ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನ: ಕಂಬನಿ ಮಿಡಿದ ವಿರಾಟ್ ಕೊಹ್ಲಿ
ಕೇವಲ 36ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿರುವುದು ಕ್ರೀಡಾಭಿಮಾನಿಗಳಿಗೆ ಮತ್ತು ಸಹ ಆಟಗಾರರಿಗೆ ದೊಡ್ಡ ಆಘಾತ ತಂದಿದೆ.

ಭಾರತೀಯ ಕ್ರಿಕೆಟ್ ವಲಯದಲ್ಲಿ ದುಃಖದ ಛಾಯೆ ಆವರಿಸಿದೆ. ಪಂಜಾಬ್‌ನ ಮಾಜಿ ವೇಗಿ ಹಾಗೂ ಐಪಿಎಲ್ ಆಟಗಾರ 36 ವರ್ಷದ ಅಮನ್‌ಪ್ರೀತ್ ಸಿಂಗ್ ಗಿಲ್ ಗುರುವಾರ ಹಠಾತ್ ನಿಧನರಾಗಿದ್ದಾರೆ. ಕೇವಲ 36ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿರುವುದು ಕ್ರೀಡಾಭಿಮಾನಿಗಳಿಗೆ ಮತ್ತು ಸಹ ಆಟಗಾರರಿಗೆ ದೊಡ್ಡ ಆಘಾತ ತಂದಿದೆ.
ಅಮನ್‌ಪ್ರೀತ್ ಸಿಂಗ್ ಅವರು ವಿರಾಟ್ ಕೊಹ್ಲಿ ನಾಯಕತ್ವದ ಅಂಡರ್-19 ತಂಡದ ಪ್ರಮುಖ ಭಾಗವಾಗಿದ್ದರು. ಕಿರಿಯರ ತಂಡದಲ್ಲಿದ್ದಾಗಲೇ ತಮ್ಮ ಶಿಸ್ತುಬದ್ಧ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಅವರು, ನಂತರ ಐಪಿಎಲ್‌ನಲ್ಲಿ ‘ಕಿಂಗ್ಸ್ ಇಲೆವೆನ್ ಪಂಜಾಬ್’ ತಂಡವನ್ನು ಪ್ರತಿನಿಧಿಸಿದ್ದರು.ಪ್ರಮುಖ ಜವಾಬ್ದಾರಿಯಲ್ಲಿದ್ದರುದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡದ ಪರ ಮಿಂಚಿದ್ದ ಅಮನ್‌ಪ್ರೀತ್, ನಿವೃತ್ತಿಯ ನಂತರವೂ ಕ್ರಿಕೆಟ್‌ನಿಂದ ದೂರ ಉಳಿದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ಪಂಜಾಬ್ ಕ್ರಿಕೆಟ್‌ನ ಹಿರಿಯ ಆಯ್ಕೆಗಾರರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದರು.
ಗೆಳೆಯ ಹಾಗೂ ಸಹ ಆಟಗಾರನ ಸಾವಿಗೆ ಕಿಂಗ್ ಕೊಹ್ಲಿ ಮತ್ತು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವಿವರ ಹಂಚಿಕೊಂಡಿದ್ದು “ಈ ಸುದ್ದಿ ಕೇಳಿ ತುಂಬಾ ನೋವಾಗಿದೆ. ಅವರ ಕುಟುಂಬಕ್ಕೆ ದೇವರು ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಇತ್ತ ಯುವರಾಜ್ ಸಿಂಗ್ ಕೂಡ ಟ್ವೀಟ್ ಮಾಡಿದ್ದು “ಅಮನ್‌ಪ್ರೀತ್ ಒಬ್ಬ ಕಠಿಣ ಪರಿಶ್ರಮಿ. ನಾವು ಡ್ರೆಸಿಂಗ್ ರೂಮ್ ಹಂಚಿಕೊಂಡ ದಿನಗಳು ನೆನಪಾಗುತ್ತಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.ಎಂದು ಬರೆದುಕೊಂಡಿದ್ದಾರೆ. ಅಮನ್ ಪ್ರೀತ್ ಸಾವಿಗೆ ನಿಖರ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಒಬ್ಬ ಪ್ರತಿಭಾನ್ವಿತ ಆಟಗಾರ ಹಾಗೂ ದಕ್ಷ ಆಯ್ಕೆಗಾರನನ್ನು ಕಳೆದುಕೊಂಡು ಪಂಜಾಬ್ ಕ್ರಿಕೆಟ್ ಮಂಡಳಿ ಕಂಬನಿ ಮಿಡಿದಿದೆ.



