ರಾಜ್ಯಕ್ಕೆ ಎದುರಾಯ್ತು ವರುಣನ ಭೀತಿ: ಮುಂದಿನ 2 ದಿನ 17 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ – ಹಲವೆಡೆ ಆರೆಂಜ್ ಅಲರ್ಟ್!
ಮುಂದಿನ 48 ಗಂಟೆ ರಾಜ್ಯದ 17 ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಗುಡುಗು ಹಾಗೂ ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಬಿಸಿಲ ಬೇಗೆಯಲ್ಲಿ ಬವಳಿದ್ದ ರಾಜ್ಯದ ಜನತೆಗೆ ಸಂತಸದ ಸುದ್ದಿ ದೊರಕಿದಂತಾಗಿದೆ. ರಾಜ್ಯದ 17 ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳಲ್ಲಿ ಆಲಿಕಲ್ಲು ಸಗಿತ ಭಾರೀ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮಿಂಚು ಹಾಗೂ ಗುಡುಗಿನ ಆರ್ಭಟ ಕೂಟ ಹೆಚ್ಚಿರಲಿದ್ದು ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಲಾಗಿದೆ .
ಇದನ್ನೂ ಓದಿ : ಭಾರತವೇ ಈಗ ‘ಹಾಟ್ ಸ್ಪಾಟ್’: ವಿಶ್ವದ ನೂರು ಅತಿ ಹೆಚ್ಚು ತಾಪಮಾನದ ನಗರಗಳಲ್ಲಿ 98 ನಮ್ಮವೇ!
ಇನ್ನುಳಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಿರಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜೊತೆಯಲ್ಲಿ ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಮಳೆ ಬರುವ ಸಂದರ್ಭದಲ್ಲಿ ಕಟ್ಟಡಗಳ ಕೆಳಗೆ, ಮರಗಳ ಬದಿಯಲ್ಲಿ ಆಶ್ರಯ ಪಡೆಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.



