರತು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಲ" ಎಂದು ಪ್ರಶ್ನಿಸಿದ್ದರು
ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕಕ್ಕೆ (Dr Rajkumar Memorial) ಸರ್ಕಾರ ಜಾಗ ನೀಡಿರುವ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ (Chetan Ahimsa), ಅಭಿಮಾನಿಗಳ ತೀವ್ರ ಪ್ರತಿಭಟನೆಯ ನಂತರ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ವಿವಾದದ ಹಿನ್ನೆಲೆ:
ಏಪ್ರಿಲ್ 24 ರಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಚೇತನ್, “ರಾಜ್‌ಕುಮಾರ್ ಅವರನ್ನು ಕಲಾವಿದರಾಗಿ ಗೌರವಿಸುತ್ತೇವೆ. ಆದರೆ 2006ರಲ್ಲಿ ಬೆಂಗಳೂರಿನ ಮಧ್ಯಭಾಗದಲ್ಲಿ ಒಬ್ಬ ನಟನ ಸಮಾಧಿ ಕಾಂಪ್ಲೆಕ್ಸ್‌ಗಾಗಿ 2.5 ಎಕರೆ ಭೂಮಿಯನ್ನು ನೀಡಿರುವುದು ಸರಿಯಾದ ನಿರ್ಧಾರವೇ? ಸರ್ಕಾರ ಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ನೀಡಬೇಕೇ ಹೊರತು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಲ” ಎಂದು ಪ್ರಶ್ನಿಸಿದ್ದರು.
ಮನೆಗೆ ಮುತ್ತಿಗೆ ಹಾಕಿದ ಅಭಿಮಾನಿಗಳು:
ಈ ಹೇಳಿಕೆಯಿಂದ ಕೆರಳಿದ ರಾಜ್ ಅಭಿಮಾನಿಗಳು, ಸಾರಾ ಗೋವಿಂದು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇಂದು (ಏಪ್ರಿಲ್ 25) ಬೆಂಗಳೂರಿನಲ್ಲಿರುವ ಚೇತನ್ ಮನೆಗೆ ಮುತ್ತಿಗೆ ಹಾಕಿದರು. ಚೇತನ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಪೊಲೀಸ್ ದೂರುಗಳನ್ನು ದಾಖಲಿಸಿದ್ದರು.
ನಟ ಚೇತನ್ ಕ್ಷಮೆ:
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಚೇತನ್, ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಬಹಿರಂಗವಾಗಿ ಕ್ಷಮೆಯಾಚಿಸಿದರು. “ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಕ್ಷಮೆ ಕೇಳುತ್ತೇನೆ. ಯಾರ ಮನಸ್ಸನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ನಾನು ಕೂಡ ರಾಜ್‌ಕುಮಾರ್ ಅವರ ಅಭಿಮಾನಿ” ಎಂದು ಸ್ಪಷ್ಟಪಡಿಸಿದ್ದಾರೆ.
ಉದ್ಯೋಗಿಗಳ ಗಮನಕ್ಕೆ: 5 ವರ್ಷಕ್ಕಿಂತ ಮೊದಲು 5 ಲಕ್ಷ ರೂ PF ಹಿಂಪಡೆದರೆ 1.5 ಲಕ್ಷ ರೂ. ನಷ್ಟ ಸಂಭವ!
ಕನ್ನಡಪರ ಸಂಘಟನೆಗಳ ಮುಖಂಡರು ಮಾತನಾಡಿ, “ಈ ಸ್ಮಾರಕವನ್ನು ಸರ್ಕಾರವೇ ಗೌರವಾರ್ಥವಾಗಿ ನೀಡಿದೆ, ರಾಜ್‌ಕುಮಾರ್ ಕುಟುಂಬದವರು ಕೇಳಿದ್ದಲ್ಲ. 20 ವರ್ಷಗಳ ಹಳೆಯ ವಿಷಯವನ್ನು ಕೇವಲ ಪ್ರಚಾರಕ್ಕಾಗಿ ಚೇತನ್ ಈಗ ಎತ್ತಿದ್ದಾರೆ” ಎಂದು ಟೀಕಿಸಿದ್ದಾರೆ. ಚೇತನ್ ಕ್ಷಮೆ ಕೇಳುವ ಮೂಲಕ ಸದ್ಯಕ್ಕೆ ಈ ವಿವಾದ ತಣ್ಣಗಾಗಿದೆ.



