ಸರ್ಕಾರದ ಮನವಿಗೂ ಬಗ್ಗದ ಇಂಡಿಗೋ: ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಸಂಚಾರ ಸ್ಥಗಿತ
ಶಿವಮೊಗ್ಗ ಟು ಬೆಂಗಳೂರು ವಿಮಾನಯಾನ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

ರಾಜ್ಯರಾಜಧಾನಿಯಿಂದ ಮಲೆನಾಡು ಭಾಗಕ್ಕೆ ವಿಮಾನಯಾನ ಸೇವೆಯನ್ನು ಕಲ್ಪಿಸುವ ಮೂಲಕ ರಾಜ್ಯದ ಮಲೆನಾಡಿಗರ ಪ್ರಯಾಣ ಸುಗಮಗೊಳಿಸಿದ್ದ ಇಂಡಿಗೋ ವಿಮಾನಯಾನ ಸಂಸ್ಥೆ ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ನೀಡಿರುವ ಸೂಚನೆಯ ಆಧಾರದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯು ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಹಾರಾಟ ನಡೆಸುತ್ತಿದ್ದ ವಿಮಾನಯಾನವನ್ನು ಬಂದ್ ಮಾಡಿದೆ.
ಮುಂದಿನ ಮೂರು ತಿಂಗಳುಗಳಿಗೆ ಅನ್ವಯವಾಗುವಂತೆ ಶಿವಮೊಗ್ಗ ಟು ಬೆಂಗಳೂರು ವಿಮಾನಯಾನ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ. ಮಲೆನಾಡು ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ವಿಮಾನಯಾನವನ್ನು ನಿಲ್ಲಿಸದಂತೆ ರಾಜ್ಯ ಸರ್ಕಾರ ಹಲವು ಬಾರಿ ಇಂಡಿಗೋ ಸಂಸ್ಥೆ ಬಳಿ ಮನವಿ ಮಾಡಿತ್ತು. ಅಲ್ಲದೇ ಇದು ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ಮಾರ್ಗ ಕೂಡ ಆಗಿತ್ತು. ಆದರೆ ಪೈಲಟ್ಗಳ ಕೊರತೆಯಿಂದಾಗಿ ಇಂಡಿಗೋ ಈ ನಿರ್ಧಾರಕ್ಕೆ ಬಂದಿದೆ. ಕೇವಲ ಶಿವಮೊಗ್ಗ ಮಾತ್ರವಲ್ಲದೇ ಕಡಿಮೆ ದೂರ ಹೊಂದಿರುವ ಅನೇಕ ವಿಮಾನಯಾನಗಳನ್ನು ಬಂದ್ ಮಾಡಲಾಗಿದೆ.
ಬೆಂಗಳೂರು ಟು ಶಿವಮೊಗ್ಗ ವಿಮಾನಯಾನ ಉಡಾನ್ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ವಯೋಬಲಿಟಿ ಗ್ಯಾಪ್ ಫಂಡಿಂಗ್ ಒಪ್ಪಂದದೊಂದಿಗೆ ಪ್ರತಿ ಟಿಕೆಟ್ 500 ರೂಪಾಯಿ ಸಹಾಯಧನ ನೀಡುತ್ತಿತ್ತು. ಈ ಒಪ್ಪಂದ ಕಳೆದ ವರ್ಷ ಅಗಸ್ಟ್ ತಿಂಗಳಲ್ಲೇ ಮುಕ್ತಾಯಗೊಂಡಿದೆ. ಆದರೆ ಇಲ್ಲಿಯವರೆಗೂ ನಷ್ಟದ ಜೊತೆಯೇ ಇಂಡಿಗೋ ವಿಮಾನಯಾನ ಸೇವೆ ಮುಂದುವರಿಸಿಕೊಂಡು ಬಂದಿತ್ತು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಸಂಸ್ಥೆ ಹೈದರಾಬಾದ್, ಗೋವಾ ಹಾಗೂ ತಿರುಪತಿಗೆ, ಸ್ಪೈಸ್ ಜೆಟ್ ಸಂಸ್ಥೆ ಶಿವಮೊಗ್ಗದಿಂದ ಹೈದರಾಬಾದ್ ಹಾಗೂ ಚೆನ್ನೈಗೆ ನಿತ್ಯ ವಿಮಾನ ಓಡಾಟ ನಡೆಸುತ್ತಿವೆ. ಆದರೆ ಇದೀಗ ರಾಜ್ಯ ರಾಜಧಾನಿಗೆ ಇದ್ದ ವಿಮಾನಯಾನ ಬಂದ್ ಆಗಿದೆ. ಇದು ಭವಿಷ್ಯದಲ್ಲಿ ಪುನಾರಂಭಗೊಳ್ಳುತ್ತಾ ಇಲ್ಲವಾ ಅನ್ನೋದನ್ನ ಕಾದು ನೋಡಬೇಕಿದೆ.



